ಇತರರನ್ನು ಸದ್ದಿಲ್ಲದೆ ಖುಷಿಯಾಗಿ ಇರಿಸುವವರು ಒಂಟಿಗಳಾಗಿರ್ತಾರ? ಇಲ್ಲಿದೆ ಉತ್ತರ...!




 


ಪ್ರೇಕ್ಷಕರನ್ನು ಹಿಡಿದಿಕೊಳ್ಳುವಂಥ ಕಥೆ ಮತ್ತು ನಿರೂಪಣೆ ಎಷ್ಟು ಕಷ್ಟ ಅಂತ ಇತ್ತೀಚೆಗೆ ನಮ್ಮೂರಲ್ಲಿ ನಡೆದ ಒಂದು ಅತ್ಯಂತ ನೀರಸ ಹಾಗೂ ಚರ್ವಿತಚರ್ವಣದ ಹಾಸ್ಯಾಸ್ಪದ ನಾಟಕ ನೋಡಿ ರೋಸಿ ಹೋದಾಗ ಬಲವಾಗಿ ಅನ್ನಿಸಿತ್ತು. ನಂತರದ ಸಂದರ್ಭದಲ್ಲೇ ನೋಡಲು ಸಿಕ್ಕಿದ ಮಲಯಾಳಂ ಸಿನಿಮಾ priyan ottathilanu

ಈ ಮಲಯಾಳಂ ನಿರ್ದೇಶಕರು ಎಷ್ಟು ಪುಟ್ಟ ಪುಟ್ಟ ವಿಚಾರಗಳನ್ನು ಎಷ್ಟು ಪರಿಣಾಮಕಾರಿಯಾಗಿ ಹಾಗೂ ಇಲ್ಲೇ ಸುತ್ತಮುತ್ತ ಎಂತದ್ದೋ ಸಂಭವಿಸಿತು ಎಂಬಷ್ಟು ಸಹಜವಾಗಿ ನಿರೂಪಿಸುತ್ತಾರೆ ಎಂಬುದಕ್ಕೆ ಮತ್ತೊಂದು ನಿದರ್ಶನ ಈ ಸಿನಿಮಾ. ಭಯಂಕರ ಕಥೆಯೋ, ಭೀಕರ ಹೊಡೆದಾಟವೋ, ಪುಳಕ ಹುಟ್ಟಿಸುವ ಪ್ರಣಯವೋ, ತಲ್ಲೀನವಾಗಿಸುವ ಗಂಭೀರ ಹಾಡುಗಳೋ ಎಂಥದ್ದೂ ಇಲ್ಲದ ಸರಳ, ಸಹಜ ಕಥೆ. ಟಿಪಿಕಲ್ ಮಲಯಾಳಂ ಸಿನಿಮಾ ಇಷ್ಟ ಪಡುವವರಿಗೆ ತುಂಬ ಇಷ್ಟವಾಗಬಹುದಾದ ಕಥೆ. ಇತರರ ಖುಷಿಯಲ್ಲೇ ತನ್ನ ಖುಷಿ ಕಾಣುವ ಒಬ್ಬ ಫ್ಯಾಮಿಲಿ ಮ್ಯಾನ್ ಹೋಮಿಯೋಪಥಿ ಡಾಕ್ಟ್ರ ದೊಡ್ಡ ಕನಸೊಂದು ನೆರವೇಬೇಕಾದ ದಿವಸ ಅವರು ಬೇರೆಯವರಿಗೆ ಉಪಕಾರ ಮಾಡಲು ಹೋಗಿ ಎಂಥೆಂಥಾ ಫಚೀತಿಗೆ ಸಿಲುಕುತ್ತಾರೆ ಎಂಬುದು ಕಥೆಯ ಒಂದು ವಾಕ್ಯದ ಸಾರಾಂಶ.

