ಭಾವನೆಗಳನ್ನು ಇಮೋಜಿಗಳಿಗೆ ಗುತ್ತಿಗೆಗೆ ನೀಡಿದ್ದೇವೆ!!!

 ಜಗತ್ತಿನ ಅತಿ ಹೆಚ್ಚು ಬಳಕೆಯಾಗುವ ಮತ್ತು ದುರುಪಯೋಗವಾಗುವ ಇಮೋಜಿ ಅಂತ ಇದ್ರೆ ಅದು ಬಹುಶಃ ಥಂಬ್ ರೈಸ್  (THUMB) ಇರಬಹುದೇನೋ...! ಎಲ್ಲೂ ಸಲ್ಲುವ, ಅತಿ ಹೆಚ್ಚು ಪ್ರೆಸ್ ಆಗುವ, ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಖರ್ಚಾಗುವ ಸ್ಮೈಲೀ ಇದ್ದರೆ ಅದು ಥಂಬ್....




ಈ ವಿಚಾರದ ಬಗ್ಗೆ ಮಾತನಾಡಲು ಕಾರಣ ಇದೆ. ಜಾಲತಾಣಗಳ ಬಳಕೆದಾರರಲ್ಲಿ ಹಲವು ವಿಧ ಇರಬಹುದು. ನನಗೆ ಕಂಡ ಹಾಗೆ ಎರಡು ವಿಧ. ಒಂದು ತಮ್ಮ ಮಧ್ಯವಯಸ್ಸಿನ ವರೆಗೂ ಮೊಬೈಲ್ ಮುಖವನ್ನೇ ಕಾಣದ, ನಂತರ ಮೊಬೈಲ್ ಜಗತ್ತಿಗೆ ಕಾಲಿಟ್ಟು, ಅದನ್ನು ಅರಗಿಸಿಕೊಂಡು ಪ್ರಸ್ತುತ ಸಾವರಿಸಿಕೊಂಡು ಸಮಕಾಲೀನರಾಗಿರುವವರು. ಇನ್ನೊಂದು ವರ್ಗದವರು ತಾವು ಹುಟ್ಟುವಾಗಲೇ ಮೊಬೈಲ್ ನ್ನು ಕಂಡು, ಅದರ ಜೊತೆಗೇ ಬೆಳೆದು ಸರಾಗವಾಗಿ, ಸಲೀಸಾಗಿ ಇಮೋಜಿಗಳ ಮೂಲಕವೇ ಭಾವನೆಗಳನ್ನು ಹರಿಯಗೊಡುವವರು.

 

ಎರಡನೇ ವರ್ಗದವರಿಗೆ ಚಿತ್ರ ವಿಚಿತ್ರ ಸ್ಟೇಟಸ್ಸು, ಸಮಕಾಲೀನವಾದ ಹೃಸ್ವರೂಪದ ಇಂಗ್ಲಿಷ್ ಬಳಕೆ, ಇನ್ ಸ್ಟಾದಲ್ಲಿ ಬರುವ ವಿಶೇಷವಾದ ವಿಡಿಯೋಗಳ ಆಸಕ್ತಿ, ಮುಲಾಜಿಲ್ಲದೆ ಮಾಡುವ ಫಾರ್ವರ್ಡು, ಶೇರು ಇವುಗಳೆಲ್ಲ ಸಹಜವಾದ, ಪ್ರಾಕೃತಿಕವೇನೋ ಎನ್ನಿಸಬಹುದಾದ ಚಟುವಟಿಕೆಗಳು.

 

ಆದರೆ, ಮೊದಲನೇ ವರ್ಗದವರಿದ್ದಾರಲ್ವ? ಯೌವ್ವನದ ವರೆಗು ಮೊಬೈಲ್ ಕಾಣದೇ ಇದ್ದವರು, ಚಿಕ್ಕವರಿದ್ದಾಗ ರೇಡಿಯೋ ಕೇಳುತ್ತಾ ಬೆಳೆದವರು, ಪತ್ರಗಳೆಂಬ ಭಯಂಕರ ಸಂವಹನ ಮಾಧ್ಯಮ ಬಳಸಿ ಗೊತ್ತಿರುವವರು, ಸದ್ಯ ಮೊಬೈಲ್ ಜಗತ್ತಿನಲ್ಲೇ ಮುಳುಗಿ, ಸಮಕಾಲೀನ ಜಾಲತಾಣದ ಪರಿಕಲ್ಪನೆ, ಅದರ ವೇಗ, ಅದರ ಕಲ್ಪನೆ, ಅದರ ಬೆಳವಣಿಗೆ, ವೈರಲ್ಲು, ಶೇರು, ಕಮೆಂಟು, ಲೈಕುಗಳಿಗೆ ಒಗ್ಗಿಕೊಂಡು ಅಥವಾ ಹಿಗ್ಗಿ, ಕುಗ್ಗಿ ಒಗ್ಗಿಸಿಕೊಂಡವರು ಇದ್ದಾರಲ್ವ? ಅವರಿಗೆ ಈ ಇಮೋಜಿಗಳು ಅಥವಾ ಸ್ಮೈಲೀಗಳು ತುಂಬ ಕನ್ ಫ್ಯೂಸಿಂಗ್ ಆಗಿ ಇವತ್ತಿಗೂ ಇದೆ ಅಂದರೆ ನಿಮ್ಮಲ್ಲಿ ತುಂಬ ಜನ ಅಲ್ಲ ಅಂತ ಹೇಳಲಿಕ್ಕಿಲ್ಲ ಅಲ್ವ?

 

ಸುಮಾರು ಎರಡು ದಶಕಗಳಿಂದ ಮೊಬೈಲ್ ಬಳಸುತ್ತಾ, ಸುಮಾರು ಒಂದು ದಶಕದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯನಾಗಿರುತ್ತಾ ಇರುವ ಮಧ್ಯವಯಸ್ಸು ದಾಟುತ್ತಿರುವ ನನಗೂ ಇಮೋಜಿಗಳು ಬಹಳಷ್ಟು ಸಲ ಅರ್ಥವಾಗುವುದಕ್ಕಿಂತ ಗೊಂದಲಗಳನ್ನೇ ಸೃಷ್ಟಿಸುತ್ತವೆ. ಭಾವನೆಗಳೇ ಇಲ್ಲದ ಇಮೋಜಿಗಳನ್ನು ಅವಸರಕ್ಕೆ ರವಾನಿಸಿ, ಅದರಲ್ಲಿಬಹುದಾದ ಸೂಕ್ಷ್ಮವಾದ ಅರ್ಥ ವ್ಯತ್ಯಾಸಗಳನ್ನು ಗುರುತಿಸುವ ಅಥವಾ ಕಳಿಸಿದ ಬಳಿಕ ಯೋಚಿಸುವ ಪುರುಸೊತ್ತು, ಆಸಕ್ತಿ ಕಳಿಸಿದವರಿಗೂ, ಸ್ವೀಕರಿಸಿದವರಿಗೂ ಇರುವುದಿಲ್ಲ. ಆದರೂ ಕೆಲವೊಮ್ಮೆ ಎಂಥದ್ದಪ್ಪ ಇದು ಅಂತ ತಲೆ ಕೆರೆದುಕೊಳ್ಳುವುದಿದೆ.

 

ಒಂದೇ ಉದಾಹರಣೆಯಲ್ಲಿ ಹೇಳುವುದಾದರೆ, ಯಾರದ್ದೋ ಸ್ಟೇಟಸ್ಸಿನಲ್ಲಿ ಕಂಡ ಚಂದದ ವಿಚಾರಕ್ಕೆ, ಯಾರಕ್ಕೋ ಸಾಧನೆಯ ವಿವರ ಜಾಲತಾಣದಲ್ಲಿ ಪ್ರಟವಾಗಿದ್ದಕ್ಕೆ ನೀವೊಂದು ಪ್ರಶಂಸೆಯ ಮಾತು ಹೇಳಿದಾಗ ತುಟಿ ತುಂಬ ನಕ್ಕು ತಲೆಯಲ್ಲಿ ಚಕ್ರ ತಿರುಗಿದಂತೆ (ನನಗದನ್ನು ಕಂಡಾಗ ತಲೆ ತಿರುಗಿದ ನೆನಪಾಗ್ತದೆ) ಇರುವ ಇಮೋಜಿಯ ಪ್ರತಿಕ್ರಿಯೆ ಬರುತ್ತದೆ. ಯಾಕಂತ ನನಗಿನ್ನೂ ಅರ್ಥ ಆಗ್ತಿಲ್ಲ. ಅರ್ಹ ಸಾಧನೆಗೆ ಸೂಕ್ತ ಪ್ರಶಂಸೆ ನೀಡಿದಾಗ ತಲೆ ತಿರುಗಿದ ಇಮೋಜಿ ಕಳುಹಿಸುವುದು ಎಂಥದ್ದಕ್ಕೆ? ಮತ್ತೆ ಕೆಲವರು ತಮಗೆ ಪ್ರಶಸ್ತಿ ಬಂದದ್ದು, ತಮಗೊಂದು ಅವಕಾಶ ಸಿಕ್ಕಿದ್ದು ಇವೆನ್ನೆಲ್ಲ ವಾಟ್ಸಪ್ ಸ್ಟೇಟಸ್ಸಿನಲ್ಲಿ ಹಾಕಿ ನಂತರ ತಲೆ ತಿರುಗಿದ ನಾಲ್ಕೈದು ಇಮೋಜಿ ಜೊತೆಗೆ ಪೋಣಿಸುತ್ತಾರೆ. ಆಗೆಲ್ಲ ನನಗನ್ನಿಸುವುದು ಅಷ್ಟೊಂದು ಮುಜುಗರ, ತಲೆತಿರುಗುವಂಥ ಸನ್ನಿವೇಶ ಬಂದರೆ ಯಾಕೆ ಅಷ್ಟು ಕಷ್ಟ ಪಟ್ಟು ಸ್ಟೇಟಸ್ಸಿನಲ್ಲಿ ಅವನ್ನೆಲ್ಲ ಹಾಕ್ತಾರೆ ಅಂತ...ನಾಲಗೆ ಹೊರಗೆ ಹಾಕುವುದು, ಒಂದು ಕಣ್ಣು ಮುಚ್ಚಿ ಅಣಕಿಸುವುದು, ನಿರ್ದಿಷ್ಟ ಬೆರಳುಗಳನ್ನು ಮೇಲೆತ್ತಿದಂತೆ ಕಾಣುವ ಇಮೋಜಿಗಳ ಅರ್ಥ ನಿಜಕ್ಕೂ ನನಗೆ ತುಂಬ ಸಲ ಗೊಂದಲ ಮೂಡಿಸುತ್ತವೆ. ಗಾಂಭೀರ್ಯವೇ ಇಲ್ಲದ ವಿಚಾರಗಳು ಅಂತಲೂ ಅನ್ನಿಸುತ್ತವೆ.

 

ಇಂಥ ಕೆಲಾ....ವು ಉದಾಹರಣೆಗಳಿವೆ. ಬರೆಯುತ್ತಾ ಹೋದರೆ ಲೇಖನ ಉದ್ದವಾಗ್ತದೆ. ಮತ್ತೆ, ಕೆಲವು ಫೇಸ್ ಬುಕ್ ಬರಹಗಳಲ್ಲಿ ಅಕ್ಷರಗಳಿಗಿಂತಲೂ ಇಮೋಜಿಗಳೇ ಜಾಸ್ತಿ ಇರ್ತವೆ. ಇರಬಾರದು, ಹಾಗಿರುವುದು ತಪ್ಪು ಅಂತ ನಾನು ಹೇಳುತ್ತಿರುವುದಲ್ಲ. ಅದು ಅವರವರ ಇಷ್ಟ, ಹೇಗೆ ಬರೆಯಬೇಕು ಅಂತ.

ಆದರೆ ಅಕ್ಷರದಲ್ಲಿ ಚಂದಕೆ, ಪರಿಣಾಮಕಾರಿ ಹೇಳಬಹುದಾದ ವಿಚಾರದ ನಡುವೆ ಮೊಸರಲ್ಲಿ ಕಲ್ಲು ಸಿಕ್ಕಿದಂತೆ ಇಮೋಜಿಗಳನ್ನು ತುರುಕುವುದು ಯಾಕಂತ ಅರ್ಥವೇ ಆಗ್ತಿಲ್ಲ... ನೋಡುವಾಗಲೂ ಒಂಥರಾ ರಂಗ್ ಭೀ ರಂಗೇ ಬರಹವಾಗಿ ಕಾಣಿಸುತ್ತವೆ... ಸರಾಗ ಓದಿಗೆ ಅವು ತೊಡಕಾಗುತ್ತವೆ ಎಂಬುದು ನನ್ನ ವೈಯಕ್ತಿಕ ಅನಿಸಿಕೆ.

 

ಮತ್ತೆ ಪತಿ, ಪತ್ನಿ ಮೇಲೆ, ಸ್ನೇಹಿತರು, ಸಹೋದ್ಯೋಗಿಗಳು, ಮಕ್ಕಳ ಮೇಲೆಲ್ಲ ಜನ್ಮದಿನಂದು, ಆನಿವರ್ಸರಿಯಂದು ಇನ್ಯಾವುದೋ ಸಂತೋಷದ ಸಂದರ್ಭದಲ್ಲೆಲ್ಲ ಪ್ರೀತಿ ಉಕ್ಕಿ ಹರಿದಾಗ ಹೃದಯಗಳ ವಿವಿಧ ಗಾತ್ರಗಳ ಇಮೋಜಿಗಳು ಬಳಕೆಯಾಗುತ್ತವೆ. ಕೆಲವೊಮ್ಮೆ ಕೆಲವು ಪ್ರತಿಕ್ರಿಯೆಗಳೂ ಹೃದಯದಿಂದ ಪೋಣಿಸಿದ ಇಮೋಜಿಗಳ ಮೂಲಕವೇ ಬರುತ್ತವೆ. ಒಂದು ಹೃದಯದ ಚಿಹ್ನೆ, ಎರಡು, ಮೂರು ಚಿಹ್ನೆ, ಬ್ಲಿಂಕ್ ಆಗುವ ಹೃದಯ... ಹೀಗೆ ಬೇರೆ ಬೇರೆ ಥರದ ಸ್ಮೈಲೀಗಳಿವೆ. ಇವುಗಳಿಗೆಲ್ಲ ಬೇರೆ ಬೇರೆ ಅರ್ಥಗಳಿವೆಯೇ? ಇವನ್ನು ಇಂಥವರಿಗೇ ಬಳಸಬೇಕು ಅಂತ ಆಧುನಿಕ ಸಂವಹನ ಜಗತ್ತಿನಲ್ಲಿ ರೂಢಿ ಇದೆಯೇ...? ಅಂತ ಬಹಳಷ್ಟು ಸಲ ಕಳಿಸಿದವರಿಗೆ ಖಂಡಿತಾ ಗೊತ್ತಿರುವುದಿಲ್ಲ (ನಿಮ್ಮಲ್ಲಿ ಹಲವರಿಗೆ ಈ ಅನುಭವ ಆಗಿರಬಹುದು). ಎಲ್ರೂ ಕಳಿಸ್ತಾರೆ ಅಂತ ಕಳಿಸೋದಾ? ಅರ್ಥ ಗೊತ್ತಿದ್ದು  ಕಳಿಸೋದಾ? ನಿಜವಾಗಿ ಒಂದೊಂದು ಇಮೋಜಿಗಳಿಗೆ ಇಂಥದ್ದೇ ಅರ್ಥವೇ ಇರ್ತದ? ಅಂತ ಬಹಳಷ್ಟು ಸಲ ಸಂವಹನ ಕಗ್ಗಂಟಾಗುತ್ತದೆ.

 

ಸಂವಹನ ನಿಖರವಾಗಿ, ಸ್ಪಷ್ಟವಾಗಿರಬೇಕು, ಹೇಳಿದ್ದು, ಕೇಳಿದ್ದು ಪ್ರಖರವಾಗಿ ಅರ್ಥವಾಗಬೇಕು ಅಂತ ಕಲಿತ ನಮಗೆ (ನನಗೆ) ಇಮೋಜಿಗಳು, ಸ್ಮೈಲೀಗಳು ಮೂಡಿಸುವ ಗೊಂದಲ ಅಷ್ಟಿಷ್ಟಲ್ಲ. ನನ್ನ ವಯಸ್ಸಿನ ಇತರರಿಗೂ, ನನಗಿಂತ ಹಿರಿಯರಾದ ನಿಮ್ಮಲ್ಲಿ ಹಲವರಿಗೂ ಇಮೋಜಿಗಳೆಂಬುದು ಅರಗಿಸಲಾಗದ ತುತ್ತೋ, ಕಬ್ಬಿಣದ ಕಡಲೆಯೋ ಆಗಿರಬಹುದು.

 

ಮುಖ್ಯವಾದ ವಿಷಯಕ್ಕೆ ಈಗ ಬರುತ್ತೇನೆ. ಪುರುಸೊತ್ತೇ ಇಲ್ಲದ, ಸಂವೇದನೆಗಳನ್ನು ಅಭಿವ್ಯಕ್ತಗೊಳಿಸಲು ಸೋ ಕಾಲ್ಡ್ ಟೈಮೇ ಇಲ್ಲದ ಇಂದಿನ ದಿನಗಳಲ್ಲಿ ನೂರೆಂಟು ಗ್ರೂಪುಗಳು, ಸಾವಿರಾರು ಫೇಸ್ಬುಕ್ ಪೇಜುಗಳು, ಬೇಕಾಗಿಯೋ, ಬೇಡವಾಗಿಯೋ ಸೇರಿರುವ ವಾಟ್ಸಪ್ಪು ಗ್ರೂಪುಗಳು, ದಿನ ನಿತ್ಯ ಲೈಕ್, ಕಮೆಂಟು, ಶೇರ್, ಸಬ್ ಸ್ಕ್ರೈಬ್ ಮಾಡಿ ಅಂತ ಕಂಡ ಕಂಡ ಜಾಲತಾಣದ ಪೈಪುಗಳಲ್ಲಿ ಹರಿದು ಬರುವ ಲಿಂಕುಗಳು ಇವುಗಳನ್ನು ಸಾಮಾನ್ಯ ಮನುಷ್ಯ ದಿನದ 24 ಗಂಟೆ ನಿರತನಾಗಿದ್ದರೂ ಓದಲು, ನೋಡಲು, ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಹಾಗಾಗಿ ಲಿಂಕುಗಳು, ಸಂದೇಶಗಳು, ಮನವಿಗಳು ಬಂದಾಗಲೆಲ್ಲ ಸುಲಭವಾಗಿ ಹಾಕುವ ಪ್ರತಿಕ್ರಿಯೆ ಹೆಬ್ಬರಳು ಎತ್ತುವು (ಥಂಬ್), ಅಥವಾ ಕೈಮುಗಿಯುವುದು (ನಮಸ್ಕಾರ)... ಇವೆರಡೂ ಭಯಂಕರವಾಗಿ ದುರ್ಬಳಕೆ ಆಗುವ ಇಮೋಜಿಗಳು.

 

ಥಂಬ್ ಎತ್ತಿದರೆ ಹೇಗೂ ಅರ್ಥ ಮಾಡಿಕೊಳ್ಳಬಹುದು.

-ನಿಮ್ಮ ಸಂದೇಶ ಬಂದಿದೆ ಅಂತ,

-ನಿಮ್ಮ ಸಂದೇಶ ಬಂದಿದೆ,ಬೇಕಿದ್ದರೆ ನೋಡ್ತೇನೆ, ಇಲ್ಲವಾದರೆ ಡಿಲೀಟ್ ಮಾಡ್ತೇನೆ ಅಂತ,

-ಆಯ್ತು ನೋಡೋಣ ಅಂತ...

ಹೇಗೂ ತಿಳಿಯಬಹುದು. ಅಕ್ಷರದ ಪ್ರತಿಕ್ರಿಯೆ ಇಲ್ಲದೆ ಕೇವಲ ಥಂಬ್ ರೈಸ್ ಮಾಡುವುದು ಬೀಸೋ ದೊಣ್ಣೆಯಿಂದ ತಪ್ಪಿಸುವ ಅಥವಾ ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಕೆ ಅತ್ತ ನಿಷ್ಠುರನೂ ಆಗದೆ, ಇತ್ತ ಕಳಿಸಿದ ಮೆಸೇಜನ್ನು ಓಪನ್ನು ಮಾಡದೆ ಪಾರಾಗುವ ವಿಧಾನ ಅಂತ ನಾನಂತೂ ಅಂದುಕೊಂಡಿದ್ದೇನೆ. ನಿಮ್ಮಲ್ಲಿ ತುಂಬ ಮಂದಿ ಬಾಯಿ ಬಿಟ್ಟು ಇದು ಹೌದು ಅಂತ ಒಪ್ಪದಿದ್ದರೂ ನೀವೂ ಮಾಡುವುದು ಇದನ್ನೇ ಅಂತ ನನಗೆ ಚೆನ್ನಾಗಿ ಗೊತ್ತು!!!

ಆಕ್ಟೋಪಸ್ಸಿನಂತೆ ಹರಡಿರುವ ಜಾಲತಾಣದ ಬೇರುಗಳ ಮೂಲೆ ಮೂಲೆಯನ್ನೂ ತಲುಪಿ, ಬಂದದ್ದು, ಕಂಡದ್ದನ್ನೆಲ್ಲ ನೋಡಿ, ಓದಿ, ಪ್ರತಿಕ್ರಿಯಿಸುತ್ತಾ ಕೂದರೆ ಮನುಷ್ಯನ ಹೊಟ್ಟೆಪಾಡಿಗೆ ಬೇಕಾದ ಕೆಲಸದಿಂದಲೇ ವಿಮುಖನಾಗಬೇಕಾದೀತು. ಹಾಗಾಗಿ ಕಾಲಕ್ಕೆ ತಕ್ಕ ಕೋಲದ ಹಾಗೆ, ಹೋಗ್ತಾ ಹೋಗ್ತಾ ಜನ ಇಂಥದ್ದನ್ನೆಲ್ಲ ರೂಢಿಸ್ತಾರೆ... ಮಾತಿನಲ್ಲಿ ಚಂದಕೆ ಎರಡು ಪದಗಳಲ್ಲಿ ಹೇಳಬಹುದಾದ್ದಕ್ಕೂ ಇಮೋಜಿ ಕಳಿಸಿ, ಭಾವನೆಗಳನ್ನು ಚಿಹ್ನೆಗೆ ಇಳಿಸಿ, ಆ ಚಿಹ್ನೆಯನ್ನೇ ಸಾರ್ವತ್ರಿಕಗೊಳಿಸಿ, ಸಮಕಾಲೀನ ಆಗಿದ್ದೇವೆ, ದಿನದಿಂದ ದಿನಕ್ಕೆ ನಾವು ಭಾವವನ್ನು ಇಂತಹ ಚಿತ್ರಗಳಲ್ಲಿ ಆವಾಹಿಸಿ ಅವಕ್ಕೆ ಮಾತಿನ ರೂಪ ಕೊಡ್ತಾ ಇದ್ದೇವೆ ಅಷ್ಟೇ...

 

ಇಂಥದ್ದೇ ಸಾಕಷ್ಟು ಭ್ರಮೆಗಳು ನಮ್ಮಲ್ಲಿರ್ತವೆ. ಯೂಟ್ಯೂಬ್ ಚಾನೆಲ್ಲಿನ ಪೋಸ್ಟನ್ನು ಓಪನ್ ಮಾಡಿದವರೆಲ್ಲ ನೋಡ್ತಾರೆ, ವಾಟ್ಸಪ್ಪ್ ಸ್ಟೇಟಸ್ಸಲ್ಲಿ ಕಾಣಿಸುವ 200-300 ವ್ಯೂಸು ಅವರೆಲ್ಲ ನಮ್ಮ ಸಂದೇಶವನ್ನು ಸಂಪೂರ್ಣ ಗಮನಿಸಿದ್ದಾರೆ, ಗ್ರೂಪಿನಲ್ಲಿ ನಾವು ಹಾಕುವ ವಿಡಿಯೋಕ್ಕೋ, ಫೋಟೋಗೋ 200-250 ವ್ಯೂಸ್ ಕಂಡರೆ ಅವರೆಲ್ಲ ಅದನ್ನು ಮನಸ್ಸಿಟ್ಟು ಅರ್ಥ ಮಾಡಿಕೊಂಡಿದ್ದಾರೆ ಎಂದೆಲ್ಲ ನಾವು ಭ್ರಮೆಗಳಲ್ಲಿ ಮುಳುಗಿರುತ್ತೇವೆ. ಅದೇ ಭ್ರಮೆ ಲೈಕು, ಕಮೆಂಟು, ಶೇರುಗಳ ಸಿಕ್ಕುಗಳಲ್ಲೂ ಹರಡಿರುತ್ತವೆ. ಹೆಚ್ಚು ಹೆಚ್ಚು ಜಾಲತಾಣಗಳಲ್ಲಿ ಮುಳುಗುವಂತೆ, ಆಗಾಗ ಮೊಬೈಲ್ ಚೆಕ್ ಮಾಡುವಂತೆ ನಮ್ಮನ್ನು ಪ್ರಚೋದಿಸುವ, 24 ಗಂಟೆಯೂ ಆನ್ಲೈನ್ ಇರುವುದು ಅನಿವಾರ್ಯ ಎಂಬಂತೆ ಪರಿಸ್ಥಿತಿಯನ್ನು ಜಾಲತಾಣ ನಿರ್ಮಾತೃಗಳು ಸೃಷ್ಟಿಸುವುದು ನಮಗೆ ಗೊತ್ತಾಗುವುದೇ ಇಲ್ಲ....

ಹಾಗಾಗಿ ಯಾವುದನ್ನೂ ಸರಿಯಾಗಿ ಓದದೆ, ಯಾವುದಕ್ಕೂ ಮಾತುಗಳಲ್ಲಿ ಸ್ಪಷ್ಟನೆ, ಪ್ರತಿಕ್ರಿಯೆ ನೀಡದೆ, ಯಾವ ವಿಚಾರಕ್ಕೂ ಸರಿಯಾದ ನ್ಯಾಯ ಸಲ್ಲಿಸದೆ, ಅಲ್ಲಿಂದ ಬಂದದ್ದು ಇಲ್ಲಿಗೆ, ಇಲ್ಲಿಂದ ಬಂದದ್ದು ಅಲ್ಲಿಗೆ ಫಾರ್ವರ್ಡ್ ಮಾಡಿ, ಮುಖಮೂತಿ ಇಲ್ಲದೆ ಸುದ್ದಿಗಳನ್ನೆಲ್ಲ ಶೇರ್ ಮಾಡಿ ಕೃತಾರ್ಥರಾಗ್ತೇವೆ... ತುಂಬ ಮಂದಿಯನ್ನು ತಲಪುವ ಹುಚ್ಚು ಭ್ರಮೆಯಲ್ಲಿ ನಮ್ಮ ಭಾವನೆಗಳ ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಇಮೋಜಿಗಳಿಗೇ ಗುತ್ತಿಗೆಗೆ ನೀಡಿದ್ದೇವೆ... ನಿಮಗೆ ಹಾಗೆ ಅನ್ನಿಸುತ್ತದೆಯೇ? ಯಾರಾದರೂ ಅಪ್ಪಿತಪ್ಪಿ ನನ್ನ ಲೇಖನವನ್ನು ಕೊನೆಯ ತನಕ ಓದಿದ್ದರೆ ದಯವಿಟ್ಟು ಪ್ರತಿಕ್ರಿಯೆಸಿ....

-ಕೃಷ್ಣಮೋಹನ ತಲೆಂಗಳ (27.02.2022).

2 comments:

suresha belagaje said...

ನಾಲ್ಕು ಲೈನ್ ಬರೆಯುವವರು ಒಕೆ. ಆಮೇಲೆ ಇಮೋಜಿ ಪ್ರತಿಕ್ರಿಯೆಯವರು, ನಂತರದ ಸ್ಥಾನ ಓದಿಯೂ ಪ್ರತಿಕ್ರಿಯೆ ನೀಡದವರು ಅಲ್ವ?

KRISHNA said...

Howdu sir