ಕಳೆದುಹೋಗುತ್ತಿರುವ ಭಾವಗಳನ್ನೂ ವಸ್ತು ಪ್ರದರ್ಶನದಲ್ಲಿ ಕಾಣುವ ದಿನಗಳು ದೂರವಿಲ್ಲ!

 


ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಉತ್ಸವದ ವಸ್ತುಪ್ರದರ್ಶನದಲ್ಲಿ ಇರಿಸಿದ್ದ ಕೆಲವು ವಸ್ತುಗಳು ಬಹಳಷ್ಟು ಗಮನ ಸೆಳೆದವು. ಬ್ಯಾಟರಿ ಹಾಕುವ ಟಾರ್ಚು ಲೈಟು, ಗ್ಯಾಸ್ ಲೈಟು, ಟೈಪ್ ರೈಟರು ಮೆಷಿನ್ನು, ಕಾಯಿನ್ ಫೋನು, ಗ್ಯಾಸ್ ಲೈಟು, 25 ಪೈಸೆ,5 ಪೈಸೆ, ಹತ್ತು ಪೈಸಿ, 2 ರುಪಾಯಿಯ ನೋಟು ಇತ್ಯಾದಿ... ಇತ್ಯಾದಿ... ಇವೆಲ್ಲ ಸುಮಾರು 2 ದಶಕಗಳ ಹಿಂದೆ ನಮ್ಮ ಮನೆಯಲ್ಲಿ, ಕಿಸೆಯಲ್ಲಿ, ಬ್ಯಾಗುಗಳಲ್ಲಿ ಇದ್ದಂಥಹ ವಸ್ತುಗಳು!!! ಇವತ್ತು ಮಕ್ಕಳನ್ನು ಕರ್ಕೊಂಡು ಹೋಗಿ ವಸ್ತು ಪ್ರದರ್ಶನದಲ್ಲಿ ತೋರಿಸುವ ಹಾಗಾಗಿದೆ! ನನ್ನಗನ್ನಿಸುವುದು ಇನ್ನು ಕೆಲವೇ ವರ್ಷಗಳಲ್ಲಿ ನಾಚಿಕೆ, ದಾಕ್ಷಿಣ್ಯ, ಮುಜುಗರ, ಕುತೂಹಲ, ಅಚ್ಚರಿ, ಸಹಜವಾದ ಅಕ್ಕರೆಗಳನ್ನೂ ವರ್ಚುವಲ್ ರಿಯಾಲಿಟಿ ಮೂಲಕ ಪ್ರದರ್ಶನ ತೋರಿಸುವಂತಹ ಅಥವಾ ಸ್ವತಃ ಪ್ರದರ್ಶಿಸುವ ದಿನಗಳು ಬಂದಾವೇ?!!! (ಸ್ವತಃ ಪ್ರದರ್ಶಿಸಲು ಶುರುವಾಗಿ ವರ್ಷಗಳೇ ಕಳೆದಿವೆ)

 

ವಿಚಾರ 1:

ಇತ್ತೀಚಿಗೆ ಫೇಸ್ಬುಕ್ಕಿನಲ್ಲಿ ಹಿರಿಯ ಲೇಖಕಿಯೊಬ್ಬರ ಬರಹ ಈ ಕುರಿತು ಯೋಚಿಸುವಂತೆ ಮಾಡಿತು. ನಾವು ವಿದ್ಯಾರ್ಥಿಗಳಾಗಿದ್ದಾಗ ಈ ಹಾರ್ಟ್ ಸಿಂಬಲ್ ಉಂಟಲ್ಲ (ಲವ್ ಚಿಹ್ನೆ ಅಂತ ಕರೆಯುತ್ತಿದ್ದೆವು) ಅದು ಭಯಂಕರ ಅಸ್ಪೃಶ್ಯ ಚಿಹ್ನೆ ಎಂಬ ಭಾವನೆ ಇತ್ತು. ನಾವು ಕನ್ನಡ ಮಾಧ್ಯಮದಲ್ಲಿ ಕಲಿತದ್ದೂ, ಗ್ರಾಮೀಣ ಮಕ್ಕಳಾಗಿದ್ದೂ ಕಾರಣ ಇದ್ದೀತು. ಆ ಚಿಹ್ನೆಯನ್ನು ರಚಿಸುವುದು, ಅದರ ಬಗ್ಗೆ ಚರ್ಚಿಸುವುದು, ನೇರ ಗಣ್ಣಿನಿಂದ ನೋಡುವುದು ಸಹಿತ ಭಯಂಕರ ಮಾಡಬಾರದ ಕೆಲಸ ಎಂಬ ಕಲ್ಪನೆ ಇತ್ತು (ತಪ್ಪು ಕಲ್ಪನೆ ಆಗಿದ್ದಿರಲೂ ಬಹುದು, ತಿಳಿವಳಿಕೆ ಕೊರತೆಯಿಂದ). ಆದರೆ ಇಂದು ವಿದ್ಯಾರ್ಥಿಗಳು ಬಿಡಿ, ವಯಸ್ಕರ ತನಕ ಜಾಲ ತಾಣಗಳಲ್ಲಿ ಕಳಿಸುವ ವಿಧ ವಿಧದ ಇಮೋಜಿಗಳ ಭಾವಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೇ ಕಷ್ಟವಾಗುತ್ತಿದೆ.

ಒಂದು ಹೃದಯ, ಎರಡು ಹೃದಯ, ಕೆಂಪು ಬಣ್ಣದ ಹೃದಯಗಳ, ಚುಂಬಿಸುವ ಮಾದರಿಯ ಇಮೋಜಿಗಳು, ಸಂಕೋಚಿಸಿ, ವಿಕಸಿಸುವ ಜಿಫ್ ಮಾದರಿಯ ಹೃದಯಗಳ ಚಿಹ್ನೆಗಳು, ಡಿಯರ್, ಡಿಯರೆಸ್ಟ್, ಮೈ ಲೈಫ್... ಇತ್ಯಾದಿ ಇತ್ಯಾದಿ ಪದಪುಂಜಗಳ ಯಥೇಚ್ಛ ಬಳಕೆಗಳ ಭರಾಟೆಯಿಂದಾಗಿ ಯಾವುದು ಅತ್ಯಂತ ಆಪ್ತ, ಯಾರಿಗೆ ಯಾವ  ಸಂಬೋಧನೆ, ಯಾರುಯಾರಿಗೆ ಹತ್ತಿರದವರು, ಇಬ್ಬರ ನಡುವಿನ ಸಂಬಂಧದ ತೆಳು ಗೆರೆಯ ಅಂಚು ಎಲ್ಲಿದೆ? ಇವೆಲ್ಲ ಸಹಜವ, ತೋರಿಕೆಯ, ಯಾಂತ್ರಿಕವ ಅಥವಾ ಸಮಕಾಲೀನರಾಗುವ ಆತುರವ ಒಂದೂ ಅರ್ಥವಾಗುವುದಿಲ್ಲ. ಬಹುಶಃ ನನ್ನ ತಲೆಮಾರಿನವರ ತಿಳಿವಳಿಕೆ ದೋಷ ಇರಲೂ ಬಹುದು.

ಒಂದಂತೂ ಸ್ಪಷ್ಟವಾಗಿ ಹೇಳಬಯಸುತ್ತೇನೆ. ನನ್ನ ಕಾಲದಲ್ಲಿ ಇದ್ದದ್ದೇ ಚೆನ್ನಾಗಿತ್ತು, ಈಗ ಕಾಲ ಬದಲಾಗಿದೆ, ಕೆಟ್ಟು ಹೋಗಿದೆ, ಈಗಿನ ಮಕ್ಕಳು ಕೆಟ್ಟುಹೋಗಿದ್ದಾರೆ…” ಇತ್ಯಾದಿ ಯಾವ ಆರೋಪಗಳಿಗೋಸ್ಕರವೂ ಈ ಬರಹ ಅಲ್ಲ. ಕಾಲಕ್ರಮೇಣ, ಕಾಲನ ಓಟದಲ್ಲಿ ಮನಸ್ಥಿತಿ ಹಾಗೂ ಪರಿಸ್ಥಿತಿಗಳ ಬದಲಾವಣೆ ಅತ್ಯಂತ ಸಹಜ. ಅದು ನನಗೂ ಗೊತ್ತು. ಮತ್ತೆ ಯಾರಿಗೆ ಯಾವ ಇಮೋಜಿ ಕಳುಹಿಸಬೇಕು, ಯಾವ ರೀತಿ ಸಂಬೋಧಿಸಬೇಕು ಅದೆಲ್ಲ ಅವರವರ ವೈಯಕ್ತಿಕ ಸ್ವಾತಂತ್ರ್ಯ, ಅಭಿರುಚಿ ಮತ್ತು ಅಧಿಕಾರದ ವಿಚಾರ. ಇದನ್ನು ಪ್ರಶ್ನಿಸುವ, ವಿಮರ್ಶಿಸುವ ಅಗತ್ಯ ಮೂರನೆಯವರಿಗಿಲ್ಲ.

ಆದರೂ...

ಒಂದು ಕಾಲದಲ್ಲಿ ನಾವು ಸಂಕೋಚದಿಂದ ನೋಡುತ್ತಿದ್ದ, ಬಳಸುತ್ತಿದ್ದ, ಬರೆಯುತ್ತಿದ್ದ ಚಿಹ್ನೆ, ಮಾತು, ನೋಟಗಳು ಇಂದು ಸಾರ್ವಜನಿಕವಾಗಿ ನಿರ್ಭಿಡೆಯಿಂದ ಹಾಗೂ ಅತ್ಯಂತ ಸಹಜವೆಂಬಂತೆ ರಾಶಿಗಳಲ್ಲಿ ಬಳಕೆಯಾಗುತ್ತಿರುವುದು ಕಂಡಾಗ ನಾವು ಸಂಕೋಚ ಎಂಬ ಪೊರೆಯಿಂದ ಹೊರಗೆ ಬರ್ತಾ ಇದ್ದೇವೆ ಅಂತ ಭಯಂಕರವಾಗಿ ಅನ್ನಿಸುತ್ತಿದೆ.

ವಿಚಾರ 2:
ನಾವು ಸಣ್ಣವರಾಗಿದ್ದಾಗ ಮನೆಗೆ ಸಡನ್ ನೆಂಟ್ರು ಬರುವುದು ಅಂತ ಇತ್ತು. ಮನೆಯ ನೆಲಕ್ಕೆ ಸಾರಣೆಯೇ ಇಲ್ಲದ, ಕರೆಂಟು, ಟಿ.ವಿ, ಫ್ರೀಜ್ಜು, ಪ್ರತ್ಯೇಕ ಬೆಡ್ ರೂಂ, ಜೊತೆಗೆ ಟಾಯ್ಲೆಟ್ಟೂ ಸಹ ಇಲ್ಲದ ದಿನಗಳಲ್ಲೂ ಯಾವುದೇ ಸಂದರ್ಭ, ಎಷ್ಟೇ ಮಂದಿ ನೆಂಟರು ಬಂದರೂ ಖುಷಿ... ಭಯಂಕರ ಥ್ರಿಲ್. ಅವರನ್ನು ಒತ್ತಾಯಿಸಿ ಕೂರಿಸಿ, ಉಪಚರಿಸಿ ಮತ್ತೆರಡು ದಿನ ಕೂರಿಸಿ ಕಳುಹಿಸಿದರೂ ಸುಸ್ತು ಎಂಬುದು ಇರುತ್ತಿರಲಿಲ್ಲ. ಇಂದು ಹಾಗಲ್ಲ. ಎಲ್ಲಿಗೇ ಹೋಗುವುದಿದ್ದರೂ ಪರೋಕ್ಷವಾಗಿ ಅಪಾಯಿಂಟ್ ಮೆಂಟ್ ಪಡೆಯಲೇಬೇಕು. ಇಂತಿಷ್ಟುಹೊತ್ತಿಗೆ ಬರುತ್ತೇವೆ, ಹೊರಟಿದ್ದೇವೆ, ಬರ್ತಾ ಇದ್ದೇವೆ, ಗೇಟಿನ ಹತ್ರ ತಲುಪಿದೆವು ಅಂತೆಲ್ಲ ಅಪ್ಡೇಟ್ ನೀಡ್ತಲೇ ಇರಬೇಕು. ಹಾಗಾಗಿ ಇವತ್ತು ಯಾವ ನೆಂಟರು ಬರುವುದಿದ್ದರೂ ಅದೆಲ್ಲ ಪೂರ್ವನಿಗದಿತವಾಗಿರುತ್ತದೆಯೇ ಹೊರತು. ಖಂಡಿತಾ ಅಚ್ಚರಿ ಆಗುವುದೇ ಇಲ್ಲ. ಯಾರನ್ನೋ 35 ತುಂಡು ಮಾಡಿ ಕೊಂದ ಸುದ್ದಿ ಒಂದು ಸಲಕ್ಕೆ ಅಚ್ಚರಿ ಅಷ್ಟೇ... ಮತ್ತೆ ಅಂಥದ್ದೇ ಪುನಃ ಪುನಃ ನಡೆದಾಗ ಯಾರಿಗೂ ಎಂತ ಸುದ್ದಿ ಓದಿದರೂ ಅಚ್ಚರಿ ಆಗುವುದಿಲ್ಲ. ಅಪರಾಧ ಸುದ್ದಿಗಳನ್ನು ಮನರಂಜನೆಯ ಥರ ಸ್ವೀಕರಿಸ್ತಾರೆ ಜನ.

ವಿಚಾರ 3:

ಮೊಬೈಲು, ಇಂಟರ್ನೆಟ್ಟು, ಟಿ.ವಿ.ಯೂ ಇಲ್ಲದ ದಿನಗಳಲ್ಲಿ ಪ್ರಚಲಿತದಲ್ಲಿದ್ದ ಮಾತು ದೇಶ ಸುತ್ತಿ ನೋಡು, ಕೋಶ ಓದಿ ನೋಡು ಅಂತ. ಹೊಸತು ತಿಳಿಯಬೇಕಿದ್ದರೆ ಓದಬೇಕಿತ್ತು ಅಥವಾ ಹೋಗಬೇಕಿತ್ತು. ಇವತ್ತು ಹಾಗಲ್ಲ ಎಂತ ಬೇಕಾದ್ರೂ ಗೂಗಲ್ ನಲ್ಲಿ ಕೇಳಿದೆ ಹೇಳ್ತದೆ, ಟೈಪು ಮಾಡಬೇಕು ಅಂತವೂ ಇಲ್ಲ. ಬಾಯಲ್ಲಿ ಹೇಳಿದರೆ ಸಾಕು ಗೂಗಲ್ ಇಡೀ ಜಾತಕ ಬಿಚ್ಚಿಡುತ್ತದೆ. ಪುಟ್ಟ ಮಕ್ಕಳೂ ಸಹ ತಾಂತ್ರಿಕವಾಗಿ ಬಹಳಷ್ಟು ವಿಚಾರ ತಿಳಿದುಕೊಂಡಿರುತ್ತಾರೆ. ಬೆಳಗ್ಗೆ ಪೇಪರು ಬಂದಾಗಲಷ್ಟೇ ಜನರಿಗೆ ಸುದ್ದಿ ತಿಳಿಯುತ್ತಿದ್ದ ಕಾಲ ಸರಿದು ಎಷ್ಟೋ ವರ್ಷಗಳಾದವು. ಸುದ್ದಿ ಸಂಭವಿಸಿದ ಸೆಕೆಂಡುಗಳಲ್ಲಿ ಜನರ ಮೊಬೈಲಿಗೆ ಅದು ತಲುಪಿರುತ್ತದೆ. ಹಾಗಾದರೆ ಕುತೂಹಲ ಎಂಬ ಭಾವ ಹೇಗೆ, ಎಲ್ಲಿ ಇರಲು ಸಾಧ್ಯ?! ನಾವು ಕುತೂಹಲ ಪಡುವುದನ್ನು ಕಡಿಮೆ ಮಾಡಿದ್ದೇವೆ. ಕುತೂಹಲಕ್ಕಿಂತ ಮೊದಲೇ ನಮ್ಮಲ್ಲಿರುವ ಆರನೇ ಇಂದ್ರಿಯದ ಊಹೆಗಳು ಬಹಳಷ್ಟು ಸಲ ಸರಿಯಾಗಿರುತ್ತದೆ. ಬಹಳಷ್ಟು ನಾಟಕೀಯ ಘಟನೆಗಳು,ಸಿನಿಮೀಯ ಜೀವನ, ರಾಜಕೀಯ ಇವೆಲ್ಲ ನಾವು ಕುತೂಹಲ ಪಡುವ ಭಾವವನ್ನೇ ಕೊಲ್ಲುತ್ತಿದೆ.

 

ವಿಚಾರ 4:

ನಾವು ಸಣ್ಣವರಿದ್ದಾಗ ದೊಡ್ಡವರಲ್ಲಿ, ಮೇಷ್ಟ್ರಲ್ಲಿ ಏನಾದರೂ ಕೇಳಲು ಸಂಕೋಚ, ಮುಜುಗರ, ಭಯಂಕರ ವಿಧೇಯತೆ, ವಿನಯ ಅದೆಲ್ಲ ಇತ್ತು. ಇಂದು ಹಾಗಲ್ಲ. ಕಲಿಸುವ ಗುರುಗಳ ಜೊತೆ ನಿರಾಯಾಸವಾಗಿ ಸೆಲ್ಪೀ ತೆಗೆದು ಸ್ಟೇಟಸ್ಸುಗಳಲ್ಲಿ ಹಂಚಿಕೊಳ್ಳುತ್ತೇವೆ. ಏನು ಕೇಳಬೇಕಾದರೂ ಮಕ್ಕಳು ಮುಲಾಜಿಲ್ಲದೆ ದೊಡ್ಡವರಲ್ಲಿ ಕೇಳುತ್ತಾರೆ. ಮೇಲಾಧಿಕಾರಿಗಳ ಬಗ್ಗೆ ಅಸಮಾಧಾನವಿದ್ದರೆ ಫೇಸ್ಬುಕ್ಕಿನಲ್ಲೇ ನೇರವಾಗಿ ಬೈದು ಬರೆಯುವ ಬುದ್ಧಿವಂತರು ಇರ್ತಾರೆ! ಬದುಕಿನ ಅವಕಾಶಗಳು, ಸ್ವಾತಂತ್ರ್ಯ, ಸ್ವಾವಲಂಬನೆಗೆ ದಾರಿಗಳು, ಆತ್ಮವಿಶ್ವಾಸ ತುಂಬಿಸುವ ಶಿಕ್ಷಣ ಇವೆಲ್ಲ ಸಿಕ್ಕಾಗ ಸಹಜವಾಗಿ ನಾನ್ಯಾಕೆ ಸಂಕೋಚ ಪಡಬೇಕು, ನನಗ್ಯಾಕೆ ದಾಕ್ಷಿಣ್ಯ?” ಅಂತ ಅನ್ನಿಸಲು ಶುರುವಾಗಿದೆ. ಹಿಂದೆ ಸಾಲ ಪಡೆದುಕೊಂಡವರಿಗೂ ಸಾಲ ಕೊಟ್ಟವರ ಕುರಿತು ಸ್ವಲ್ಪವಾದರೂ ಮರ್ಯಾದೆ ಇರ್ತಾ ಇತ್ತು. ಈಗ ಹಾಗಲ್ಲ ಸಾಲ ಪಡೆದ ಬಳಿಕ ಪಡೆದ ಸಾಲದ ನಯಾ ಪೈಸೆ ಕಟ್ಟದೇ ಇರುವುದು, ಹಾಗೂ ಸಾಲ ಕೊಟ್ಟ ಬಡಪಾಯಿಯನ್ನು ಮಾತನಾಡದೇ ಬಿಂದಾಸ್ ಆಗಿ ತಿರುಗಾಡುವುದು ಈಗಿನ ಫ್ಯಾಶನ್ನು! ಹಾಗಾಗಿ ನೀವೇ ಇಂತಹ ಸಂಗತಿಗಳಿಗೆ ಸಾಕ್ಷಿಗಳಾಗಿರಬಹುದು. ಎಲ್ಲಿದೆ ಸಂಕೋಚ...? ತೋರಿಸಿ!

 

ಪತ್ರದಲ್ಲಿ ಹೇಳುವುದನ್ನು ಹೇಳಿ ಉತ್ತರಕ್ಕೆ ಕಾಯುವುದರ ಸುಖ ಅನುಭವಿಸ್ತಾ ಇದ್ದದ್ದು, ಮುಂಜಾನೆ ಎದ್ದು ಪೇಪರ್ ಓದಿಯೇ ಲೋಕದ ಸುದ್ದಿ ತಿಳಿಯುತ್ತಾ ಇದ್ದದ್ದು, ದೂರದರ್ಶನದಲ್ಲಿ ವಾರಕ್ಕೊಂದೇ ಸಿನಿಮಾ, ಚಿತ್ರಹಾರ್, ಚಿತ್ರಮಂಜರಿ, ರಂಗೋಲಿ ನೋಡಿ ಅದರಲ್ಲಿ ಭಯಂಕರ ಕುತೂಹಲ, ಅಚ್ಚರಿ, ಥ್ರಿಲ್ ಅನುಭಿಸಿ ಟಿ.ವಿ.ಯಸಂಪೂರ್ಣ ಮನರಂಜನೆಗೆ ಪಾತ್ರರಾಗ್ತಾ ಇದ್ದದ್ದು, ಲೈಕು, ಶೇರು ಕಮೆಂಟುಗಳಿಗೋಸ್ಕರ ಏನನ್ನು ಮಾಡದೆ, ಮನಸ್ಸಿನ ಖುಷಿಗೋಸ್ಕರ ಬದುಕ್ತಾ ಇದ್ದದ್ದು, ಬಸ್ಸುಗಳಲ್ಲೇ ಪ್ರಯಾಣ ಮಾಡಿ, ನಡೆದುಕೊಂಡೇ ಶಾಲೆಗೆ ಹೋಗಿ, ಬ್ಯಾಂಕಿನ ಕೌಂಟರಿನಲ್ಲೇ ದುಡ್ಡು ಪಡೆದು... ಜನರೊಡನೆ ಬೆರೆತು, ಅವರೊಡೆನೆ ಮುಕ್ತವಾಗಿ ಮನಃಪೂರ್ವಕವಾಗಿ ಮಾತನಾಡುತ್ತಾ ಇರುತ್ತಿದ್ದ ದಿನಗಳು ಸರಿದುಹೋಗ್ತಾ ಇವೆ. ಈ ಮೊಬೈಲು, ಜಾಲತಾಣ, ಎಟಿಎಂ ಕಾರ್ಡು, ಸಿಸಿ ಕ್ಯಾಮೆರಾ, ಆನ್ ಲೈನ್ ಬ್ಯಾಂಕಿಂಗ್, ಸ್ಕೂಲ್ ಬಸ್ಸು, ಸ್ವಂತ ವಾಹನ, ವಿಡಿಯೋ ಕಾಲ್... ಹೀಗೆ ಸಾವಿರ ಸಾವಿರ ತಂತ್ರಜ್ಞಾನಗಳು ನಮ್ಮನ್ನು ಗುಂಪಿನಿಂದ ದೂರ ಇರಿಸುವುದು ಮಾತ್ರವಲ್ಲ, ಪ್ರಕೃತಿಯ ಸಹಜತೆ ಆಸ್ವಾದಿಸದ ಹಾಗೆ, ಪರಿಸರದ ಭಾಗವಾಗಿ ಮುಂದೆ ಹೋಗದ ಹಾಗೆ ತಡೆಯುವುದು ನಮಗೆ ತಿಳಿಯುವುದೇ ಇಲ್ಲ. ನಮಗೆ ಓದಲು, ಮಾತನಾಡಲು, ಕೇಳಿಸಿಕೊಳ್ಳಲು ಪುರುಸೊತ್ತಿಲ್ಲ. ಯಾಕಂತ ಗೊತ್ತಿಲ್ಲ!!! ನಮ್ಮ ಕಣ್ಣಿಗೆ ನಾವೇ ಪಟ್ಟಿ ಕಟ್ಟಿ ಓಡಾಡಿದ ಹಾಗೆ.

ಈ ವ್ಯವಸ್ಥೆಯಿಂದ ವಿಮುಖರಾಗಲು ಸಾಧ್ಯವೇ ಇಲ್ಲ. ಹಾಗಂತ ಕೆಲವು ಅತಿರೇಕಗಳು, ಕೆಲವು ಅಸಹಜತೆಗಳು, ಕೆಲವು ಯಾಂತ್ರಿಕ ಶುಭ ಹಾರೈಕೆಗಳು, ಹೊಗಳಿಕೆಗಳು, ಮುಖಸ್ತುತಿಗಳು, ಪ್ರೀತಿಯ ವೈಭವೀಕರಿಸಿದ ತೋರ್ಪಡಿಕೆ, ಬೇಕಾಬಿಟ್ಟಿ ಸಿಗುವ ಪ್ರಶಸ್ತಿಗಳ ಪ್ರದರ್ಶನ, ನಿರ್ಯೋಚನೆಯಿಂದ ಅಭಿವ್ಯಕ್ತಗೊಳ್ಳುವ ಭಾವಗಳು, ತೀರಾ ಖಾಸಗಿ ಅಂತ ಏನನ್ನೂ ಇರಿಸದೆ ಜಾಲತಾಣದಲ್ಲಿ ತೆರೆದಿಡುವ ಬದುಕು.... ಇವೆಲ್ಲವನ್ನು ಕಂಡಾಗ ಅನ್ನಿಸುವುದು... ಮುಂದಿನ ಸಲ ವಸ್ತು ಪ್ರದರ್ಶನಕ್ಕೆ ಹೋದಾಗ ಅಚ್ಚರಿ, ಕುತೂಹಲ, ಸಂಕೋಚ, ಸಹಜ ಅಕ್ಕರೆಗಳನ್ನೂ 3D ರೂಪದಲ್ಲಿ ತೋರಿಸುವ “”ಸೂಕ್ಷ್ಮದರ್ಶಕಗಳು ಕಾಣಲು ಸಿಗುವ ಸಾಧ್ಯತೆ ಇದೆಯೇ? ನಿಮಗಿದು ಅತಿಶಯೋಕ್ತಿ ಅನ್ನಿಸ್ತಾ ಇದೆಯಾ?

-ಕೃಷ್ಣಮೋಹನ ತಲೆಂಗಳ (25.12.2022)

 

1 comment:

Unknown said...

Baravanige chennagide..100/100 nijavada mathugalu