 

ಇಡೀ ಸಿನಿಮಾದಲ್ಲಿ ಪಾತ್ರಧಾರಿಗಳ ಆಯ್ಕೆ, ಬಿಗಿಯಾದ ಕಥೆ, ನಿರೂಪಣೆ, ಹಾಗೂ ಕೊನೆಯ ಸುಮಾರು 15 ನಿಮಿಷಗಳ ಪರಿಣಾಮಕಾರಿ ಮುಕ್ತಾಯ ಇಷ್ಟೂ ಕೂಡಾ ನಮ್ಮನ್ನು ತುಂಬ ಕಾಡುತ್ತದೆ. ಯಾವುದೇ ಗಿಮಿಕ್ಕು, ಹೀರೋಯಿಸಂ, ನಗೆಯೇ ಬಾರದ ಹಾಸ್ಯ, ಪಂಚಿಂಗ್ ಡೈಲಾಗು ಎಂಥದ್ದೂ ಇಲ್ಲದೆ ಸಿನಿಮಾವೊಂದು ನೋಡಿಸಿಕೊಂಡು ಹೋಗುತ್ತದೆ ಎಂಬುದೇ ಈ ಸಿನಿಮಾದ ಹೆಗ್ಗಳಿಕೆ.

 

ಮಲಯಾಳಂ ಸಿನಿಮಾಗಳಲ್ಲಿ ಗಮನಿಸಿದ ಅಂಶ ಎಂದರೆ ಪೋಷಕ ಪಾತ್ರ ಮಾಡುವ 10-15ಕ್ಕೂ ಮಿಕ್ಕಿ ಯುವಕರಿದ್ದಾರೆ, ಅವರೆಲ್ಲ ಹೀರೋ ರೋಲ್ ಕೊಟ್ರೂ ಅಷ್ಟೇ ಚಂದಕೆ ನಿಭಾಯಿಸ್ತಾರೆ.... ಕಥೆಗೆ ಟ್ವಿಸ್ಟ್ ಕೊಡುವಂಥಹ ತಂದೆ, ಪೊಲೀಸ್, ಕಮಿಷನರ್, ಮುಖ್ಯಮಂತ್ರಿ ಇತ್ಯಾದಿ ಪಾತ್ರಗಳನ್ನು ನಿಭಾಯಿಸಬಲ್ಲ ಅಷ್ಟೇ ಸಂಖ್ಯೆಯ ಹಿರಿಯ ಕಲಾವಿದರಿದ್ದಾರೆ. ಅವರು 5-10 ನಿಮಿಷಗಳಲ್ಲಿ ಬಂದು ಹೋಗುವ ಪುಟ್ಟ ರೋಲ್ ಕೊಟ್ರೂ ಅಷ್ಟೇ ಜವಾಬ್ದಾರಿಯುತವಾಗಿ ನಿಭಾಯಿಸ್ತಾರೆ. ಅಂಟೋನಿ ಸೋನಿ ನಿರ್ದೇಶಿಸಿದ ಈ ಸಿನಿಮಾದ ಹೀರೋ ಶರ್ಫುರುದ್ದೀನ್. ನಿಳಾ ಉಷಾ, ಅಪರ್ಣಾ ದಾಸ್ ಪ್ರಧಾನ ನಟಿಯರು. ಬಿಜು ಸೋಪಾನಂ, ಜೆಫರ್ ಇಡುಕ್ಕಿ, ಹರಿಸ್ರೀ ಅಶೋಕನ್ ಪಾತ್ರಗಳು ತುಂಬ ಕಾಡುತ್ತವೆ ಎಂದಿನಂತೆ...!

ಬದುಕಿನಲ್ಲಿ ನಾನು ದೊಡ್ಡ ದೊಡ್ಡ ಸಾಧನೆ ಮಾಡಿಲ್ಲ... ಬೇರೆಯವರನ್ನು ಖುಷಿಯಾಗಿರಿಸುವ ಮೌನಿಗಳೆಲ್ಲ, ನೇಪಥ್ಯದ ದಾನಿಗಳೆಲ್ಲ ಸ್ವತಃ ತಾವು ಖುಷಿಯಾಗಿರುವುದಿಲ್ಲ ಎಂಬ ಋಣಾತ್ಮಕ ಕಲ್ಪನೆ ಇರುವವರು, ನಿರಾಶಾವಾದಿಗಳು ಖಂಡಿತಾ ಈ ಸಿನಿಮಾ ನೋಡಲೇಬೇಕು. ಅಷ್ಟರಮಟ್ಟಿಗೆ ಸ್ಫೂರ್ತಿ ತುಂಬುವಂತಹ ಕತೆ ಇಲ್ಲಿದೆ...

ಅಂದ ಹಾಗೆ ಈ ಸಿನಿಮಾ OTT ವೇದಿಕೆ amazon prime videoದಲ್ಲಿ ಲಭ್ಯ....

ಅಷ್ಟಕ್ಕೂ ಯಾಕೆ ಮಲಯಾಳಂ ಸಿನಿಮಾ ಇಷ್ಟವಾಗುತ್ತದೆ ಅಂತ ನಾನು ಒಂದಿಷ್ಟು ಕಾರಣಗಳನ್ನು ಪಟ್ಟಿ ಮಾಡಿದ್ದೇನೆ. ನಿಮ್ಮಲ್ಲೂ ಹಲವು ಕಾರಣಗಳಿರಬಹುದು. ಚಂದವಾಗಿದ್ದನ್ನು, ಇಷ್ಟವಾಗಿದ್ದನ್ನು ಇಷ್ಟ ಅಂತಲೇ ಹೇಳದೇ ನಿರ್ವಾಹವಿಲ್ಲ. ಹಾಗಾಗಿ ಯಾಕೆ ಅವರು ಕೇರಳದ ಗಡಿ ದಾಟಿ ಇತರರಿಗೆ ಇಷ್ಟವಾಗುತ್ತಾರೆ ಎಂದರೆ...

1)      ವೈಭವೀಕರಣ ತುಂಬ ಕಮ್ಮಿ. ಎಲ್ಲವೂ ತುಂಬ ಸರಳ ಹಾಗೂ ಸಹಜವಾಗಿರುತ್ತದೆ.

2)      ಹೀರೋಗೋಸ್ಕರ ಕಥೆ ಬರೆದಿದ್ದಾರೆ ಅನ್ನಿಸುವುದಿಲ್ಲ. ಕಥೆಯನ್ನು ನೋಡಿ ಪಾತ್ರಧಾರಿಗಳನ್ನು ಆರಿಸುತ್ತಾರೆ ಅನ್ನಿಸುತ್ತದೆ. ಆಗಲೇ ಹೇಳಿದ ಹಾಗೆ, ದೊಡ್ಡ ದೊಡ್ಡ ಕಲಾವಿದರೂ ಪುಟ್ಟ ಪುಟ್ಟ ಪಾತ್ರಗಳನ್ನು ನಿರ್ವಹಿಸುವ ಮೂಲಕ ಇಡೀ ಸೀನಿಮಾದ ತೂಕವನ್ನು ಮೇಲೆತ್ತಿ ನಿಲ್ಲಿಸುತ್ತಾರೆ.

3)      ಬಹುತೇಕ ಸಿನಿಮಾಗಳಲ್ಲಿ ಪಂಚಿಂಗ್ ಡೈಲಾಗೋ, ಹೊಡೆದಾಟವೋ, ಒಬ್ಬನೇ 150 ಮಂದಿಯನ್ನು ಬಡಿದು ಚಚ್ಚುವಂಥಹ, ಕೊಲ್ಲುವಂಥಹ ವಿಚಾರಗಳನ್ನೇ ಪ್ರಧಾನವಾಗಿ ಇರಿಸಿರುವುದಿಲ್ಲ. ಹೊಡೆದಾಟವೇ ಇಲ್ಲವೆಂದಲ್ಲ. ಕಡುವಾದಂತಹ, ಕೋಶಿಯುಂ ಅಯ್ಯಪ್ಪನುಂ ನಂತಹ ಸಿನಿಮಾಗಳಲ್ಲಿ ಹೊಡೆದಾಟಗಳಿವೆ. ಆದರೆ, ಅದರಲ್ಲೂ ಒಂದು ಸಹಜತೆ ಇದೆ, ಇರುತ್ತದೆ ಎಂಬುದು ನನ್ನ ಅನಿಸಿಕೆ.

4)      ಅವರು ಕುಟುಂಬ ಜೀವನಕ್ಕೆ, ಸ್ನೇಹಕ್ಕೆ ತುಂಬಾ ತುಂಬಾ ಮಹತ್ವ ನೀಡುತ್ತದೆ. ಬಹುತೇಕ ಎಲ್ಲ ಸಿನಿಮಾದಲ್ಲೂ ತರವಾಡು ಮನೆ, ಅಪ್ಪ ಅಮ್ಮ, ಕೂಡು ಕುಟುಂಬ, ಒಂದೇ ಡೈನಿಂಗ್ ಟೇಬಲ್ಲಿನಲ್ಲಿ ಮನೆ ಮಂದಿ ಒಟ್ಟಿಗೆ ಕುಳಿತು ಉಣ್ಣುವುದು, ಕಷ್ಟ ಕಾಲದಲ್ಲಿ ಕೈ ಬಿಡದ ಸ್ನೇಹಿತ... ಬೇಸರದಲ್ಲಿ ಸಾಂತ್ವನ ಹೇಳುವ ತಂಗಿ ಇತ್ಯಾದಿ.. ಸೆಂಟಿಮೆಂಟುಗಳನ್ನು ತುಂಬ ಮನೋಜ್ಞವಾಗಿ ತೋರಿಸುತ್ತಲೇ ಇರುತ್ತಾರೆ.

5)      ಹಳ್ಳಿಯನ್ನು, ಅಲ್ಲಿನ ಮನೆಗಳನ್ನು, ಹಿನ್ನೀರನ್ನು, ರಬ್ಬರ್ ತೋಟವನ್ನು, ತೊರೆಯನ್ನು, ಘಾಟ್ ಸೆಕ್ಷನಿನ ರಸ್ತೆಗಳನ್ನು, ಮಳೆಯನ್ನು, ಮಂಜನ್ನು, ಕುಪ್ಪಿ ಗ್ಲಾಸಿನಲ್ಲಿ ಕುಡಿಯುವ ಕಟ್ಟಂ ಚಹಾವನ್ನು ಮಲಯಾಳಂ ಸಿನಿಮಾದಲ್ಲಿ ಹುಚ್ಚು ಹಿಡಿಸುವಷ್ಟು ಚಂದಕೆ ತೋರಿಸ್ತಾರೆ. ಒಂದು ಒತ್ತಡ ಕಳೆಯಲು, ಒಂದಷ್ಟು ರಂಜನೆ ಪಡೆಯಲು ಸಿನಿಮಾ ನೋಡ ಬಯಸುವವರಿಗೆ ಮಲಯಾಳಂ ಸಿನಿಮಾಗಳಲ್ಲಿ ಕಾಣಿಸುವ ಪ್ರಶಾಂತ ವಾತಾವರಣ, ಹರಿಯುವ ನೀರು, ಜೀರುಂಡೆ ಸದ್ದು, ತೊಟ್ಟಿಕ್ಕುವ ಮಳೆ ನೀರು... ಇವೆಲ್ಲ ತುಂಬ ಆಪ್ತವಾಗುತ್ತವೆ. ಅಂತಹ ಊರುಗಳಿಗೊಮ್ಮೆ ಹೋಗಿ ಬರೋಣ ಅನ್ನಿಸುವಷ್ಟರ ಮಟ್ಟಿಗೆ ಆ ದೃಶ್ಯಗಳು ನಮ್ಮನ್ನು ಕಾಡುತ್ತವೆ.

6)      ಬಡವರನ್ನು ಬಡವರಾಗಿಯೇ, ಶ್ರೀಮಂತರನ್ನು ಶ್ರೀಮಂತರನ್ನಾಗಿಯೇ ತೋರಿಸುತ್ತಾರೆ. ಸರಳ ಲುಂಗಿ,ಹವಾಯಿ ಚಪ್ಪಲಿ, ಮಹೀಂದ್ರ ಜೀಪು, ಹಳೆ ಸೈಕಲ್ಲು, ಚೇತಕ್ ಸ್ಕೂಟರು, 800 ಕಾರು, ಎಣ್ಣೆ ಬತ್ತಿಯ ದೀಪ, ದಪ್ಪ ಕನ್ನಡಕ ಹೀಗೆ... ಆಯಾ ದೃಶ್ಯಗಳಿಗೆ ಸಹಜವಾಗಿ ಏನು ಬೇಕೋ ಅಂಥದ್ದೇ ಪ್ರಾಪರ್ಟಿಗಳು, ಉಡುಪುಗಳ ಕಾಣಿಸುತ್ತವೆ. ಹಾಗಾಗಿ ಇಲ್ಲಿಯೇ ಸುತ್ತಮುತ್ತ ಸಂಭವಿಸಿದ ಕತೆಯೇನೋ ಎಂಬಷ್ಟರ ಮಟ್ಟಿಗೆ ದೃಶ್ಯಗಳು ನಮ್ಮನ್ನು ಸುತ್ತುವರಿಯುತ್ತವೆ.

7)      ಪುಟ್ಟ ಪುಟ್ಟ ದೃಶ್ಯಗಳಲ್ಲಿ ಸಹಜತೆ ತರಲು ಅವರು ಶ್ರಮಿಸುವ ರೀತಿ ಅದ್ಭುತ. ಹಳ್ಳಿಯ ತರವಾಡು ಮನೆಯನ್ನೇ ತೆಗೆದುಕೊಳ್ಳಿ. ಸಾರಣೆ ಮಾಡಿದ ಕಾವಿ ಹಾಕಿದ ನುಣುಪು ನೆಲ, ಹೆಂಚಿನ ಛಾವಣಿ, ಬಲೆಗಟ್ಟಿದ ಸ್ಟೋರ್ ರೂಂ, ಹೊಗೆಯಾಡುವ ಬಚ್ಚಲು ಮನೆ, ಉಪ್ಪರಿಗೆಯ ಮರದ ಕಿಟಕಿ, ಪಾಚಿ ಗಟ್ಟಿದ ನೀರಿನ ಟ್ಯಾಪು, ಹುಲುಸಾಗಿ ಬೆಳೆದ ಹುಲ್ಲು, ರಥಪುಷ್ಪದ ಹೂವು, ಪಾರಿಜಾತದ ವೃಕ್ಷ, ಸವೆದು ಹೋದ ಕಾಂಪೌಂಡಿನ ತುದಿ, ಬಣ್ಣಗೆಟ್ಟ ಗೇಟು, ಕೆಂಪುಕಲ್ಲಿನಿಂದ ಕಟ್ಟಿದ ದನದ ಕೊಟ್ಟಿಗೆ, ಮಾಸಲು ಕನ್ನಡಿ, ಒಡೆದ ಬೇಸಿನ್ನು... ಹೀಗೆ ಸಹಜವಾಗಿ ಮನೆಗಳಲ್ಲಿ ಹೇಗ್ಹೇಗೆ ಇರುತ್ತದೋ ಹಾಗ್ಹಾಗೇ ತೋರಿಸ್ತಾರೆ. ಅದನ್ನೇ ಹೇಳಿದ್ದು ಎಲ್ಲವೂ ಸಹಜ ಅಂತ.

8)      ಸಿನಿಮಾದ ಕೊನೆಗೆ ಭಯಂಕರ ಮೆಸೇಜು, ಪ್ರಾಸಬದ್ಧ ಡೈಲಾಗು ಇತ್ಯಾದಿಗಳಿಂದ ವೈಭವೀಕರಿಸುವುದಿಲ್ಲ. ನೀತಿಯೋ, ಸಂದೇಶವೋ, ಭಾವನೆಯೋ ಕಥೆಯ ಜೊತೆ ಜೊತೆಗೇ ಸಾಗುತ್ತದೆ. ಇತ್ತೀಚೆಗೆ ತೆರೆ ಕಂಡ ಸುಂದರಿ ಗಾರ್ಡನ್ ನಂತಹ ಸಿನಿಮಾಗಳಲ್ಲಿ ತೀರಾ ಆಳವಿರುವ ಕಥೆಯೇ ಇಲ್ಲದಿದ್ದರೂ ಕಥೆಯ ನಿರೂಪಣೆ, ಪಾತ್ರಗಳನ್ನು ಕಟ್ಟಿಕೊಡುವ ರೀತಿ ಹಾಗೂ ಚಿತ್ರೀಕರಣ ಹಾಗೂ ಮುಖದ ಭಾವನೆ, ಬೆಳಕು ಮತ್ತು ಮೌನಗಳು ಸಹಿತ ಇಡಿ ಸಿನಿಮಾದ ನಿರೂಪಣೆಯತ್ತ ನಮ್ಮನ್ನು ಆಕರ್ಷಿಸಿ ಹಿಡಿದಿಟ್ಟುಕೊಳ್ಳುತ್ತವೆ ಅಲ್ವ?

9)      ಸಿನಿಮಾದ ಹೆಸರುಗಳನ್ನೇ ಗಮನಿಸಿ... ತೀರಾ ಪ್ರಚೋದನಕಾರಿಯೋ, ಅಥವಾ ಭಯಂಕರ ಆಕರ್ಷಕವೋ ಅನ್ನಿಸುವಂಥಹ ಹೆಸರುಗಳನ್ನೇನೂ ಅವರು ಕೊಡುತ್ತಾರೆ ಅಂತ ನನಗೆ ಅನ್ನಿಸುವುದಿಲ್ಲ. ಅಸಲಿಗೆ ನಾನು ನೋಡಿದ ತುಂಬ ಸಿನಿಮಾಗಳ ಹೆಸರುಗಳೇ ಕೆಲ ದಿನಗಳ ಬಳಿಕ ಆ ಕ್ಷಣಕ್ಕೆ ನನಗೆ ನೆನಪಿಗೆ ಬರುವುದಿಲ್ಲ. ಹೆಸರು ನೋಡಿ ನಾನು ಸಿನಿಮಾ ನೋಡುವುದೂ ಇಲ್ಲ. ಹೆಸರು, ಹೀರೋ, ಎಲ್ಲಿ ಚಿತ್ರೀಕರಣವಾಯಿತು ಎಂಬುದಕ್ಕಿಂತಲೂ ನಿರೂಪಣೆ ಹಾಗೂ ಸಹಜತೆಯೇ ಮಲಯಾಳಂ ಸಿನಿಮಾಗಳನ್ನು ಕೇರಳದ ಗಡಿ ದಾಟಿಸಿ ಆಚೆ ಕೊಂಡು ಹೋಗಿರುವುದು.

10)   ಸಣ್ಣ ಸಣ್ಣ ಸಬ್ಜೆಕ್ಟು... ತೀರಾ ಸೂಕ್ಷ್ಮವಾದ ಮನೋವೈಜ್ಞಾನಿಕ ವಿಚಾರ, ತೀರಾ ಇತ್ತೀಚಿನ ವೈಜ್ಞಾನಿಕ, ಆರ್ಥಿಕ ಬೆಳವಣಿಗೆಗಳು, ಸಣ್ಣದೊಂದು ಸಂಭವ, ಪುಟ್ಟದೊಂದು ಎಳೆಯನ್ನೇ ಇಟ್ಟುಕೊಂಡು ಅವರು ಸಿನಿಮಾ ಮಾಡುತ್ತಾರೆ. ಇವರಿಗೆ ಇಂತಹ ಸಬ್ಜೆಕ್ಟು ಎಲ್ಲಿ ಸಿಗ್ತದೆ ಅಂತ ಬಹಳಷ್ಟು ಸಲ ಅನ್ನಿಸುವುದಿದೆ... ಇಷ್ಟವಾಗದ ಒಂದೇ ಅಂಶ ಎಂದರೆ ಸಿನಿಮಾದುದ್ದಕ್ಕೂ ಕಂಠಪೂರ್ತಿ ಕುಡಿದು ಕುಡಿದು ಕಂಗೆಡಿಸುವುದು ಅಷ್ಟೇ...


ಏನೇ ಇರಲಿ ಸಹಜವಾಗಿರುವುದೇ ಸುಂದರ... ಏನಂತೀರಿ
?!

-ಕೃಷ್ಣಮೋಹನ ತಲೆಂಗಳ (08.09.2022)


1 comment:

ಬಲರಾಮ ಭಟ್, ಮಧೂರು said...

ಸತ್ಯ ಹೇಳಿದ್ದೀರಿ ಸರ್. ಮಲಯಾಳಂ ಸಿನಿಮಾಗಳು ಆಪ್ಯ ಆಗುವುದೇ ಈ ಕಾರಣದಿಂದ.