ಎಲ್ಲವನ್ನೂ ನೋಡಿ ಸುಮ್ಮನಿರುವ ಯಂತ್ರಗಳಾಗುವುದು ಬೇಡ... ಪ್ರತಿಕ್ರಿಯಿಸಿದರೆ ನಾವು ಸಣ್ಣವರಾಗುವುದಿಲ್ಲ!

  ಜಾಲತಾಣಗಳ ಭರಾಟೆಯಿಂದ ನಮಗೆ ಯಾವುದಕ್ಕೂ ಸಮಯ ಸಿಗುವುದಿಲ್ಲ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ಜಾಲತಾಣಗಳನ್ನು ನಾವು ಹೇಗೆ ಬಳಸುತ್ತೇವೆ ಹಾಗೂ ಎಷ್ಟು ಸಮಯ ವಿನಿಯೋಗಿಸುತ್ತೇವೆ ಎಂಬುದರ ಮೇಲೆ ಅದು ಅವಲಂಬಿಸಿರುತ್ತದೆ. ಜಾಲತಾಣಗಳು ವ್ಯಾಪಕವಾದ ಮೇಲೂ ನಾವು ನಮಗಿಷ್ಟದ ಕೆಲಸಗಳಲ್ಲಿ, ವಿಚಾರಗಳಲ್ಲಿ ತೊಡಗಿಸಿಯೇ ತೊಡಗಿಸುತ್ತೇವೆ. ಆದರೂ ನಮಗೆ ಜಾಲತಾಣಗಳಲ್ಲಿ ಇಷ್ಟವಾದ ವಿಚಾರಗಳಿಗೆ ಅಥವಾ ಗಮನ ಸೆಳೆಯುವ ಸಂಗತಿಗಳಿಗೆ ಪ್ರತಿಕ್ರಿಯೆ ಹಾಕಲು ಯಾಕೆ ಕೈ ಮುಂದೆ ಬರುವುದಿಲ್ಲ ಎಂಬುದೇ ನನ್ನನ್ನು ಕಾಡುವ ಪ್ರಶ್ನೆ.

 

ಜಾಲತಾಣಗಳಲ್ಲಿ ಪ್ರಧಾನವಾಗಿ ನಮ್ಮ ಕಡೆ ವ್ಯಾಪಿಸಿರುವುದು ವಾಟ್ಸಪ್ ಹಾಗೂ ಫೇಸ್ಬುಕ್ಕು. ಇವೆರಡರಲ್ಲಿ ಪ್ರತಿದಿನ ಎಷ್ಟೋ ಮಂದಿಯ ಸ್ವಂತ ವಿಚಾರಗಳು, ಬರಹಗಳು, ಫೋಟೋಗಳು, ವಿಡಿಯೋ, ಕಥೆಗಳು, ನಗೆಹನಿಗಳು ಬರುತ್ತವೆ, ಫಾರ್ವರ್ಡೆಡ್ ರೂಪದಲ್ಲಿ ಇನ್ಯಾರದ್ದೋ ಪೋಸ್ಟುಗಳೂ ಹಂಚಿಕೆಯಾಗುತ್ತವೆ. ಬಹಳಷ್ಟು ಬಾರಿ ಎಲ್ಲವನ್ನೂ, ಎಲ್ಲಾ ಗ್ರೂಪುಗಳಲ್ಲಿ ನಮಗೆ ನೋಡಲು ಸಾಧ್ಯವಾಗಿರುವುದಿಲ್ಲ ಅಥವಾ ಅಷ್ಟು ಸಮಯವನ್ನು ಜಾಲತಾಣಕ್ಕೆ ಮೀಸಲಿರಿಸಲು ಕಷ್ಟವೂ ಹೌದು. ಆದರೆ, ನನಗೆ ಆಗುವ ಆಶ್ಚರ್ಯವೆಂದರೆ ನಾವೊಂದು ವಾಟ್ಸಪ್ಪು ಗ್ರೂಪಿನಲ್ಲಿ ಏನಾದರೂ ಪೋಸ್ಟ್ ಮಾಡಿದ್ದೇವೆ ಎಂದಿಟ್ಟುಕೊಳ್ಳೋಣ. ಅಲ್ಲಿ ಅದನ್ನು ಇನ್ಫೋ ಗೆ ಹೋಗಿ ನೋಡಿದರೆ ತುಂಬ ಮಂದಿ ನೋಡಿದ್ದಾರೆ ಎಂದು ತೋರಿಸುತ್ತದೆ (ಎಷ್ಟು ಮಂದಿ ಮನಸ್ಸಿಟ್ಟು ನೋಡಿದ್ದರೆ ಎಂದು ತಿಳಿಯುವ ತಂತ್ರಜ್ಞಾನ ಇನ್ನೂ ಬಂದಿಲ್ಲ). ಆದರೆ ಯಾರೂ ನಮ್ಮ ಪೋಸ್ಟಿಗೆ ಪ್ರತಿಕ್ರಿಯೆ ಹಾಕಿರುವುದಿಲ್ಲ. ಆದರೆ ಅದೋ ಪೋಸ್ಟು ಯಾರ್ಯಾರ ಮೂಲಕವೋ ಫಾರ್ವರ್ಡ್ ಆಗಿ ಇನ್ನೊಂದು ಗ್ರೂಪಿನಲ್ಲಿ ನಮಗೇ ಕಾಣಸಿಗುತ್ತದೆ...

ಇದರ ಹಿಂದಿನ ತರ್ಕ. ತುಂಬ ಸರಳ. ಕೆಲವು ಮಂದಿಯಾದರೂ ನಮ್ಮ ಪೋಸ್ಟು ನೋಡಿರುತ್ತಾರೆ, ಅವರ ಗಮನ ಸೆಳೆದಿರುತ್ತದೆ. ಅವರು ಆ ಪೋಸ್ಟರನ್ನು ಡೌನ್ ಲೋಡ್ ಮಾಡಿರುತ್ತಾರೆ. ಇಷ್ಟವಾದರೆ ಸ್ಟೇಟಸ್ಸಿನಲ್ಲೋ, ಫೇಸ್ಬುಕ್ಕಿನಲ್ಲೋ ಶೇರ್ ಮಾಡುತ್ತಾರೆ, ಅಥವಾ ಬೇರೆ ಗ್ರೂಪುಗಳಿಗೆ ಫಾರ್ವರ್ಡ್ ಮಾಡುತ್ತಾರೆ. ಆದರೆ ತಪ್ಪಿಯೂ ಆ ಪೋಸ್ಟಿನ ಗುಣಾವಗುಣಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಈ ಪ್ರವೃತ್ತಿ ಬದಲಾಗಬೇಕು ಎಂಬುದೇ ನನ್ನ ಆಶಯ...

 

ಒಂಗು ಯಕ್ಷಗಾನ ವಾಟ್ಸಪ್ಪು ಗ್ರೂಪನ್ನೇ ತೆಗೆದುಕೊಳ್ಳಿ. ತುಂಬ ಮಂದಿ ವೃತ್ತಿಪರ ಫೋಟೋಗ್ರಾಫರುಗಳು,ವಿಡಿಯೋಗ್ರಾಫರುಗಳು (ನನ್ನ ಬಗ್ಗೆ ಹೇಳಿದ್ದಲ್ಲ, ನಾನು ವೃತ್ತಿಪರನಲ್ಲ) ಬಯಲಾಟಗಳಿಗೆ ಹೋಗುತ್ತಾರೆ. ಅಲ್ಲಿನ ಚೆಂದದ ಫೋಟೋಗಳನ್ನು ತೆಗೆದು ಯಕ್ಷಗಾನದ ಗ್ರೂಪುಗಳಲ್ಲಿ, ಫೇಸ್ಬುಕ್ಕಿನಲ್ಲಿ ಹಂಚಿಕೊಳ್ಳುತ್ತಾರೆ. ನಾವೂ ಆ ಫೋಟೋ, ವಿಡಿಯೋ ತುಣುಗಳನ್ನು ನೋಡಿ ಆನಂದಿಸುತ್ತೇವೆ. ಇದು ನಮಗೆ ಉಚಿತವಾಗಿಯೇ ಲಭ್ಯವಾಗುತ್ತೇವೆ.           ಒಂದು ವೇಳೆ ನಾವು ವಿಡಿಯೋ ಕ್ಲಿಪ್ಪುಗಳನ್ನು ಡೌನ್ ಲೋಡ್ ಮಾಡಿದರೆ, ಅದು ನಮಗೆ ಇಷ್ಟವಾದರೆ ನಮ್ಮ ಸ್ಟೇಟಸ್ಸಿಗೋ, ಫೇಸ್ಬುಕ್ಕಿಗೋ ಶೇರ್ ಮಾಡುವ ಮೊದಲು ಒಂದು ಸಾಲು ಅವರ ಪೋಸ್ಟಿನ ಬಗ್ಗೆ ಮೆಚ್ಚುಗೆಯ ಮಾತನಾಡಿದರೆ, ಅಥವಾ ಇನ್ನಷ್ಟು ಸುಧಾರಣೆಗೆ ಸಲಹೆ ನೀಡಿದರೆ ಅದನ್ನು ಪೋಸ್ಟು ಮಾಡಿದ್ದಕ್ಕೆ ಅವರಿಗೂ ಸಾರ್ಥಕ ಭಾವ ಮೂಡುತ್ತದೆ. ಯಾರೂ ಮಾತನಾಡದೇ ಇದ್ದರೆ ಒಂದು ನೀರಸ ಭಾವ, ನಿರುತ್ಸಾಹ ಕಾಡುವುದು ಸಹಜ. ಯಾರೂ ಪೋಸ್ಟುಗಳನ್ನು ಡೌನ್ ಲೋಡ್ ಮಾಡದೇ ಇದ್ದರೆ, ನೋಡದೇ ಇದ್ದರೆ ವಿಷಯ ಬೇರೆ. ಆದರೆ ತುಂಬ ಮಂದಿ ಡೌನ್ಲೋಡ್ ಮಾಡಿ ಬೇರೆ ಕಡೆ ಶೇರ್, ಫಾರ್ವರ್ಡ್ ಮಾಡುತ್ತಾರೆ. ಆದರೆ ಮೂಲ ಕರ್ತೃವಿಗೆ ಒಂದು ಪುಟ್ಟ ಕೃತಜ್ಞತೆ ಹೇಳುವುದಿಲ್ಲ. ಕಮೆಂಟು ಮಾಡಿದರೆ ಏನು ಭೂಕಂಪ ಆಗುತ್ತದೋ ಎಂಬ ಹಾಗೆ, ಯಾವತ್ತೂ ಮಾತನಾಡುವುದೇ ಇಲ್ಲ. ಪ್ರತಿಕ್ರಿಯೆ ನೀಡಲು ನಾವು ಪಂಡಿತರಾಗಬೇಕಿಲ್ಲ. ಮನಸ್ಸಿನಲ್ಲಿ ಅನ್ನಿಸಿದ್ದನ್ನು ಸರಳವಾಗಿ ಹೇಳಿದರೆ ಸಾಕು. ಅದಕ್ಕೆ ಹಿಂಜರಿಕೆ ಯಾಕೆ. ಪ್ರತಿ ಪೋಸ್ಟಿಗೂ ಕಮೆಂಟ್ ಮಾಡಬೇಕೆಂಬ ನಿರೀಕ್ಷೆ ಅಲ್ಲ. ಆದರೆ ಕಲಾವಿದರಿಗೆ, ಕಲೆಯನ್ನು ನಮ್ಮಲ್ಲಿಗೆ ತಲುಪಿಸುವವರಿಗೆ ಒಂದು ಪುಟ್ಟ ಕೃತಜ್ಞತೆ ಹಾಕದಷ್ಟು ಬಿಝಿ ಏನೂ ನಾವಲ್ಲ ಅಂತ ನನ್ನ ಭಾವನೆ. ಮೂರು ನಾಲ್ಕು ಸೆಕೆಂಡುಗಳು ಸಾಕು ಒಂದು ಪ್ರೋತ್ಸಾಹದ ಕಮೆಂಟು ಹಾಕುವುದಕ್ಕೆ.

 

ರಾತ್ರಿ ನಿದ್ರೆಗೆಟ್ಟು, ಆ ಮಂಜಿನ ಬಯಲಿನಲ್ಲಿ ಕುಳಿತು ಬ್ಯಾಟರಿ ಬ್ಯಾಕಪ್ ಇತ್ಯಾದಿಗಳನ್ನು ನೋಡಿಕೊಂಡು ಜೊತೆಗೆ, ಕಲಾವಿದರ ಮಾಹಿತಿ ಸಂಗ್ರಹಿಸಿ ಯಕ್ಷಗಾನಗಳ ಫೋಟೋ, ವಿಡಿಯೋಗಳನ್ನು ಸೆರೆ ಹಿಡಿದು ಗ್ರೂಪುಗಳಲ್ಲಿ ಹಂಚಿಕೊಳ್ಳುತ್ತಾರಲ್ಲ, ಆ ಒತ್ತಡಗಳು ನೇರಪ್ರಸಾರ ಕೊಡುವವರಿಗೆ, ಅಲ್ಲಿ ದೃಶ್ಯಗಳನ್ನು ಸೆರೆ ಹಿಡಿಯುವವರಿಗೆ ಮಾತ್ರ ಗೊತ್ತು. ನಮ್ಮ ಗ್ರೂಪುಗಳಲ್ಲಿ ಅದು ಅಚ್ಚುಕಟ್ಟಾಗಿ ಶೇರ್ ಆಗುತ್ತದೆ, ಹಾಗಿರುವಾಗ ನಾವು ಅದನ್ನುಪ್ರೋತ್ಸಾಹಿಸಿದರೆ ಅಥವಾ ಅವರ ಸಾಧನೆಗೆ ಪೂರಕ ಮಾಹಿತಿಯನ್ನೋ, ಕಿವಿಮಾತನ್ನೋ ನೀಡಿದರೆ ಅವರಿಗೆ ಇನ್ನಷ್ಟು ಕೆಲಸಕ್ಕೆ ಪ್ರೇರಣೆ ಸಿಕ್ಕಿದ ಹಾಗಾಗುತ್ತದೆ.

 

ನಮಗೆ ಎಂತದ್ದಕ್ಕೂ ಪುರುಸೊತ್ತಿಲ್ಲ ಎಂಬುದು ನಮ್ಮ ಭ್ರಮೆ ಅಷ್ಟೆ. ನಮಗೆ ಶೇರ್ ಮಾಡುವುದಕ್ಕೆ, ಫಾರ್ವರ್ಡ್ ಮಾಡುವುದಕ್ಕೆ ಪುರುಸೊತ್ತಿರುತ್ತದೆ. ಪುಟ್ಟ ಕಮೆಂಟ್ ಹಾಕದಷ್ಟು ಆಲಸ್ಯ (ಬಿಝಿ ಇರುವವರನ್ನು ಹೊರತುಪಡಿಸಿ ಹೇಳುವುದು, ಸಾಮಾನ್ಯೀಕರಿಸಿದ ಮಾತಲ್ಲ). ಯಾವುದೇ ಸ್ವಂತ ಬರಹ, ಫೋಟೋ, ವಿಡಿಯೋಗಳು ಆ ವ್ಯಕ್ತಿಯ ಸೃಜನಶೀಲ ಆಸ್ತಿ ಹಾಗೂ ನಾಲ್ಕು ಮಂದಿಗೆ ಮಾಹಿತಿ ಕೊಡುವಂಥ ವಿಚಾರ. ಅದ್ದು ದುಡ್ಡಿಗೆ ಮಾರುವುದಕ್ಕಿರುವುದಲ್ಲ. ಆ ಪೋಸ್ಟು ಹಾಕಿದವರಿಗೆ ಆರ್ಥಿಕ ಲಾಭದ ಉದ್ದೇಶವೂ ಇರುವುದಿಲ್ಲ. ಅವರು ಬಯಸುವುದು ನಾಲ್ಕು ಪ್ರೋತ್ಸಾಹದ ಮಾತುಗಳನ್ನು ಮಾತ್ರ. ಇಷ್ಟು ಮಾತ್ರವಲ್ಲ. ಯಾರೋ ಬರೆದ ಬರಹ, ಫೋಟೋ, ವಿಡಿಯೋಗಳನ್ನು ಶೇರ್ ಮಾಡುವಾಗಲೂ ಅಷ್ಟೇ ಅವರಿಗೊಂದು ಕೃಪೆ ಅಂತ ಹೆಸರು ಸೇರಿಸಿ ಹಾಕುವುದು ಸಭ್ಯರು ಮಾಡಬೇಕಾದ ಕರ್ತವ್ಯವೂ ಹೌದು. ಅವರಿಗೆ ನಾವು ನೀಡುವ ಗೌರವವೂ ಹೌದು. ಜಾಲತಾಣಕ್ಕೆ ಬಂದ ಕೂಡಲೇ ಅದು ನಮ್ಮ ಆಸ್ತಿ, ಅದು ನಮ್ಮದೇ ಎಂಬಂತೆ ಬಿಂಬಿಸಿ ಹಾಕಬಹುದು ಎಂಬ ತಪ್ಪು ಕಲ್ಪನೆ ಸಾಕಷ್ಟು ಮಂದಿಯಲ್ಲಿ ಇದೆ... ತಾಂತ್ರಿಕವಾಗಿ ಹೌದು. ಯಾರೂ ಯಾವುದೋ ಫೋಟೋ, ವಿಡಿಯೋವನ್ನೂ ಹೇಗೂ ಬಳಸಬಹುದು. ಆದರೆ ಭಾವನಾತ್ಮಕವಾಗಿ ಯೋಚಿಸಿ ನೋಡಿ, ನಮ್ಮ ಪೋಸ್ಟುಗಳಿಗೆ ತುಂಬ ಕಮೆಂಟ್ ಬರಬೇಕಂತ ನಾವು ನಿರೀಕ್ಷಿಸುತ್ತೇವೆ. ಆದರೆ ನಾವೆಷ್ಟು ಮಂದಿಯ ಪೋಸ್ಟುಗಳನ್ನು ಓದಿ ಪ್ರೋತ್ಸಾಹ ನೀಡಿದ್ದೇವೆ ಎಂಬ ಆತ್ಮವಿಮರ್ಶೆ ಮಾಡಬೇಕು.

 

ನೀವು ಹಲವಾರು ಗ್ರೂಪುಗಳಲ್ಲಿ ಇರಬಹುದು... ತುಂಬ ಬಿಝಿ ವ್ಯಕ್ತಿಗಳೂ ಆಗಿರಬಹುದು. ಆದರೆ, ದಯವಿಟ್ಟು ಈ ಎರಡು ವಿಚಾರಗಳಿಗೆ ಗಮನ ಕೊಡಿ

-    - ನಿಮಗಿಷ್ಟದ, ಗಮನ ಸೆಳೆದ ಪೋಸ್ಟುಗಳು ಯಾವುದೇ ಗ್ರೂಪಿನಲ್ಲಿ ಬಂದರೆ, ನೀವದನ್ನು ಗಮನಿಸಿದ್ದರೆ ದಯವಿಟ್ಟು ಪುಟ್ಟದೊಂದು ಕಮೆಂಟು ಹಾಕಿ ಪ್ರೋತ್ಸಾಹಿಸುವ ಗುಣ ಬೆಳೆಸಿಕೊಳ್ಳಿ.

2    -  ನೀವು ಆ ಪೋಸ್ಟನ್ನು ಬೇರೆ ಕಡೆ ಶೇರ್, ಫಾರ್ವರ್ಡ್ ಮಾಡುವುದಾದರೆ ದಯವಿಟ್ಟು ಮೂಲಕ ಕರ್ತೃವಿನ ಹೆಸರು ಡಿಲೀಡ್ , ಕ್ರಾಪ್ ಮಾಡಬೇಡಿ, ಮೂಲ ಕರ್ತೃವಿನ ಹೆಸರು ಗೊತ್ತಿದ್ದರೆ ಕೃಪೆ ಅಂತ ಹಾಕಿ ಶೇರ್ ಮಾಡಿ.

ಅದರಿಂದ ನಾವು ಸಣ್ಣವರಾಗುವುದಕ್ಕೇನೂ ಇಲ್ಲ.... ಈ ಥರ ಸೂಕ್ಷ್ಮತೆ ಬೆಳೆಸಿಕೊಂಡಿದ್ದರೆ, ಉಳಿಸಿಕೊಂಡಿದ್ದರೆ ಮಾತ್ರ ಜಾಲತಾಣಗಳೂ ಯಾರಿಗೂ ಹೊರೆ ಆಗುವುದಿಲ್ಲ ಮಾತ್ರವಲ್ಲ, ಜಡ್ಡು ಕಟ್ಟಿದೆ ಯಾಂತ್ರಿಕ ವ್ಯವಸ್ಥೆಯಾಗಿ ಕಾಡುವುದೂ ಇಲ್ಲ. ಏನಂತೀರಿ?

-ಕೃಷ್ಣಮೋಹನ ತಲೆಂಗಳ.

13.02.2021.

No comments: