ನಿರ್ದೇಶನ, ನಿರ್ಮಾಣ ಡಾ.ಬಿ.ಎಂ.ಶರಭೇಂದ್ರ ಸ್ವಾಮಿ...!







ಸರ್ಕಾರಿ ಉದ್ಯೋಗಗಿಳಾಗಿರುವವರು ಹಲವಿರುರುತ್ತಾರೆ. ವರ್ಷಗಟ್ಟಲೆ ಕರ್ತವ್ಯ ನಿರ್ವಹಿಸಿ (ಸೇವೆ ಸಲ್ಲಿಸುವ ಪದ ಸಮಂಜಸ ಅನಿಸುವುದಿಲ್ಲ) ವರ್ಗಾವಣೆ ಹೊಂದುವುದು ಅಥವಾ ನಿವೃತ್ತರಾಗುವುದು ಸಹಜ, ಸಾಮಾನ್ಯ ಪ್ರಕ್ರಿಯೆ. ಇಂತಹ ಮಹತ್ವದ ಘಟ್ಟದಲ್ಲೇ ಅಧಿಕಾರಿಗಳ ಸರ್ಕಾರಿ ಸೇವೆಯ ಕುರಿತು ಜನಸಾಮಾನ್ಯರು ನೆನಪಿಸಲು ಅಥವಾ ಆ ಕುರಿತು ಪ್ರತಿಕ್ರಿಯಿಸಲು ಅವಕಾಶ ಸಿಕ್ಕುವುದು. ಸಾವಿರಾರು ಮಂದಿ ಸರ್ಕಾರಿ ವೃತ್ತಿಗಳಲ್ಲಿ ತೊಡಗಿದ್ದರೂ, ಒಂದು ಹಂತದಲ್ಲಿ ಅವರೆಲ್ಲರೂ ನಮ್ಮ ನೆನಪಿನಲ್ಲಿ ಗಾಢವಾಗಿ ಉಳಿಯುವುದೋ ಅಥವಾ ಮತ್ತೆ ಮತ್ತೆ ನೆನಪಿಸುವಂಥದ್ದೋ ಸಂದರ್ಭ ಬರುವುದಿಲ್ಲ. ಅಷ್ಟರ ಮಟ್ಟಿಗೆ ಅವರು ಆವರಿಸಿದರೆ ಮಾತ್ರ ಅವರ ಅನುಪಸ್ಥಿತಿ ನಮ್ಮಲ್ಲೊಂದು ವಿಷಾದ ಭಾವವನ್ನು ಹುಟ್ಟು ಹಾಕುತ್ತದೆ...

ಮಂಗಳೂರು ಆಕಾಶವಾಣಿಯಿಂದ ರಾಯಚೂರಿಗೆ ವರ್ಗಾವಣೆ ಹೊಂದುತ್ತಿರುವ ಹಿನ್ನೆಲೆಯಲ್ಲಿ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ಅವರ ಕುರಿತು ಮಂಗಳೂರು ಆಕಾಶವಾಣಿ ಗ್ರೂಪ್ ಅಡ್ಮಿನ್ ಚಂದ್ರಶೇಖರ ಶೆಟ್ಟಿ ಹಾಗೂ ಹಿರಿಯ ಕ್ಯಾಶುವಲ್ ವಿದ್ಯಾ ಶೇಡಿಗುಮ್ಮೆ ಅವರು, ಬರೆದಾಗ ನನಗೂ ಏನೂ ಹೇಳದೆ ಸುಮ್ಮನಿರಲಾಗಲಿಲ್ಲ....


ಅದೆಷ್ಟೋ ವರ್ಷಗಳಿಂದ ಕೇಳುತ್ತಾ ಬಂದಿರುವ ಧ್ವನಿ. (ಎಷ್ಟು ವರ್ಷಗಳಿಂದ ಅಂತ ನೆನಪಿಡಲಿಲ್ಲ) ಮೊದಲೆಲ್ಲ ನಾಟಕಗಳು ಪ್ರಸಾರವಾದಾಗಲೆಲ್ಲಾ ನಿರ್ಮಾಣ ಮತ್ತು ನಿರ್ದೇಶನ ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ಅಂತ ಕೇಳುತ್ತಾ ಬಂದ ಹೆಸರದು (ತುಂಬ ಮಂದಿ ಪತ್ರಕರ್ತ ಮಿತ್ರರು ಅವರ ಹೆಸರನ್ನು ತಪ್ಪಾಗಿ ಉಚ್ಚರಿಸುತ್ತಿರುತ್ತಾರೆ). ನಂತರದ ದಿನಗಳಲ್ಲಿ ಕಥೆ ಇನ್ನೂ ಇದೆ, ಅನುಭವದಡುಗೆಯ ಮಾಡಿ, ತಾಳಮದ್ದಳೆ, ಕೆಂಪುಕಳವೆ ಮತ್ತಿತರ ಹಿಟ್ ಬಾನುಲಿ ಧಾರಾವಾಹಿಗಳನ್ನು ಅವರು ನಿರ್ಮಿಸಿದ ಬಳಿಕ ಉಂಟಾದ ಅಭಿಮಾನವೇ ಬೇರೆ. ಹಿರಿಯ ಲೇಖಕ ಕೆ.ಟಿ.ಗಟ್ಟಿ ಹಾಗೂ ನಿರ್ದೇಶಕ ಡಾ.ಬಿ.ಎಂ.ಶರಭೇಂದ್ರ ಸ್ವಾಮಿ ಅವರ ಸಹಯೋಗದಲ್ಲಿ ಬಂದ ಈ ಪ್ರತಿ ಧಾರಾವಾಹಿಯೂ ಅಷ್ಟೊಂದು ಅಚ್ಚುಕಟ್ಟು ಹಾಗೂ ಕೇಳುಗರನ್ನು ಪರಿಣಾಮಕಾಗಿ ತಲುಪಿದೆ ಎಂಬುದು ಉತ್ಪ್ರೇಕ್ಷೆಯ ಮಾತಲ್ಲ. ನನ್ನ ಸ್ನೇಹಿತ ವಲಯ ಹಾಗೂ ಆಕಾಶವಾಣಿಯ ಕೇಳುಗ ವರ್ಗದವರು ಸಿಕ್ಕಾಗಲೆಲ್ಲಾ ಈ ಎಲ್ಲಾ ಧಾರಾವಾಹಿಗಳ ಕುರಿತು ಅವರು ಚರ್ಚಿಸಿದ್ದು, ಅಭಿಪ್ರಾಯಗಳನ್ನು ಸ್ವಯಂಪ್ರೇರಿತವಾಗಿ ಹಂಚಿಕೊಳ್ಳುತ್ತಿದುದೇ ಇದಕ್ಕೆ ಸಾಕ್ಷಿ.
ಅದರಲ್ಲೂ ಕೆಂಪು ಕಳವೆ ಮೂಲ ಕಾದಂಬರಿ ಓದಿದವರಿಗೆ ತಿಳಿಯುತ್ತದೆ. ಲೇಖಕ ತನ್ನ ಕಥೆಯನ್ನು ನಿರೂಪಿಸುತ್ತಾ ಹೋದ ಕಥೆಯನ್ನು ನಾಟಕ ರೂಪಕ್,ಕೆ ಅದರಲ್ಲೂ ರೇಡಿಯೋ ನಾಟಕ ರೂಪಕ್ಕೆ ತರುವುದು ಎಷ್ಟು ಕಷ್ಟ ಅಂತ. ಆರಂಭದಲ್ಲಿ ಆ ಕಾದಂಬರಿ ಓದಿದಾಗ ಇವರು ಹೇಗೆ ಇದನ್ನು ಬಾನುಲಿಗೆ ಅಳವಡಿಸಿ ಜನರನ್ನು ತಲಪುತ್ತಾರೆ ಎಂಬ ಶಂಕೆ ಮೂಡಿತ್ತು. ಸರಣಿಯಾಗಿ 40ಕ್ಕೂ ಅಧಿಕ ಕಂತುಗಳಲ್ಲಿ ಪ್ರಸಾರವಾದ ಬಳಿಕ ಈ ಕಾರ್ಯಕ್ರಮಕ್ಕೆ ದೊರಕಿದ ಪ್ರತಿಕ್ರಿಯೆಯೇ ಬೇರೆ. ಅದು ನಿರ್ದೇಶಕರಾಗಿ ಅವರು ತೋರಿಸಿಕೊಟ್ಟ ಸಾಧನೆ.

ಅನುಭವದಡುಗೆಯ ಮಾಡಿ ಧಾರಾವಾಹಿಯ ಮಸಾಲೆ ದೋಸೆಯ ಪರಿಮಳ, ತಾಳಮದ್ದಳೆ ಧಾರಾವಾಹಿಯ ಭಾಷಾ ವೈವಿಧ್ಯತೆ, ಹನಿ ಹನಿ ಇಬ್ಬನಿ ಸರಣಿಯಲ್ಲಿ ಪರಿಚಯಿಸಿದ ಸಿನಿಮಾ ಮಾಹಿತಿಗಳು, ಕಥಾಮೃತದಲ್ಲಿ ಹೇಳುತ್ತಿದ್ದ ಕಥೆಗಳು ಮಾತ್ರವಲ್ಲ... ಅವರು ನಿರ್ದೇಶಿಸಿ, ನಿರ್ಮಾಣ ಮಾಡಿದ ಅಸಂಖ್ಯಾತ ನಾಟಕಗಳು.... ಮಂಗಳೂರು ಕೇಂದ್ರ ಮಾತ್ರವಲ್ಲ, ರಾಜ್ಯವ್ಯಾಪಿ ಪ್ರಸಾರವಾಗಿದ್ದು ಕೇಂದ್ರಕ್ಕೂ ಹೆಸರು ತಂದುಕೊಟ್ಟಿದೆ ಎಂದುಕೊಳ್ಳುತ್ತೇನೆ. ಅವರೆಷ್ಟು ಕಾರ್ಯಕ್ರಮ ಮಾಡಿದ್ದಾರೆ, ಎಷ್ಟು ವರ್ಷ ಇಲ್ಲಿ ದುಡಿದರು ಎಂಬುದು ವಿಷಯವಲ್ಲ. ಅವರೆಷ್ಟು ತೀವ್ರವಾಗಿ ಕೇಳುಗರನ್ನು ಆವರಿಸಿಕೊಂಡಿದ್ದಾರೆ ಎಂಬುದು ಅವರು ಹೋಗುವ ಸಂದರ್ಭ ಬೇಸರ ಉಂಟು ಮಾಡುತ್ತದೆ.

ದೈವದತ್ತವಾಗಿ ಬಂದಿರಬಹುದಾದ ಅವರ ವಿಶಿಷ್ಟ ಧ್ವನಿ, ಸುಸ್ಪಷ್ಟ ಉಚ್ಛಾರಣೆ ಮತ್ತು ಅವರು ಮಾತಿನ ನಡುವೆ ಬಳಸುವ ಪಾಸ್ (ನಿಶ್ಯಬ್ಧ).... ಮಾತುಗಳನ್ನು ಇನ್ನಷ್ಟು ಇಂಪಾಗಿಸುತ್ತದೆ. ಕಥಾಮೃತದಲ್ಲಿ ಅವರ ನಿರೂಪಣೆ ವೇಗವಾಗಿರುತ್ತದೆ. ಆದರೆ ಅವರು ವಾಕ್ಯದ ನಡು ನಡುವೆ ನೀಡುವ ಪುಟ್ಟ ಪುಟ್ಟ ಬಿಡುವುಗಳು ನಿರೂಪಣೆಯ ವೇಗದ ಪ್ರಭಾವವನ್ನು ತಗ್ಗಿಸುತ್ತದೆ. ಮಾತುಗಳನ್ನು ಕೇಳಿಸುತ್ತಾ ಹೋಗುತ್ತದೆ. ಉಚ್ಛಾರಣೆ ಮತ್ತು ಪದ ಬಳಕೆ ಕೂಡಾ ಅಷ್ಟೇ. ವಾರದ ಅತಿಥಿ ಇರಬಹುದು, ಅಸಂಖ್ಯಾತ ಸಂದರ್ಶನಗಳಿರಬಹುದು, ನಾಟಕಗಳಲ್ಲಿ ಅವರೇ ನಿರ್ವಹಿಸಿದ ಸಣ್ಣ ಪುಟ್ಟ ಪಾತ್ರಗಳಿರಬಹುದು ಇಲ್ಲೆಲ್ಲಾ ಅವರ ಛಾಪು ಎದ್ದು ಕಾಣುತ್ತದೆ. ಯಾರದ್ದೋ ಅನುಕರಣೆಯಂತೆ ತೋರುವುದಿಲ್ಲ.

ಅವರ ಜೊತೆ ಕೆಲಸ ಮಾಡುತ್ತಾ ಬಂದ ತಾತ್ಕಾಲಿಕ ನಿರೂಪಕರ ಮೇಲೆಲ್ಲಾ ಅವರ ನಿರೂಪಣೆಯ ಪ್ರಭಾವ ಖಂಡಿತಾ ಬಂದಿರುತ್ತದೆ. ಅವರಿಗೆಲ್ಲ ಅದು ತುಂಬ ಅನೂಕೂಲವೂ ಹೌದು. ರೇಡಿಯೋ ಪ್ರಸಾರಕರಿಗೆ ಬೇಕಾದ ಸೂಕ್ತ ಅನುಭವ, ಮಾರ್ಗದರ್ಶನ ಡಾ.ಸ್ವಾಮಿ ಸರ್ ಅವರಂಥಹ ನುರಿತ ಪ್ರಸಾರಕರಿಂದ ಖಂಡಿತಾ ದೊರಕುತ್ತದೆ. ಅವರೆಲ್ಲಾ ಈ ಸಂದರ್ಭ ಕೃತಜ್ಞರಾಗಿರುತ್ತಾರೆ ಅಂದುಕೊಳ್ಳುತ್ತೇನೆ.

ಯಾವುದೋ ಕಾಲದಲ್ಲಿ ಯುವವಾಣಿ ವಿಭಾಗದಲ್ಲಿ ತಾತ್ಕಾಲಿಕ ನಿರೂಪಕನಾಗಿರುವ ಅವಕಾಶದ ಬಳಿಕ ಇಷ್ಟು ಸಮಯ ರೇಡಿಯೋ ಬಾಂಧವ್ಯ ಮುಂದುವರಿಯಲು ನನಗೆ ಹಾಗೂ ನನ್ನ ಗೆಳೆಯ ಗಣೇಶ ಮಾವಂಜಿಗೆ ಅವಕಾಶ ಕೊಟ್ಟಿದ್ದು ಡಾ.ಸ್ವಾಮಿ ಸರ್ ಅವರು. ಮೇರು ಕಲಾವಿದರ ಜೊತೆಗೆ ನಮಗೂ ಅವಕಾಶ ಕೊಟ್ಟದ್ದು ಮಾತ್ರವಲ್ಲ, ವೈವಿಧ್ಯಮಯ ಪಾತ್ರಗಳಿಗೆ ಧ್ವನಿ ನೀಡುವ ಅವಕಾಶ ಕಲ್ಪಿಸಿದ್ದು ನಮ್ಮಲ್ಲೂ ಕಿಂಚಿತ್ ಸಾರ್ಥಕ ಭಾವ ಮೂಡಿಸುವಂತೆ ಮಾಡಿದ್ದನ್ನು ಮರೆಯಲು ಸಾಧ್ಯವಿಲ್ಲ. ಧ್ವನಿಮುದ್ರಣದ ಸಂದರ್ಭ ಅವರು ಪಾತ್ರ ಹಂಚಿಕೆ ಸಂದರ್ಭ ತುಂಬಾ ನಿಷ್ಠುರರಾಗಿರುತ್ತಾರೆ. ಯಾವ ಪಾತ್ರಕ್ಕೆ ಯಾವ ಕಲಾವಿದರೆಂಬ ಕಲ್ಪನೆ ನಿಖರವಾಗಿ ಅವರಲ್ಲಿರುತ್ತದೆ. ಎಷ್ಟೇ ಹಿರಿಯ ಕಲಾವಿದರಾದರೂ ಮುಲಾಜಿಗೆ ಒಳಗಾಗದೇ, ಒತ್ತಡ ಅನುಭವಿಸದೆ ಪಾತ್ರ ಹಂಚಿಕೆ ಮಾಡುವುದೇ ಅವರ ನಾಟಕಗಳ ಯಶಸ್ಸಿಗೆ ಕಾರಣ ಎಂಬುದು ನನ್ನ ಅರ್ಥೈಸುವಿಕೆ.

ಹಿರಿಯ ಮತ್ತು ಕಿರಿಯ ಸಹೋದ್ಯೋಗಿಗಳ ಜೊತೆ ಅಂತರ ಉಳಿಸದೆ, ಬಾನುಲಿ ಕೇಂದ್ರಕ್ಕೆ ಹೋದಾಗಲೆಲ್ಲ ಎಲ್ಲರ ಜೊತೆ ನೆನಪಿಟ್ಟು, ವಯಸ್ಸಿನ ಭೇದ ಬಿಟ್ಟು ಮಾತನಾಡುವುದು ಇನ್ನೊಂದು ಇಷ್ಟವಾದ ಅಂಶ.
12 ವರ್ಷಗಳ ಹಿಂದೆ ಸುಮಾರು ಒಂದು ವರ್ಷ ಕಾಲ ಪ್ರಸಾರವಾದ ಸಂಡೇ ಟ್ಯೂನ್ಸ್ ಎಂಬ ಬೇರೆ ಶೈಲಿಯ ಸಿನಿಮಾ ಗೀತೆ ಆಧಾರಿತ ಕಾರ್ಯಕ್ರಮ ನಿರ್ಮಾಣದ ರೂವಾರಿ ಡಾ.ಸ್ವಾಮಿ ಸರ್ ಹಾಗೂ ಸೂರ್ಯನಾರಾಯಣ ಭಟ್ ಅವರು. ಆ ಹೆಸರಿನಿಂದ ಹಿಡಿದು ಅದರ ಪರಿಕಲ್ಪನೆ ರೂಪಿಸಿದ್ದೂ ಅವರೇ. ತುಂಬ ಮಂದಿ ತಾತ್ಕಾಲಿಕ ನಿರೂಪಕರಿಗೆ ಈ ರೀತಿಯ ಅವಕಾಶಗಳು ಅವರಿಂದ ಸಿಕ್ಕಿದ್ದು, ಮಾತ್ರವಲ್ಲ ಅವರೆಲ್ಲ ಇಂದು ಸ್ವತಂತ್ರವಾಗಿ ಬೆಳೆಯಲು ರೇಡಿಯೋ ಒಂದು ವೇದಿಕೆ ಕಲ್ಪಿಸಿದೆ.


ವ್ಯಕ್ತಿ ಬೆಳೆಯಲು ಅವಕಾಶ ಮತ್ತು ವೇದಿಕೆ ಅಗತ್ಯ. ವೇದಿಕೆಯೇ ದೊರಕದಿದ್ದರೆ ವ್ಯಕ್ತಿ ತನ್ನನ್ನು ತಾನು ತೋರಿಸಿಕೊಳ್ಳುವುದು ಹೇಗೆ. ವೇದಿಕೆ ಸಿಕ್ಕರೆ ಸಾಲದು, ಅಲ್ಲಿ ಸರಿ ತಪ್ಪುಗಳನ್ನು ನೇರವಾಗಿ ತೋರಿಸಿ ತಿದ್ದುವ ಗುರು, ಮಾರ್ಗದರ್ಶಕರು ಬೇಕು. ಈ ಎರಡು ಕಾರ್ಯಗಳು ಡಾ.ಸ್ವಾಮಿ ಸರ್ ಅವರಿಂದ ದೊರಕಿದೆ. ಅದಕ್ಕೆ ಆಭಾರಿ. ನಾಟಕಗಳ ಧ್ವನಿಮುದ್ರಣ ಇದ್ದಾಗಲೆಲ್ಲಾ ಡಿಂಕಿ ಡೈನ್ ಅಥವಾ ರಾಮಣ್ಣನ ಕ್ಯಾಂಟೀನಿನಲ್ಲಿ ಊಟ ಕೊಡಿಸಿದ್ದು, ತಿಂಡಿ ಕೊಡಿಸಿದ್ದನ್ನೂ ಮರೆಯಲು ಸಾಧ್ಯವಿಲ್ಲ.

ಕೆಲವೊಮ್ಮ ಅವರು ನಾಟಕಗಳಲ್ಲಿ ನಮಗೆ ನೀಡಿದ ಪಾತ್ರಗಳ ಸಂಭಾಷಣೆಯನ್ನು ಅವರ ನಿರೀಕ್ಷೆಗೆ ಪ್ರಸ್ತುತ ಪಡಿಸಲು ಸಾಧ್ಯವಾಗದೇ ಚಡಪಡಿಸಿದ್ದು ಇದೆ (ನಾಟಕ ಧ್ವನಿಮುದ್ರಣ ಮಾಡುತ್ತಿದ್ದ ಸ್ನೇಹಿತರಿಗೆ ಇದು ಗೊತ್ತಿದೆ). ಆಗೆಲ್ಲಾ ಆ ಸಂಭಾಷಣೆಯನ್ನು ಅವರೇ ಓದಿ ಹೇಳುವಾಗ ಎಷ್ಟು ಸುಲಲಿತವಾಗಿ ಮಾತನಾಡ್ತಾರಲ್ಲ ಅಂತ ನಾನು ಮತ್ತು ಗಣೇಶ್ ಮಾತನಾಡಿಕೊಂಡದ್ದು ಇದೆ. ಅವರು ಮಾತು ಮುಗಿಸಿದ ಬಳಿಕ ಅಷ್ಟೇ ಸುಲಭವಾಗಿ ನನಗೆ ಅದನ್ನು ಹೇಳಲು ಸಾಧ್ಯವಾಗದೇ ಇದ್ದರೂ ಅವರದನ್ನು ತಿದ್ದಿ ತಿದ್ದಿ ಪ್ರಯತ್ನ ಬಿಡದೆ ಧ್ವನಿಮುದ್ರಣ ಮಾಡಿಸಿಯೇ ಬಿಡುತ್ತಿದ್ದರು. 2010ರಲ್ಲಿ ಪ್ರಸಾರವಾದ ಕೆ.ಟಿ.ಗಟ್ಟಿ ಅವರ ತಾಳಮದ್ದಳೆ ಹಾಗೂ 2017ರಲ್ಲಿ ಪ್ರಸಾರವಾದ ಕೆಂಪು ಕಳವೆ ಎರಡೂ ಧಾರಾವಾಹಿಗಳ ಧ್ವನಿಮುದ್ರಣ ಅವಧಿಯನ್ನು ಮರೆಯುವಂತೆಯೇ ಇಲ್ಲ... ಅಂತಹ ದಿನಗಳು ಮತ್ತೊಮ್ಮೆ ಸಿಗುತ್ತದೆಯೇ ಅಂತ ಗೊತ್ತಿಲ್ಲ. ತಾತ್ಕಾಲಿಕ ನಿರೂಪಕರಿಗೆ ಕೊಡುತ್ತಿದ್ದ ಸಲಹೆ, ಅವರ ಅನುಭವ, ಶೀರ್ಷಿಕೆಗಳು, ವಿಷಯ ಮತ್ತು ಪಾತ್ರದ ಆಯ್ಕೆಯಲ್ಲಿ ಕರಾರುವಕ್ಕು ನಿರ್ಧಾರಗಳೆಲ್ಲ ಕಲಿಯುವ ಮನಸುಗಳಿಗೆ ಸ್ಫೂರ್ತಿಯಾಗಬಲ್ಲುದು.

ಮಂಗಳೂರು ಆಕಾಶವಾಣಿಯಲ್ಲಿ ಅವರೆಷ್ಟು ವರ್ಷ ಇದ್ದರು, ಆಕಾಶವಾಣಿಯ ವರ್ಗಾವಣೆ ನೀತಿ, ಪದೋನ್ನತಿ ನೀತಿ, ನಿಯಮ ನಿಬಂಧನೆಗಳು, ಕರಾರುಗಳು ಏನೋ ನನಗೆ ಗೊತ್ತಿಲ್ಲ. ಇಷ್ಟು ವರ್ಷದ ವೃತ್ತಿ ಬದುಕಿನಲ್ಲಿ ಲಕ್ಷಾಂತರ ಕೇಳುಗರು ಮತ್ತೆ ಮತ್ತೆ ನೆನಪಿಸುವಂತೆ ಮಾಡಿರುವ ವೃತ್ತಿಪರತೆ ಹಾಗೂ ಎಲ್ಲದಕ್ಕಿಂತ ಮುಖ್ಯವಾಗಿ ನನ್ನಂಥ ಕೇಳುಗರು ನಾಟಕ ವಿಭಾಗದಲ್ಲಿ ಅನುಭವಿಸುವ ಅವರ ಅನುಪಸ್ಥಿತಿಯೇ ಇವತ್ತಿನ ಪ್ರಧಾನ ಬೇಸರದ ಸಂಗತಿ. ಮತ್ತೊಮ್ಮೆ ನಮ್ಮ ಭಾಗದ ನಿಲಯಕ್ಕೆ ಬಂದು ಇನ್ನಷ್ಟು ಕಾರ್ಯಕ್ರಮಗಳನ್ನು ನೀಡುವಂತಾಗಲಿ ಎಂಬುದೇ ಹಾರೈಕೆ...ಶುಭವಾಗಲಿ ಡಾ.ಸ್ವಾಮಿ ಸರ್.
ಮತ್ತೆ ಮತ್ತೆ ನಿಮ್ಮನ್ನು ನೆನಪಿಸುವ ಸಾಲುಗಳು ನಿರ್ದೇಶನ ಮತ್ತು ನಿರ್ಮಾಣ ಡಾ.ಬಿ.ಎಂ.ಶರಭೇಂದ್ರ ಸ್ವಾಮಿ.


-ಕೃ.ಮೋ.ತಲೆಂಗಳ.

3 comments:

Unknown said...

ಹೇಳಲಿಕ್ಕೆ ಏನೂ ಉಳಿಸಿಲ್ಲ ಕೃಷ್ಣ, ನಮಗೆ ನೆರೆಯವರಾಗಿದ್ದರು ಕೆಲಕಾಲ. ಅತ್ಯಂತ ಆತ್ಮೀಯ ವ್ಯಕ್ತಿತ್ವ.

Giri said...

ಚಿಕ್ಕಂದಿನಿಂದಲೂ "ನಿರ್ದೇಶನ, ನಿರ್ಮಾಣ ಡಾ.ಬಿ.ಎಂ.ಶರಭೇಂದ್ರ ಸ್ವಾಮಿ" ಕೇಳಿ ಮಾತ್ರ ಗೊತ್ತು. ಅವರ ಪರಿಚಯ ಮಾಡಿಕೊಟ್ಟಿದ್ದೀರಿ... ತುಂಬ ಸಂತೋಷ

ಭರತೇಶ ಅಲಸಂಡೆಮಜಲು said...

ಹೌದು ಅವರ ಸ್ವರ ಕೇಳಿಕೊಂಡೆ ಬೆಳೆದವರು ನಾವು ಸರ್, ಒಡನಾಡವಿಲ್ಲದಿದ್ದರೂ ಸ್ವರ ತುಂಬಾ ಪರಿಚಿತ. ಬಹಳ ಸೊಗಸಾಗಿ ಅಕ್ಷರಗಳ ನೆನಪನ್ನು ಕಟ್ಟಿದ್ದೀರಿ ಕೃಷ್ಣ ಸರ್ ಖುಷಿಯಾಯಿತು.