ದೂರದ ಬೆಟ್ಟ...



ದೂರದಲ್ಲೊಂದು ಬೆಟ್ಟದ ಶ್ರೇಣಿ... ಮಸುಕು ಮಸುಕು ಶಿಖರ, ನೀಲಿ ಮಿಶ್ರಿತ ಹಸಿರು ಮರಗಳ ಸಾಲು, ಕಾಲಿಡಲೂ ಜಾಗವಿರಲಾರದೆಂಬ ಭಾಸ, ಪುಟ್ಟ ಬೆಳ್ಳಿಯ ತಂತಿಯಂತೆ ಕಾಣುವ ಜಲಪಾತದ ಬಿಂಬ, ಮುಗಿಲು ಚುಂಬಿಸುವಷ್ಟು ಎತ್ತರವಿರಬಹುದೆಂಬ ಅಚ್ಚರಿ... ಬಹುಷಹ ಆ ಬೆಟ್ಟದ ತುದಿ ವರೆಗೆ ನಡೆದು ಹೋಗಲು ಅಸಾಧ್ಯವೇ ಎಂಬ ಸ್ವನಿರ್ಣಯ ನಾವಿದ್ದಲ್ಲೇ ಮಾಡೋಣ ಎನಿಸಬಹುದು...
ಅಸಲಿಗೆ ದೂರದಿಂದ ಕಂಡ ಬೆಟ್ಟದ ಬಳಿಗೆ ತಾಳ್ಮೆಯಿಂದ ಹೋದರೆ, ನಡೆದು ನೋಡಿದರೆ, ಪರೀಕ್ಷಿಸುವ ಸಂಯಮ ಇದ್ದರೆ, ಆ ಬೆಟ್ಟ ದೂರಕ್ಕೆ ಗೋಚರವಾದ ಸ್ಥಿತಿಯಲ್ಲೇ ಇರುತ್ತದೆಯೇ...?


ಇರಬೇಕಾಗಿಲ್ಲ. ಬಿಲ್ ಕುಲ್ ಇರಬೇಕಿಲ್ಲ. ಒತ್ತೊತ್ತಾಗಿಲ್ಲದೆ ವಿರಳವಾಗಿರುವ ಮರಗಳ ಸಮೂಹವೂ ದೂರದಿಂದ ಕಂಡಾಗ ದಟ್ಟಾರಣ್ಯದ ಹಾಗೆ ಗೋಚರವಾಗುತ್ತದೆ, ಬೆಳ್ಳಿ ತಂತಿಯ ಹಾಗಿ ನಿಶ್ಯಬ್ಧವಾಗಿ ಹರಿಯುವ ನೀರನ ಧಾರೆ ದೊಡ್ಡದೊಂದು ಸದ್ದಿನಿಂದ ಧುಮುಕುವ ಜಲಪಾತವಾಗಿರಲೂ ಬಹುದು, ಮರಗಳ ನಡುವೆ, ಪುಟ್ಟ ಪುಟ್ಟ ಹುಲ್ಲುಗಾವಲುಗಳಿದ್ದು ಮನುಷ್ಯರು, ಪ್ರಾಣಿಗಳು ನಡೆದಾಡುವಷ್ಟು ಕಾಲು ದಾರಿಗಳೂ ಇರುತ್ತವೆ. ಇನ್ನೂ ವಿಶೇಷವೇನೆಂದರೆ, ಪ್ರಪಂಚದ ಅತಿ ಎತ್ತರದ ಬೆಟ್ಟವೆಂದು ನಾವಂದುಕೊಳ್ಳುವಂತೆ ಮಾಡಿದ ಆ ಶಿಖರದ ತುದಿ ತಲುಪಿ ಸುತ್ತಮುತ್ತ ನೋಡಿದರೆ ಅದಕ್ಕಿಂತ ಎತ್ತರದ ಇನ್ನಷ್ಟು ಶಿಖರಗಳು ನಮ್ಮನ್ನು ಮರಳು ಮಾಡುತ್ತವೆ... ಅಲ್ವೇ..?

ಕಣ್ಣಿಗೆ ಕಂಡದ್ದು, ನಮ್ಮ ಯೋಚನೆಯ ಸೀಮಿತ ವ್ಯಾಪ್ತಿಯಲ್ಲಿ ನಾವು ಗ್ರಹಿಸಿದ್ದು, ಅದಕ್ಕೆ ಮತ್ತಷ್ಟು ನಿರೀಕ್ಷೆಗಳು, ಊಹೆಗಳನ್ನು ಬೆರೆಸಿದ್ದು ಸೇರಿಸಿ ಒಂದು ಚಿತ್ರಣ ನಮ್ಮ ಮನಸ್ಸಿನಲ್ಲಿ ಮೂಡುತ್ತದೆಯಲ್ವ ಅದುವೆ ನಿಜವಾಗಿರಬೇಕಾಗಿಲ್ಲ. ಬೆಟ್ಟವೇ ಇರಲಿ ವ್ಯಕ್ತಿಯೇ ಇರಲಿ ವರ್ಷಗಟ್ಟಲೆ ದೂರದಿಂದಲೇ ಅವರನ್ನು ಗಮನಿಸುತ್ತಾ ನಮ್ಮದೇ ಚಿತ್ರಣ ಸೃಷ್ಟಿಯಾಗಿ, ಅದಕ್ಕೆ ಮತ್ತಷ್ಟು ಆಧಾರರಹಿತ ವ್ಯಕ್ತಿತ್ವದ ಕಲ್ಪನೆಗಳು ಸೇರಿ ಒಂದು ಪೂರ್ವಗ್ರಹ ಮಾದರಿಯ ನಿಲುವು ಸಿದ್ಧವಾಗಿರುತ್ತದೆ. ಅದು ಮನಸ್ಸಿನಲ್ಲಿ ಆಳವಾಗಿ ನೆಲೆಯಾಗಿರುತ್ತದೆ. ದೂರದಿಂದ ಬೆಟ್ಟವನ್ನಾಗಲೀ, ಬೆಟ್ಟದಂತಿರುವ ವ್ಯಕ್ತಿಯನ್ನಾಗಲೀ ಕಂಡಾಗಲೆಲ್ಲಾ ನಮ್ಮ ಮನಸ್ಸಿನಲ್ಲಿ ಬೇರೂರಿರುವ ಪೂರ್ವಾಗ್ರಹಿತ ವ್ಯಕ್ತಿತ್ವವೇ ಮೌನವಾಗಿ ನಮಗೆ ಅವರನ್ನು ಪರಿಚಯಿಸುತ್ತಾ ಇರುತ್ತದೆ.

ಆದರೆ...
ಯಾವತ್ತೋ ಒಂದು ದಿನ ಬೆಟ್ಟದ ಬಳಿಗೆ ಹೋಗುವ ಸಂದರ್ಭ ಬಂದಾಗಲೇ ತಿಳಿಯುವುದು. ಇಷ್ಟು ವರ್ಷದಿಂದ ಕಂಡ ಬೆಟ್ಟ ಅದಿರುವುದು ಹಾಗಲ್ಲ, ವಾಸ್ತವ ಬೇರೆ ಅಂತ.

ವ್ಯಕ್ತಿಗಳ ಹತ್ತಿರ ಹೋಗಿ ಮಾತನಾಡಿದಾಗ ನಮ್ಮ ನಿಲುವು ಬದಲಾಗಬಹುದು, ಅವರು ಆತ್ಮೀಯರಾದಾಗ ನಿಲುವು ಮತ್ತಷ್ಟು ಬದಲಾಗಬಹುದು, ಅವರು ನಿಮ್ಮ ಆತ್ಮೀಯರಾಗಿ ಇನ್ನಷ್ಟು ಅವರ ಬದುಕಿನ ಬಗ್ಗೆ ನಿಮಗೆ ತಿಳಿದುಕೊಳ್ಳಲು ಅವಕಾಶ ಸಿಕ್ಕರೆ ನಿಮ್ಮ ಕಲ್ಪನೆಯ ಅವರ ವ್ಯಕ್ತಿತ್ವಕ್ಕೂ ವಾಸ್ತವದಲ್ಲಿ ಅವರಿರುವ ರೀತಿಗೂ ವ್ಯತ್ಯಾಸವನ್ನು ಕಂಡುಕೊಳ್ಳಲು ನಿಮಗೆ ಸಾಧ್ಯವಾಗಬಹುದು.

ಪರಮ ದುರಹಂಕಾರಿಯಂತೆ ಕಾಣುವಾತ ಪರಮ ಸಾತ್ವಿಕನಿರಬಹುದು, ನಗುಮುಖದ ಅರಸರಂತೆ ಓಡಾಡುವರು ಅತ್ಯಂತ ಮುಂಗೋಪಿಗಳಿರಬಹುದು, ಅತಿ ವಿನಯ ಪ್ರದರ್ಶಿಸುತ್ತಾ ಹತ್ತಿರ ಬರುವವರು ಪರಮ ಚಾಲಾಕಿಗಳಿರಬಹುದು. ಯಾರೊಡನೆಯೂ ಬೆರೆಯದೆ ತಮ್ಮ ಪಾಡಿಗೆ ಮೌನಿಗಳಾಗಿರುವವರು ವೈಯಕ್ತಿಕ ಸಂಬಂಧಗಳಲ್ಲಿ ಅತ್ಯಂತ ಸ್ನೇಹಪರರಾಗಿ, ಸಮಸ್ಯೆಗಳಿಗೆ ಸ್ಪಂದಿಸುವವರಾಗಿರಬಹುದು. ಅವರ ಬದುಕಿನಲ್ಲಿ ಯಾಕೆ ಮೌನ ಆವರಿಸಿದೆ ಎಂಬುದು ಅವರನ್ನು ಮಾತನಾಡಿಸಿದಾಗಲಷ್ಟೇ ನಿಮಗೆ ತಿಳಿಯಬಹುದು.

ಮನಸ್ಸಿನಾಳದಲ್ಲಿ ಹುದುಗಿರುವ ಆತ್ಮೀಯತೆ, ಸ್ನೇಹ, ಪ್ರೀತಿ, ದ್ವೇಷ, ತಿರಸ್ಕಾರಗಳ ಮಾಪನವನ್ನು, ಅದು ಶೇಖರವಾಗಿರಲು ಕಾರಣವನ್ನು, ಅದರ ಹಿನ್ನೆಲೆಯನ್ನು ಕೇವಲ ವರ್ಷಗಟಲ್ಲೇ ದೂರದಿಂದಲೇ ನೋಡುತ್ತಾ ಬಂದಾಗ ಮಾತ್ರ ಕಂಡುಹಿಡಿಯಲು ಸಾಧ್ಯವಿಲ್ಲ. ಅಂತಹ ಯಂತ್ರಗಳು ಇನ್ನೂ ಅಭಿವೃದ್ಧಿಯಾಗಿಲ್ಲ. ಇದೇ ಕಾರಣಕ್ಕೆ ವ್ಯಕ್ತಿ ವ್ಯಕ್ತಿಗಳ ನಡುವೆ ವಿನಾ ಕಾರಣದ ಅಪ್ರಚೋದಿತ ಪೂರ್ವಾಗ್ರಹಗಳಿರುತ್ತವೆ.

ಬಿಗಿದುಟಿ, ಗಂಭೀರ ವದನ, ಅಸ್ತವ್ಯಸ್ತ ಉಡುಪು, ಶೂನ್ಯದತ್ತ ದೃಷ್ಟಿ, ನತಮಸ್ತಕರಾಗಿ ನಡೆಯೋದು, ಭೇಟಿಯಾದರೂ ಜಾಸ್ತಿ ಮಾತನಾಡದೇ ಇರುವುದು, ತಮ್ಮ ಬಗ್ಗೆ ಏನೂ ಹೇಳದಿರುವುದು, ಯಾವಾಗಲೂ ಒಂಟಿಯಾಗಿರಲು ಬಯಸೋದು...
ಹೀಗೆಲ್ಲಾ ಇರುವುದಕ್ಕೆ ಏನಾದರೂ ಕಾರಣಗಳಿರುತ್ತವೆ ಅಲ್ಲವೇ...? ವಿನಾ ಕಾರಣ ಯಾರೂ ಹಾಗಿರುವುದಿಲ್ಲ. ಎಷ್ಟೋ ಬಾರಿ ಪರಿಚಯ ಆದವರನ್ನೇ ಅರ್ಥ ಮಾಡಿಕೊಳ್ಳಲು, ತಿಳಿದುಕೊಳ್ಳಲು ವರ್ಷಗಟ್ಟಲಿನ ಸಾಮಿಪ್ಯವೇ ಸಾಕಾಗುವುದಿಲ್ಲ ಅವರಾಗಿ ಹೇಳಿಕೊಳ್ಳುವ ತನಕ.


ಹಿರಿಯ ಸಾಹಿತಿಯೊಬ್ಬರು ಹೇಳುತ್ತಾರೆ... ವ್ಯಕ್ತಿಗಳನ್ನು ದೂರದಿಂದ ಕಂಡಾಗ ಇರುವ ಅಭಿಮಾನ ಎಷ್ಟೋ ಸಾರಿ ಅವರನ್ನು ಹತ್ತಿರದಿಂದ ಕಂಡಾಗ ಕಡಿಮೆಯಾಗುತ್ತದೆ ಅಂತ. ಅವರ ಕುರಿತಾಗಿ ನಮಗಿರುವ ಅಭಿಮಾನ, ಆರಾಧನೆ, ಅವರೊಬ್ಬ ಮಹೋನ್ನತ ವ್ಯಕ್ತಿಯಾಗಿರಬಹುದೆಂಬ ಹುಸಿ ಕಲ್ಪನೆಗಳು ಅವರ ಪರಿಚಯವಾಗಿ, ಅವರ ವ್ಯಕ್ತಿತ್ವದ ನಿಜ ದರ್ಶನವಾದ ನಂತರ ಹೊರಟು ಹೋಗುವುದಿದೆ.
ಯಾಕೆಂದರೆ ಬಾಹ್ಯವಾಗಿ ಕಂಡು ಬರುವ ನಗು, ಉಡುಪು, ನಡೆನುಡಿ, ಅವರಿವರು ಹೇಳಿವುದು ಮಾತ್ರ ಪೂರ್ಣ ವ್ಯಕ್ತಿತ್ವವಾಗಿರಬೇಕಾಗಿಲ್ಲ. ನಮ್ಮ ಕಣ್ಣುಗಳೇನೂ ಎಕ್ಸರೇ ಪಟಲಗಳನ್ನು ಹೊಂದಿಲ್ಲವಲ್ಲ. ನೈಜತೆ ಗೊತ್ತಾಗಬೇಕಾದರೆ ಸಾಮಿಪ್ಯ ಬೇಕು, ಮತ್ತು ಕೆಲವು ನಿದರ್ಶನಗಳು ಸಿಗಬೇಕು. ಅದಕ್ಕೇ ಸಾಹಿತಿಗಳು ಹೇಳಿದ್ದು.... ದೂರದಿಂದ ಕಾಣುವಾಗ, ಗೌರವಿಸುವಾಗ ಇರುವ ಗೌರವ ಹತ್ತಿರದಿಂದ ಕಂಡಾಗ ತನ್ನಷ್ಟಕ್ಕೇ ಮಾಯವಾಗುತ್ತದೆ ಅಂತ.

ಇದೇ ಮಾತನ್ನು ವಿರುದ್ಧಾರ್ಥಕವಾಗಿಯೂ ಬಳಸಬಹುದು.
ದೂರದಿಂದ ಕಾಣುವಾಗ ನಮಗೆ ಇಷ್ಟವೇ ಆಗದವರು ಹತ್ತಿರದವರಾದಾಗ ಅವರೊಳಗಿರಬಹುದಾದ ಮಾನವೀಯ ಅಂಶಗಳು ನಮ್ಮನ್ನು ಸೆಳೆಯಬಹುದು. ಅವರು ಆಪ್ತರಾಗಬಹುದು. ಅರ್ಥವೇ ಆಗದ ವ್ಯಕ್ತಿಗಳೂ ಹಾಗಿರಲು ಯಾಕೆ ಕಾರಣ ಎಂಬುದೂ ನಮ್ಮ ಅರಿವಿಗೆ ಸಿಗಬಹುದು...


ಎಲ್ಲದಕ್ಕೂ ಕಾಣುವ ಕಣ್ಣು, ಅದನ್ನು ವಿಶ್ಲೇಷಿಸಬಲ್ಲ ನಿಷ್ಪಕ್ಷಪಾತ ಮನಸ್ಸು ಮತ್ತು ಹತ್ತಿರ ಹೋಗಿ ಮಾತನಾಡಿಸುವ ತಾಳ್ಮೆ, ವಿವೇಚನೆ ಮತ್ತು ಪೂರ್ವಾಗ್ರಹವನ್ನು ಬಿಟ್ಟು ಅರಿತುಕೊಳ್ಳುವ ಮನಸ್ಸು ಬೇಕು ಅಲ್ವೇ....

No comments: