ತೋಚಿದ್ದು... ಗೀಚಿದ್ದು 2

ಕಾಣುವುದಕ್ಕಿಂತ ನೋಡುವುದೇ ವೇದ್ಯವಾಗುವುದು...


ಮಳೆ ನಿಂತ ಬಳಿಕವೂ ಮರಗಳಿಂದ, ಮನೆಯ ಛಾವಣಿಯಿಂದ ಹನಿ ನೀರು ತೊಟ್ಟಿಕ್ಕುತ್ತಿರುತ್ತದೆ. ಲಯಬದ್ಧವಾಗಿ ನೀರು ಭೂಮಿಗೆ ಬೀಳುತ್ತಿರುತ್ತದೆ. ಮಳೆ ನಿಂತ ಬಳಿಕವೂ ನಸು ಛಳಿಯ ಗಾಳಿ ಸುಳಿಯುತ್ತಲೇ ಇರುತ್ತದೆ. ನೆನೆದ ಮಣ್ಣಿನ ಪರಿಮಳ, ಗುಡ್ಡದಿಂದ ಇಳಿದು ಬರುವ ಮಳೆ ನೀರಿನ ಧಾರೆ, ಗಾಳಿಗೆ ಬಾಗಿ ಇನ್ನೊಂದು ಮರದ ಆಸರೆ ಪಡೆದ ಅಡಕೆ ಮರಗಳು, ನೆಲನೋಟಕವಾದ ಹೂವಿನ ಗಿಡಗಳು... ಎಷ್ಟೊಂದು ಕುರುಹುಗಳು ಮಳೆ ಬಂದದ್ದಕ್ಕೆ...

ಆದರೆ ಮಳೆಯನ್ನು ಆಸ್ವಾದಿಸುವ ಮನಸ್ಥಿತಿ ಇಲ್ಲದ ವೇಳೆಯಲ್ಲಿ, ಇಲ್ಲದ ಸನ್ನಿವೇಶದಲ್ಲಿ ತೊಟ್ಟಿಕ್ಕುವ ಹನಿಗಳೂ ಮನಸ್ಸು ಕೆದಕುವ ಪೆಟ್ಟಿನ ಹಾಗೆ ಭಾಸವಾದೀತು. ಅಷ್ಟೊಂದು ಲಯಬದ್ಧವಾಗಿ, ನಿಶ್ಯಬ್ಧವನ್ನು ಬೇಧಿಸಿ ಉಂಟು ಮಾಡುವ ನಿನಾದದ ಸದ್ದು ಕೂಡಾ ಖುಷಿ ಕೊಡಲಾರದು... ಮನಸ್ಸು ಅದನ್ನು ಆಸ್ವಾದಿಸುವಷ್ಟು ಸುಕೋಮಲವಾಗಿರಲಾರದು.

ಹೌದಲ್ಲ
ಒಂದೇ ಸನ್ನಿವೇಶ, ಒಂದೇ ಪರಿಸ್ಥಿತಿ ಮನಸ್ಸನ್ನು ಹೊಕ್ಕು ಅಲ್ಲೊಂದು ಬಿಂಬ ಮೂಡಿಸಲು ನಮ್ಮ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ. ಧನಾತ್ಮಕವಾಗಿಯೂ, ನಕಾರಾತ್ಮಕವಾಗಿಯೂ ಸನ್ನಿವೇಶ ಗ್ರಹಿಕೆಯಾಗುವುದು ನಮ್ಮ ಮೂಡನ್ನು ಅವಲಂಬಿಸಿರುತ್ತದೆ. ಮನಸ್ಸು ಪ್ರಫುಲ್ಲವಾಗಿದ್ದಾಗ, ಶಾಂತವಾಗಿದ್ದಾಗ ಪ್ರತಿಯೊಂದರಲ್ಲೂ ಸೌಂದರ್ಯವನ್ನೂ, ಆಹ್ಲಾದಕತೆಯನ್ನೂ, ಚೈತನ್ಯವನ್ನೂ ಕಾಣಲು ಸಾಧ್ಯವಾಗುತ್ತದೆ...

ಮನಸ್ಸು ವ್ಯಗ್ರವಾಗಿದ್ದರೆ, ಅಶಾಂತವಾಗಿದ್ದರೆ, ನೊಂದಿದ್ದರೆ ಅದೇ ಸಂದರ್ಭ ಭಿನ್ನವಾಗಿ ಕಾಡಬಹುದು. ಮಳೆ ತಂದ ಅವಾಂತರಗಳೇ ಎದ್ದು ತೋರಬಹುದು, ಅಯ್ಯೋ ಮಳೆ ಬಂತಲ್ಲಾ ಎಂದನ್ನಿಸಬಹುದು...

ಪ್ರಕೃತಿ, ಸೃಷ್ಟಿಗಳೆಲ್ಲ ಅವು ಶಾಶ್ವತ. ಅವನ್ನು ಅನುಭವಿಸುವ ಮನುಷ್ಯ, ಆತನ ಮನಸ್ಸು ಮಾತ್ರ ಚಂಚಲ ಹಾಗೂ ಕ್ಷಣಿಕ.

......


ಅವರವರ ನಿಲ್ದಾಣದ ತನಕ..






ದೂರದ ದಾರಿಯ ಪ್ರಯಾಣಕ್ಕೆ ಒಂದು ಟಿಕೆಟು ಖರೀದಿಸಿ ಇಟ್ಟಿರುತ್ತೀರಿ. ಆಗೆಲ್ಲಾ ಪಕ್ಕದಲ್ಲಿಯೋ, ಎದುರಿನಲ್ಲಿಯೋ ಪ್ರಯಾಣಿಸುವವರು ಯಾರೆಂದು ಸರ್ವೇ ಮಾಡಿ, ಅವರ ಜಾತಕ ನೋಡಿ, ವಾಸ್ತು ಪರೀಕ್ಷಿಸಿ ಯಾರೂ ಪ್ರಯಾಣಿಸುವ ಪ್ರಮೇಯವಿಲ್ಲ...
ಒಂದಷ್ಟು ಬೇಕಾದ ಸೀಟಿಗಾಗಿ ಪ್ರಯತ್ನಿಸಬಹುದು. ನಂತರರ ಅವರವ ಅದೃಷ್ಟಕ್ಕೆ ಬಿಟ್ಟ ಸೀಟಿನಲ್ಲಿ ಕುಳಿತು ಪ್ರಯಾಣಿಸಬೇಕಾಗಿರುವುದು ಅವರವರ ಅದೃಷ್ಟಕ್ಕೆ ಬಿಟ್ಟದ್ದು.
ಇಂತಹ ಸಂದರ್ಭದಲ್ಲಿ ಪಕ್ಕದಲ್ಲೋ, ಎದುರಿನಲ್ಲೋ ಕುಳಿತ ಪ್ರಯಾಣಿಕನ ವರ್ತನೆ ನಿಮಗೆ ಇಷ್ಟವಾದರೆ... ಅಯ್ಯಾ ನೀನು ನನಗೆ ಒಳ್ಳೆಯ ಸ್ನೇಹಿತನಾಗಿದ್ದೀ, ಇನ್ನು ಸ್ವಲ್ಪ ಹೊತ್ತು ನನ್ನ ಜೊತೆಗೇ ಪ್ರಯಾಣಿಸು ಎಂದು ಅಂಗಲಾಚಲಾಗುತ್ತದೆಯೇ... ಇಲ್ಲ ತಾನೆ. ಅಥವಾ ಹತ್ತಿರ ಕುಳಿತ ಸಹ ಪ್ರಯಾಣಿಕನ ವರ್ತನೆ ಇಷ್ಟವಾಗದಿದ್ದರೆ... ರೀ ಸ್ವಾಮಿ, ನಿಮ್ಮ ಸ್ವಭಾವ ನನಗೆ ಹಿಡಿಸಿಲ್ಲ, ದಯವಿಟ್ಟು ಇಲ್ಲಿಯೇ ಇಳಿಯಿರಿ ಎಂದು ತಾಕೀತು ಮಾಡಲಾಗುತ್ತದೆಯೇ...

ಇಲ್ಲ ತಾನೆ?
ಯಾಕೆಂದರೆ ನಾವು ಪ್ರಯಾಣಿಸುತ್ತಿರುವ ಬಸ್ಸೋ,ರೈಲೋ ನಮ್ಮ ಸ್ವಂತದ್ದಲ್ಲ. ಎಲ್ಲರ ಹಾಗೆ ನಾವೂ ಪ್ರಯಾಣಿಕರು. ಯಾರು ಎಲ್ಲಿ ಹತ್ತಿ ಎಲ್ಲಿ ಇಳಿಯಬೇಕೆಂದು ನಿರ್ಧರಿಸುವವರು ನಾವಲ್ಲ. ಅದು ಅವರವ ನಿರ್ಧಾರಕ್ಕೆ ಅವಶ್ಯಕತೆಗಳಿಗೆ ಸಂಬಂಧಿಸಿದ್ದು. ಅಥವಾ ಎಲ್ಲರ ಪ್ರಯಾಣಿವನ್ನು ನಿರ್ಧರಿಸುವವನು ಎಲ್ಲಿಯೋ ಇದ್ದರೂ ಇರಬಹುದು. ಪ್ರಯಾಣದಲ್ಲಿ ಜೊತೆಗಿರುವವರು ಇಷ್ಟವಾಗದಿದ್ದರೂ ಹೊಂದಾಣಿಕೆಯಿಂದ ಇರುವುದು, ಇಷ್ಟವಾದ ಪ್ರಯಾಣಿಕರು ಮತ್ತಷ್ಟು ಹೊತ್ತು ಇಲ್ಲದೆ ಅವರವರ ನಿಲ್ದಾಣದಲ್ಲಿ ಇಳಿದಾಗ ನಿರ್ಲಿಪ್ತರಾಗಿ ಬೀಳ್ಕೊಡುವುದೇ ಇರುವ ಆಯ್ಕೆಗಳು. ಎಲ್ಲಿ ವ್ಯಕ್ತಿಗೆ ಬೇರೆ ಆಯ್ಕೆಗಳೇ ಇಲ್ಲವಾಗುತ್ತದೆಯೇ ಅಲ್ಲಿ ನಿರ್ಲಿಪ್ತತೆಗೆ ಮೊರೆ ಹೋಗದೆ ಬೇರೆ ದಾರಿಗಳೇ ಇರುವುದಿಲ್ಲ. ಒಂದು ವೇಳೆ ನಿರ್ಲಿಪ್ತತೆ ರೂಢಿಸಿಕೊಳ್ಳದಿದ್ದರೆ ಬಾಕಿ ಉಳಿದ ಪ್ರಯಾಣ ಮತ್ತಷ್ಟು ಅಸಹನೀಯವಾಗಿ ಕಾಡಬಹುದು. ನೋಡುಗರಿಗೆ ನಿಷ್ಠುರತೆಯಂತೆ ಕಂಡರೂ ಬೇರೆ ದಾರಿಯಿಲ್ಲ. ನಾವೆಲ್ಲಿ ಹೋಗಿ ತಲುಪಬೇಕೆಂದುಕೊಂಡಿದ್ದೇವೆಯೋ ಅಲ್ಲಿಯ ವರೆಗೆ ಹೋಗಿ ತಲುಪಲೇಬೇಕು. ಯಾರು ಎಲ್ಲಿ ಪ್ರಯಾಣದಲ್ಲಿ ಜೊತೆಯಾಗುತ್ತಾರೆ, ಅವರೇನು ಮಾತನಾಡುತ್ತಾರೆ, ಯಾರು ಎಲ್ಲಿ ಇಳಿದು ಹೋಗುತ್ತಾರೆ ಎಂಬುದರ ಆಧಾರದಲ್ಲಿ ನಮ್ಮ ಪ್ರಯಾಣದ ಗುರಿ ಬದಲಾಗಲಾರದು. ಮಾತ್ರವಲ್ಲ, ಯಾರ್ಯಾರು ನಮ್ಮ ಸಹಪ್ರಯಾಣಿಕರಾಗಿ ಬರಬೇಕೆಂದು ನಿರ್ಧರಿಸುವ ಹಕ್ಕೂ ನಮಗಿರುವುದಿಲ್ಲ.

ಹಾಗಾಗಿ ಯಾರು ಎಷ್ಟುಸಮಯ ಜೊತೆಗೆ ಪ್ರಯಾಣಿಸಿದ್ದಾರೋ ಅಷ್ಟು ಹೊತ್ತು ಅವರ ಜೊತೆ ಹೊಂದಾಣಿಕೆಯಿಂದ ಇರಲು ಪ್ರಯತ್ನ ಪಡಬೇಕಲ್ಲವೇ... ಸಹ ಪ್ರಯಾಣಿಕ ಅನುಕೂಲನಾಗಿದ್ದರೆ ಖುಷಿ ಪಡಬೇಕಲ್ಲವೇ... ಖುಷಿ ಕೊಟ್ಟವರು ತಾಣ ಬಂದಾಗ ಇಳಿದು ಹೋದರೆಂದು ಖಿನ್ನರಾಗುವುದಕ್ಕೆ ಅರ್ಥವಿದೆಯೇ...
ಮಾತ್ರವಲ್ಲ. ನನ್ನ ಮನಸ್ಥಿತಿಗೂ ನನ್ನ ಸಹಪ್ರಯಾಣಿಕನ ಮನಸ್ಥಿತಿಗೂ ಹೊಂದಣಿಕೆ ಆಗುತ್ತಿಲ್ಲವೆಂದು ಜಗಳ ಕಾಯುವುದಕ್ಕೆ ಅರ್ಥವಿದೆಯೇ...
ನೆನಪಿಟ್ಟುಕೊಳ್ಳಿ.... ಒಟ್ಟೂ ಪ್ರಯಾಣದಲ್ಲಿ ಬೇರೆ ಬೇರೆ ಲೆಕ್ಕಾಚಾರದಲ್ಲಿ ಪ್ರಯಾಣಿಕರು ಒಟ್ಟಾಗುತ್ತಾರೆ. ಹೆಚ್ಚೂ ಆಗದೆ, ಕಡಿಮೆಯೂ ಆಗದ ಹಾಗೆ ಅವರವರ ನಿಲ್ದಾಮದಲ್ಲಿ ಹತ್ತಿ, ಇಳಿಯುತ್ತಾರೆ... ತೀರಾ ಆಕಸ್ಮಿಕವೆಂಬಂಥ ಭೇಟಿ, ಅಗಲುವಿಕೆ ಅಷ್ಟೇ...
ಅಲ್ಲಿ ಅತಿಯಾದ ಭಾವುಕತೆಗೂ ಅತಿಯಾದ ನೊಂದುಕೊಳ್ಳುವಿಕೆಯೂ ಸಹಜವಾದರೂ ಅದರಿಂದ ಪ್ರಯೋಜನವಾದರೇನು. ಅಂತಿಮವಾಗಿ, ನಮ್ಮನ್ನು ಮೈಲುಗಟ್ಟಲೆ ದೂರದಿಂದ ಹೊತ್ತು ತರುವ ಬಸ್ಸೋ, ರೈಲು ಕೂಡಾ ಒಂದು ಪುಟ್ಟ ಪದವನ್ನೂ ಹೇಳದೆ ನಿರ್ಲಿಪ್ತವಾಗಿ ಮುಂದಿನ ನಿಲ್ದಾಣದತ್ತ ಹೊರಟುಹೋಗುತ್ತದೆ. ಕೈಯ್ಯಲ್ಲಿ ಉಳಿಯುವುದು ನಾವು ಖರೀದಿಸಿದ ಟಿಕೆಟು, ದೂರದಲ್ಲಿ ಅಸ್ಪಷ್ಟವಾಗಿ ಕಾಣುವ ಹಿಂದಿನ ಲೈಟು ಮಾತ್ರ.

ಪ್ರಯಾಣವೂ ಎಷ್ಟೊಂದು ಫಿಲಾಸಫಿ ತೋರಿಸಿಕೊಡುತ್ತದೆ ಅಲ್ವೇ...

................................



ಹಾಯಿ ದೋಣಿಯ ಹಾಗೆ...



ಸಮುದ್ರದ ನಡುವೆಯೊಂದು ಹಾಯಿ ದೋಣಿ...
ಅಂಬಿಗನಿಲ್ಲ, ಮೋಟಾರು ಅಳವಡಿಸಿಲ್ಲ, ಗಾಳಿ ಬಂದ ದಿಕ್ಕಿಗೆ ಸಾಗಲೇಬೇಕು ದೋಣಿ.
ದೋಣಿ ಸಾಗಿ ದಡವನ್ನೂ ಸೇರಬಹುದು, ಜಾಸ್ತಿ ಗಾಳಿ ಬಂದು ಮಗುಚಿದರೆ ಮುಳುಗಲೂ ಬಹುದು.
ನಿರ್ಜನ ಕಡಲಿನ ನಡುವೆ ಮುಳುಗಿದರೆ ಅದಕ್ಕೆ ಸಾಕ್ಷಿಯಾದರೂ ಎಲ್ಲಿದೆ?
ಮುಳುಗಿದರೆ, ದೋಣಿಯೊಳಗಿರುವವರು ಮುಳುಗಲೇಬೇಕು ತಾನೆ...?
ಜೀವಿಯೊಂದರ ಬದುಕು ಪೂರ್ವನಿಗದಿತ ಅಂತಾದರೆ ಬಹುಷಃ ಆ ಹಾಯಿದೋಣಿಯೊಳಗಿರುವವರಿಗೂ ಒಂದು ಆಯುಷ್ಯ ಅಂತ ಇರುತ್ತದೆ. ಅಲ್ವ? 
ತಾನೆಷ್ಟೇ ಹೊಯ್ದಾಡಿದರೂ ಬದುಕುವ ಪ್ರಯತ್ನ ಮಾಡಿದರೂ ನಿಗದಿತ ಅವಧಿಯ ತನಕ ಪೇಚಾಡುವುದು ತಪ್ಪಿದ್ದಲ್ಲ... ಮುಳುಗಲೇ ಬೇಕೆಂದು ಹಣೆಯಲ್ಲಿ ಬರೆದಿದ್ದರೆ ಸಣ್ಣದೊಂದು ಸುಳಿಯೂ ದೋಣಿಯನ್ನು ಮುಳುಗಿಸಬಲ್ಲದು. ಇಲ್ಲವಾದರಲ್ಲಿ, ಊಹೆಗೂ ಸಿಲುಕದ ಜಲರಾಶಿಯೊಳಗೆ ಪುಟ್ಟದೊಂದು ಹಾಯಿ ದೋಣಿಗೆ ಹುಟ್ಟು ಹಾಕಿ ಬಚಾವಾಗುತ್ತೇನೆಂಬ ಪ್ರಯತ್ನ ಹುಚ್ಚಲ್ಲದೆ ಮತ್ತೇನು?
ಸಮುದ್ರದ ತಟ ಚಂದ, ಅಲೆಗಳ ಹೊಯ್ದಾಟ ಚಂದ, ಮುಳುಗುವ ಸೂರ್ಯ ಚೆಂದ, ಮರಳ ರಾಶಿ ಮೇಲೆ ಬರಿಗಾಲಲಲ್ಲಿ ನಡೆಯುವುದು ಚೆಂದ. ಹೌದಲ್ಲ? ಆದರೆ ಮುಳುಗುವ ಹೊತ್ತಿಗೆ ಇವುಗಳೆಲ್ಲಾ ಚೆಂದವಾಗಿಯೇ ಕಾಣಿಸುತ್ತದೆಯೇ? ಅಥವಾ ಆ ಅನುಭೂತಿಯನ್ನು ಆಸ್ವಾದಿಸುವ ಮನ:ಸ್ಥಿತಿ ಅಲ್ಲಿರುತ್ತದೆಯೇ...
ಎಂತಹ ಸೌಂದರ್ಯ ರಾಶಿಯಾದರೂ ಪರಿಸ್ಥಿತಿಯ ಇಬ್ಬಂದಿಯಲ್ಲಿ ಸಿಕ್ಕಿದ ಹೊತ್ತಿಗೆ ಅಸಹಾಯಕವಾಗಿ ಕಾಣಿಸುವುದೋ, ಏನೂ ಅಲ್ಲದಂತೆ ಭಾಸವಾಗುವುದೋ ಸಹಜವೋ ಏನೋ...!
 
ಸುರಿಯುವ ಮಳೆ, ಕಾಲಿಗೆ ಕಚಗುಳಿ ಇಡುವ ಇಬ್ಬನಿ, ಜಾಜಿ ಮಲ್ಲಿಗೆಯ ಪರಿಮಳ, ಮುಸ್ಸಂಜೆ ಉದಿಯಿಸುವ ಚಂದಿರ ಎಲ್ಲಾ ಕಾಡಬೇಕಾದರೆ ಮನಸ್ಸು ಪ್ರಶಾಂತವಾಗಿರಬೇಕು, ಹಾಯಿ ದೋಣಿಯ ಹೊಯ್ದಾಟದ ಉದ್ವೇಗದಲ್ಲಿ ಅವು ಕಾಣಿಸುವುದೇ ಇಲ್ಲ... ಕಂಡರೂ ಕಚಗುಳಿ ನೀಡುವುದಿಲ್ಲ...ಮತ್ತೆ ಮಧುರ ನೆನಪುಗಳಾಗಿ ಕಾಡುವುದೂ ಇಲ್ಲ...
 
ದಟ್ಟ ನೀರಿನ ನಡುವೆ ಪೇಚಾಡುವ ದೋಣಿಯನ್ನು ದಡದಿಂದ ನೋಡಬಲ್ಲವರು ನೂರಾರು ಮಂದಿಯಿದ್ದರೂ ಮುಳುಗುವ ಹೊತ್ತಿಗೆ ಅಲ್ಲಿಂದ ಸಲಹೆ ಕೊಟ್ಟಾರೇ ವಿನಃ ಹತ್ತಿರ ಬಂದು ದೋಣಿಯ ಎತ್ತಿ ಹಿಡಿಯಲಾರರಲ್ಲವೇ? ಅದು ಮತ್ತೊಂದು ದೋಣಿ ಮುಳುಗಿದ ಸುದ್ದಿಗೆ ಸೀಮಿತವಾಗಿ ಉಳಿಯಬಹುದೇ...?
 
ಮೊಬೈಲಿನಲ್ಲಿ ಸಾವಿರ ಸಾವಿರ ಕಾಂಟ್ಯಾಕ್ಟುಗಳು ರಕ್ಷಿಸುವ ಜ್ಞಾಪಕಕೋಶ ಇದ್ದರೂ, ಗಂಟೆಗೆ ನೂರು ಗಟ್ಟಲೆ ಸಂದೇಶಗಳು ಬಂದು ಬಿದ್ದರೂ... ಕೂತಲ್ಲಿ, ನಿಂತಲ್ಲಿ ಬರುವ ಕರೆಗಳು ಕಾಯುತ್ತಿದ್ದರೂ ಅಸಹಾಯಕತೆಯಲ್ಲಿ, ದಡ ಕಾಣದ ಹೊಯ್ದಾಟದಲ್ಲಿ ಎಲ್ಲರೂ ಒಂಟಿಗಳೇ...
ಹೋಗುವಾಗಲೂ, ಬರುವಾಗಲೂ...

No comments: