ವೃತ್ತಿ ಬದುಕಿಗೂ, ಕನ್ನಡಪ್ರಭ ಸುದ್ದಿಮನೆ ಸಾಂಗತ್ಯಕ್ಕೂ 2 ದಶಕ ಪೂರ್ಣ!




ಈ ಅ.7ರಂದು ಪತ್ರಕರ್ತನಾಗಿ ನನ್ನ ವೃತ್ತಿ ಬದುಕಿಗೆ ಹಾಗೂ ಕನ್ನಡಪ್ರಭ ಸುದ್ದಿಮನೆಯ ಸಾಂಗತ್ಯಕ್ಕೆ 20 ವರ್ಷ ಭರ್ತಿಯಾಯಿತು. ಒಂದು ಸಂಸ್ಥೆಯಲ್ಲಿ ಇಷ್ಟು ವರ್ಷ ಕೆಲಸ ಮಾಡಿದವರ ಪೈಕಿ ನಾನು ಮೊದಲಿಗನೂ ಅಲ್ಲಕೊನೆಯವನೂ ಅಲ್ಲ. ಇದು ನನ್ನ ಪಾಲಿನ ಮಹತ್ಸಾಧನೆ ಅಂತ ಹೇಳಿಕೊಳ್ಳುವುದಕ್ಕೂ ಈ ಬರಹ ಅಲ್ಲ.


ಆದರೆ56  ವರ್ಷಗಳನ್ನು ಪೂರೈಸಿದ ರಾಜ್ಯದ ಹಿರಿಯ ಪತ್ರಿಕಾ ಸಂಸ್ಥೆಯೊಂದರ ಪಯಣದ 20 ವರ್ಷಗಳಲ್ಲಿ ನಾನೂ ಜೊತೆಗಿದ್ದೆ ಮತ್ತು ನನ್ನ ಕೆಲಸ ನನಗೆ ಖುಷಿ ಕೊಟ್ಟಿದೆ ಎಂದು ಹೇಳುವುದಕ್ಕೆ ಇದೊಂದು ಅವಕಾಶ ಅಷ್ಟೆ.


 

2002ರ ಅ.7ರಂದು ಇದೇ ನವರಾತ್ರಿಯ ಅವಧಿಯಲ್ಲೇ ಬೆಂಗಳೂರು ಕ್ವೀನ್ಸ್ ರೋಡಿನ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಕಚೇರಿಗೆ ಹೋಗಿ ಕಾಂಟ್ರಾಕ್ಟ್ ಗೆ ಸಹಿ ಹಾಕಿ ಕೆಲಸಕ್ಕೆ ಸೇರಿದ ನೆನಪು. ಪತ್ರಿಕೆಯ ಕೆಲಸದ ಬಗ್ಗೆ ಹೆಚ್ಚಿನ ಕಲ್ಪನೆಅನುಭವ ಇಲ್ಲದೆ ಉಪಸಂಪಾದಕನಾಗಿ ಮಂಗಳೂರು ಕಚೇರಿಯಲ್ಲಿ ಕೆಲಸಕ್ಕೆ ಸೇರಿದಾಗ ಎರಡು ದಶಕಗಳ ಕಾಲ ನಾನು ಅದೇ ವೃತ್ತಿಯಲ್ಲಿ ಮುಂದುವರಿಯುವ ಅಥವಾ ಸಾಗಿ ಬರುವ ಕುರಿತು ಯಾವುದೇ ಸ್ಪಷ್ಟ ಕಲ್ಪನೆಗಳು ಇರಲಿಲ್ಲ.


ನಾನು ಮತ್ತು ನನ್ನ ಸಹಪಾಠಿ ವೇಣುವಿನೋದ್ ಜೊತೆ ಜೊತೆಗೇ ಕನ್ನಡಪ್ರಭಕ್ಕೆ ಸೇರಿದ್ದು. ನಾವಿಬ್ಬರೂ ಒಟ್ಟಿಗೇ ಸ್ಪ್ಲೆಂಡರ್ ಬೈಕ್ ಖರೀದಿಸಿದ್ದು... ಅವನು ಆ ಬಳಿಕ ವಿಜಯವಾಣಿಗೆ ತೆರಳಿದ್ದುಪ್ರಸ್ತುತ ಉದಯವಾಣಿಯಲ್ಲಿದ್ದಾನೆ.

 

ಭಯಂಕರವಾದ ಯಾವುದೇ ಗುರಿ ಇಲ್ಲದೆ ಪದವಿ ತನಕ ಕಲಿಯುತ್ತಾ ಬಂದುಯಾಕೆ ಕಲಿತೆ ಅಂತಲೇ ಗೊತ್ತಿಲ್ಲದ ಬಿ.ಕಾಂ. ಮುಗಿಸಿದಾಗ ಡಿಗ್ರಿಯ ಕೊನೆಯ ದಿನಗಳಲ್ಲಿ ಹಂಪನಕಟ್ಟೆ ವಿ.ವಿ.ಕಾಲೇಜಿನ ಗುರುಗಳಾದ ಉದಯಕುಮಾರ್ ಸರ್ ಹಾಗೂ ಸುಧಾ ಮೇಡಂ, “ಕೊಣಾಜೆಯಲ್ಲಿ ಎಂಸಿಜೆ ಅಂತ ಕೋರ್ಸ್ ಇದೆನಿನಗೆ ಬರವಣಿಗೆ ಅಭ್ಯಾಸ ಇದೆಯಲ್ಲ ಸೇರು’ ಅಂತ ಸಲಹೆ ಕೊಟ್ರು. ಯಾವುದೇ ಡಿಗ್ರಿ ಮಾಡಿದವರೂ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಅವಕಾಶ ಇದ್ದುದರಿಂದ ಹಾಗೂ ಅದಕ್ಕಿಂತ ಹೆಚ್ಚಾಗಿ ನನ್ನ ಊರಿನಲ್ಲೇ ವಿಶ್ವವಿದ್ಯಾನಿಲಯ (ಮಂಗಳಗಂಗೋತ್ರಿ) ಇದ್ದ ಕಾರಣ ಎಂಸಿಜೆಗೆ (ಮಾಸ್ಟರ್ ಆಫ್ ಮಾಸ್ ಕಮ್ಯೂನಿಕೇಶನ್ ಆಂಡ್ ಜರ್ನಲಿಸಂ) ಸೇರ್ಪಡೆಗೊಂಡೆ. ಎರಡು ವರ್ಷದ ಕೋರ್ಸ್ ಮುಗಿಸಿ 2002 ಜೂನಿನಲ್ಲಿ ವಿಜಯಕರ್ನಾಟಕ ಬೆಂಗಳೂರು ಕಚೇರಿಯಲ್ಲಿ ಎರಡು ತಿಂಗಳ ಅವಧಿಯ ಇಂಟರ್ನ್ ಶಿಪ್ ಸಂದರ್ಭದಲ್ಲೇ ಪತ್ರಿಕಾ ಕಚೇರಿಯ ಕೆಲಸದ ಬಗ್ಗೆ ಅರಿವು ಸಿಕ್ಕಿದ್ದು.



ಆಗಸ್ಟ್ ನಲ್ಲಿ ಇಂಟರ್ನ್ ಶಿಪ್ ಮುಗಿಸಿ ಬರುವಾಗ ನಾನುನನ್ನ ಸಹಪಾಠಿಗಳೆಲ್ಲರೂ ಬೆಂಗಳೂರಿನ ಎಲ್ಲ ಪತ್ರಿಕಾ ಕಚೇರಿಗಳ ಸಂಪಾದಕರ ಚೇಂಬರುಗಳಿಗೆ ಹೋಗಿ ರೆಸ್ಯೂಮ್ ಕೊಟ್ಟು ಬಂದಿದ್ದೆವು. ಕನ್ನಡಪ್ರಭ ಸಂಪಾದಕರಾಗಿದ್ದ ವೆಂಕಟನಾರಾಯಣ ಅವರನ್ನೂ ಕಂಡು ಬಂದಿದ್ದೆವು. ಇದಾಗಿ ಎರಡು ತಿಂಗಳ ಬಳಿಕ ಕನ್ನಡಪ್ರಭಕ್ಕೆ ಸೇರುವ ಅವಕಾಶ ಒದಗಿತು. ಈಗ ನಿವೃತ್ತರಾಗಿರುವ ಆಗಿನ ಸುದ್ದಿ ಸಂಪಾದಕರಾಗಿದ್ದ ಜಯರಾಮ ಅಡಿಗರುಮಂಗಳೂರು ಆವೃತ್ತಿ ಮುಖ್ಯಸ್ಥರಾಗಿದ್ದ ಮಧುಕೇಶ್ವರ ಯಾಜಿಯವರು ಹಾಗೂ ಪ್ರಧಾನ ವರದಿಗಾರರಾಗಿದ್ದ ಚಿದಂಬರ ಬೈಕಂಪಾಡಿಯವರು ಮಂಗಳೂರು ಕಚೇರಿಯಲ್ಲೇ ಸಂದರ್ಶನ ನಡೆಸಿದ್ದು ಈಗಲೂ ನೆನಪಿದೆ. ಅಡಿಗ ಸರ್ “ನಿನಗೆ ರಿಪೋರ್ಟಿಂಗ್ ಆಗಬಹುದೋಡೆಸ್ಕ್ ಆಗಬಹುದೋ?” ಅಂತ ಕೇಳಿದಾಗ ನಾನು “ಡೆಸ್ಕ್ ಆಗಬಹುದು” ಅಂತ ಹೇಳಿದ್ದೆ ಅಂತ ಈಗ ನೆನಪು. ಹಾಗೆ ನಾನು ಡೆಸ್ಕ್ ಗೆ ಹಾಗೂ ಗೆಳೆಯ ವೇಣುವಿನೋದ್ ವರದಿಗಾರಿಕೆ ವಿಭಾಗಕ್ಕೆ ಆಯ್ಕೆಯಾದೆವು.

 


ಅಂದು ಶುರುವಾದ ವೃತ್ತಿ ಬದುಕು ಎರಡು ದಶಕಗಳ ಕಾಲ ಮುಂದುವರಿದು ಬಂದಿದೆ. 20 ವರ್ಷ ಒಂದೇ ಸಂಸ್ಥೆಯಲ್ಲಿ ಇರುವುದು ಸಾಧನೆಯೋಬಲಹೀನತೆಯೋ ಎಂದೆಲ್ಲಾ ವಿಮರ್ಶೆ ಮಾಡಲು ಹೊರಟರೆ ಅದು ಅವರವರ ವಾದದ ಧಾಟಿಗೆ ಅನುಸಾರ ಉತ್ತರ ಸಿಕ್ಕೀತು ಅಷ್ಟೆ. ಸಾಧನೆ ಮತ್ತು ಸಾರ್ಥಕತೆ ಇವೆಲ್ಲ ನಾವು ಕಂಡುಕೊಳ್ಳುವುದರಲ್ಲಿ ಮತ್ತು ಅದನ್ನು ವಿಶ್ಲೇಷಿಸುವುದರಲ್ಲಿ ಇರುತ್ತದೆ ಅಷ್ಟೆ. ನನ್ನ ಸಂಸ್ಥೆ ನನಗೆ ಇಷ್ಟೂ ವರ್ಷಗಳಲ್ಲಿ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿದೆನನ್ನಿಂದ ತಪ್ಪುಗಳಾದಾಗ ತಿದ್ದಿ ಮುನ್ನಡೆಯಲು ಅವಕಾಶ ಕಲ್ಪಿಸಿದೆಬರವಣಿಗೆಗೆವೃತ್ತಿಗೆ ಪೂರಕ ಅವಕಾಶಗಳಲ್ಲಿ ಮುಂದೆ ಹೋಗುವುದಕ್ಕೆ ನನ್ನ ಸಂಸ್ಥೆ ನನಗೆ ಸಾಕಷ್ಟು ವೇದಿಕೆಗಳನ್ನು ಕಲ್ಪಿಸಿದೆ. ಅದರಲ್ಲಿ ಖುಷಿ ಇದೆ. ಅದೇ ಕಾರಣಕ್ಕೆ ಕನ್ನಡಪ್ರಭದ ಭಾಗವಾಗಿ ಮುಂದುವರಿದಿರುವುದಕ್ಕೆ ನನಗೆ ಹೆಮ್ಮೆ ಇದೆ.


ಹಾಗಂತ ನಾನು ಹಿರಿಯ ಪತ್ರಕರ್ತನೂ ಅಲ್ಲಮಹಾನ್ ಸಾಧಕ ಪತ್ರಕರ್ತನಂತೂ ಅಲ್ಲವೇ ಅಲ್ಲ. ಯಾರೂ ಮಾಡದಂಥ ವಿಶೇಷವನ್ನೇನನ್ನೂ ನಾನು ಮಾಡಿಲ್ಲ. ಆದರೆನನ್ನ ಸಂಸ್ಥೆನಮ್ಮ ಸಂಪಾದಕರು ನನಗೆ ವಹಿಸಿದ ಜವಾಬ್ದಾರಿಗಳನ್ನೆಲ್ಲ ಪ್ರಾಮಾಣಿಕವಾಗಿ ನಿರ್ವಹಿಸುವಆ ಮೂಲಕ ಕೆಲಸವನ್ನು ಕಲಿಯುವ ಪ್ರಯತ್ನ ಮಾಡಿದ್ದೇನೆ ಎಂದಷ್ಟೇ ಹೇಳಬಯಸುತ್ತೇನೆ. ಕೆಲವೊಮ್ಮೆ ಪ್ರಯಾಣದಲ್ಲಿ ನಮಗೆ ಅದರ ವೇಗಅವಧಿಬದಲಾವಣೆಗಳು ಅರಿವಿಗೆ ಬರುವುದೇ ಇಲ್ಲ. ಒಂದು ನಿಲ್ದಾಣ ತಲುಪಿದ ಮೇಲೆ ಹೊರಟ ಸಮಯವನ್ನು ಲೆಕ್ಕ ಹಾಕಿದಾಗಲೇ ಗೊತ್ತಾಗುವುದುಓಹ್ ನಾನಿಷ್ಟು ದೂರ ಸಾಗಿ ಬಂದಿದ್ದೇನಲ್ವ ಅಂತ...

 

 ವೃತ್ತಿ ಬದುಕು ಕೂಡಾ ಹಾಗೆಯೇ...

ಬದುಕಿನ ಹಲವು ಪ್ರಮುಖ ಘಟ್ಟಗಳನ್ನು ಕನ್ನಡಪ್ರಭದಲ್ಲಿರುವಾಗಲೇ ದಾಟಿ ಬಂದಿದ್ದೇನೆ. ಬದುಕಿಗೆ ಆಶ್ರಯ ಕೊಟ್ಟಕೋವಿಡ್ ನಂತಹ ಸಂಧಿಗ್ಧ ಪರಿಸ್ಥಿತಿಯಲ್ಲೂ ನಮ್ಮನ್ನು ಕೆಲಸದಲ್ಲಿ ಉಳಿಸಿಕೊಂಡು ಜೀವನದಲ್ಲಿ ಮುಂದುವರಿಯಲು ಅವಕಾಶ ಕೊಟ್ಟ ನಮ್ಮ ಸಂಸ್ಥೆ ಕುರಿತು ಸಾಕಷ್ಟು ಅಭಿಮಾನ ಇದೆ... ಅದನ್ನು ಈ ಸಂದರ್ಭ ಮನಃಪೂರ್ವಕವಾಗಿ ನೆನಪಿಸಲು ಬಯಸುತ್ತೇನೆ.

 

20 ವರ್ಷಗಳ ನಿರಂತರ ನೈಟ್ ಶಿಫ್ಟ್ ಕೆಲಸಭಾನುವಾರ ರಜಾ ಇಲ್ಲದ ಬದುಕುಸಂಜೆಗಳ ವೇಳೆಗ ಕಚೇರಿಯಲ್ಲಿ ವ್ಯಸ್ತರಾಗಿರುವಂಥ, ತಡ ರಾತ್ರಿ ತನಕ ಕೆಲಸ ಮಾಡುವಂತಹ ಸನ್ನಿವೇಶ, ವರ್ಷಕ್ಕೆ ನಾಲ್ಕೇ ದಿನ ಕ್ಲೋಸ್ಡ್ ಹಾಲಿಡೇ ಪಡೆಯುವ ಸಂದರ್ಭ... ಇವೆಲ್ಲ ಹಲವು ಸಲ ವಿಚಿತ್ರ ಅನ್ನಿಸಿದರೂ ಹೋಗ್ತಾ ಹೋಗ್ತಾ ಅದು ಬದುಕಿನ ಭಾಗವಾಗಿ ಹೋಗಿದೆ. ಹಲವು ವೃತ್ತಿನಿರತರ ಬದುಕು ಹೀಗೆಯೇ ಇರುತ್ತದೆ. ಯಾಕೆ ಭಾಗವಾಗಿ ಹೋಗಿದೆ ಎಂದರೆ.... ನನ್ನ ಈ ವರೆಗಿನ ಬದುಕಿನ ಸುಮಾರು ಅರ್ಧ ಭಾಗವನ್ನು ನಾನು ಕನ್ನಡಪ್ರಭದಲ್ಲೇ ಕಳೆದಿದ್ದೇನೆಕಲಿಕೆಯ 22 ವರ್ಷಗಳ ನಂತರದ ಬದುಕೆಲ್ಲ ವೃತ್ತಿ ಜೀವನವೇ ಆಗಿ ಹೋಗಿದೆ...



ನಾನು ಕೆಲಸಕ್ಕೆ ಸೇರುವಾಗ ದಿ ನ್ಯೂ ಇಂಡಿಯನ್ ಎಕ್ಸೆಪ್ರೆಸ್ ಕಚೇರಿಯಲ್ಲಿ ಕನ್ನಡಪ್ರಭ ಕಚೇರಿಯಿತ್ತು. ಕನ್ನಡಪ್ರಭ ಇಂಡಿಯನ್ ಎಕ್ಸೆಪ್ರೆಸ್ ಸಂಸ್ಥೆ ಹುಟ್ಟು ಹಾಕಿದ ಪತ್ರಿಕೆ. ಬಳಿಕ ಕನ್ನಡಪ್ರಭದಲ್ಲಿ ಬಂಡವಾಳ ಹೂಡಿದ ಏಷಿಯಾನೆಟ್ ಮಾಧ್ಯಮ ಸಂಸ್ಥೆಯ ಕಚೇರಿಗೆ ಕನ್ನಡಪ್ರಭ ಕಚೇರಿಯೂ ವರ್ಗಾವಣೆಗೊಂಡುಏಷಿಯಾನೆಟ್ ಸಮೂಹದ ಆಡಳಿತಕ್ಕೊಳಪಟ್ಟು ಈಗಲೂ ಅದೇ ಆಡಳಿತದಲ್ಲಿ ಮುಂದುವರಿದಿದೆ.

 


ಫ್ಯಾಕ್ಸ್ ಟೈಪ್ ಮಾಡುತ್ತಿದ್ದ ಕಾಲದಲ್ಲಿ ನಾನು ಕೆಲಸಕ್ಕೆ ಸೇರಿದ್ದು. ಆಗ ಫೋಟೋಗ್ರಾಫರ್ ಗಳು ರೀಲ್ ಇರುವ ಎಸ್ ಎಲ್ ಆರ್ ಕ್ಯಾಮೆರಾದಲ್ಲಿ ಫೋಟೋ ಸೆರೆ ಹಿಡಿದು ಅದನ್ನು ಕ್ಲೀನ್ ಮಾಡಿಸಿಪ್ರಿಂಟ್ ಹೊಡೆಸಿ ಕಚೇರಿಗೆ ತಂದು ಕೊಡುತ್ತಿದ್ದರು. ಅಷ್ಟು ಮಾತ್ರವಲ್ಲ. ನಮ್ಮ ದೇಶದಲ್ಲಿ ಮೊಬೈಲ್ ಫೋನ್ ಸಾರ್ವತ್ರಿಕವಾಗಿ ಬಳಕೆಗೆ ಸಿಕ್ಕಿದ್ದುಇದೇ 2002ನೇ ಇಸವಿಯಲ್ಲಿ. ಹಾಗಾಗಿ ಈ ಮೊಬೈಲ್ ಫೋನ್ ಮತ್ತು ಇಂಟರ್ ನೆಟ್ ವ್ಯವಸ್ಥೆಯ ಜನಪ್ರಿಯವಾಗುವ ಹೊತ್ತಿನ ತಲೆಮಾರಿನಲ್ಲಿ ಕೆಲಸಕ್ಕೆ ಸೇರಿದವನಾದ ನಾನು ಈ ಎರಡು ದಶಕದಲ್ಲಿ ಪತ್ರಿಕೋದ್ಯಮದ ತಂತ್ರಜ್ಞಾನದಲ್ಲಾದ ಬಹಳಷ್ಟು ಬದಲಾವಣೆಗಳಿಗೆ ಸಾಕ್ಷಿಯಾಗಿದ್ದೇನೆ.



20ನೇ ಶತಮಾನದ ಉತ್ತರಾರ್ಧದವರಾದ  ನಮ್ಮ ಅರ್ಧ ಆಯುಷ್ಯ ಮೊಬೈಲ್ ಇಲ್ಲದೆಇನ್ನರ್ಧ ಆಯುಷ್ಯ ಮೊಬೈಲ್ ಜೊತೆಗೆ ಕಳೆದ ಕಾರಣ ನಾವೊಂದು ಥರ ಸ್ಥಿತ್ಯಂತರದ ಪಳೆಯುಳಿಕೆಗಳು.

 

ಇಂದು ವಾಟ್ಸಪ್ಪಿನಲ್ಲೇ ಸುದ್ದಿ ಬರುವಷ್ಟುಸುದ್ದಿಗೋಷ್ಠಿಗಳೇ ಲೈವ್ ಹೋಗುವಷ್ಟರ ಮಟ್ಟಿಗೆ ಪತ್ರಿಕೋದ್ಯಮ ಬೆಳೆದಿದೆ....

ಜಗತ್ತಿನೊಂದಿಗೆ, ನಮ್ಮ ನಮ್ಮ ಬದುಕಿನೊಂದಿಗೇ ಸಹಜವಾಗಿ ಪತ್ರಿಕೋದ್ಯಮವೂ ಬದಲಾವಣೆಗಳನ್ನು ಕಂಡಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳ ಮನಃಸ್ಥಿತಿಯೂ ಈಗ ಬದಲಾಗಿದೆ.ಪತ್ರಿಕೋದ್ಯೋಗದ ಅವಕಾಶಗಳೂ ಸಾಕಷ್ಟು ವಿಸ್ತಾರವಾಗಿವೆ. ಮುದ್ರಣ ಮಾಧ್ಯಮಕ್ಕಿಂತ ಆಚೆಗಿನ ಪತ್ರಿಕೋದ್ಯಮ ಅವಕಾಶಗಳು ದಿನದಿಂದ ದಿನಕ್ಕೆ ವಿಶಾಲವಾಗುತ್ತಿದೆ... ಮೊಬೈಲು, ಇಂಟರ್ನೆಟ್ಟು ಮತ್ತು ವ್ಯಸ್ತ ಬದುಕು ಇವು ಓದುಗರ, ವೀಕ್ಷಕರ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರಿದೆ.

ನಮ್ಮ ಕಾಲ ಹಾಗೆ, ಈ ಕಾಲ ಹೀಗೆ ಎಂದು ಹೇಳುತ್ತಾ ಕೂರುವುದು, ಹೋಲಿಸುತ್ತಾ ಕೂರುವುದರಿಂದ ಬಹಳಷ್ಟು ಸಲ ಏನೂ ಪ್ರಯೋಜನ ಆಗುವುದಿಲ್ಲ. ಆಯಾ ಕಾಲಕ್ಕೆ ತಕ್ಕ ಹಾಗೆ ಎಲ್ಲದರಲ್ಲೂ ಬದಲಾವಣೆಗಳೂ ಆಗುತ್ತಲೇ ಹೋಗುತ್ತವೆ. ನಾವು ಬದಲಾವಣೆ ಜೊತೆಗಿದ್ದರೂ, ಇಲ್ಲದಿದ್ದರೂ ಸಹ. ಹಾಗಾಗಿ ಬದಲಾವಣೆಗಳನ್ನು ಒಪ್ಪಿಕೊಂಡು, ಅಪ್ಪಿಕೊಂಡು ಮುಂದೆ ಹೋಗಲು ಕಲಿಯಬೇಕು ಎಂಬುದು ಪತ್ರಿಕೋದ್ಯಮದಲ್ಲೂ ನಾವು ಕಲಿತಿದ್ದೇವೆ. ಅಷ್ಟಕ್ಕೂ ನಾನು ಪತ್ರಿಕೋದ್ಯಮಿ ಅಲ್ಲ, ಪತ್ರಿಕೋದ್ಯೋಗಿ. ನನ್ನ ಸಂಸ್ಥೆ ನನಗೆ ವಹಿಸಿದ ಜವಾಬ್ದಾರಿಗಳನ್ನು ನಿರ್ವಹಿಸುವುದಷ್ಟೇ ನನ್ನ ಕರ್ತವ್ಯ. ಹೂಡಿಕೆದಾರರು, ಆಡಳಿತ ಮಂಡಳಿಯವರು ಕಾಲ ಕಾಲಕ್ಕೆ ತಕ್ಕ ಹಾಗೆ ಮಾಡುವ ಬದಲಾವಣೆಗಳಿಗೆ ಉದ್ಯೋಗಿಗಳಾದವರು ಪೂರಕವಾಗಿ ಇರಲೇಬೇಕು. ಅದು ಲೋಕರೂಢಿ.

....

ರಾತ್ರಿ ಪಾಳಿಯಲ್ಲೇ ದುಡಿಯುವ ನಮ್ಮನ್ನು ಹಗಲು ಕಂಡಾಗಲೆಲ್ಲಾ “ನಿಮಗೀವತ್ತು ರಜೆಯ?” ಅಂತ ಕೇಳುವ ಪ್ರಶ್ನೆ ಅವತ್ತೂ ಇತ್ತು, ಇವತ್ತೂ ಇದೆ. ಎಲ್ಲಿಯಾದರೂ ಯಾರಿಗಾದರೂ ಯಾರಾದರೂ ಪರಿಚಯ ಮಾಡಿ ಕೊಡುವಾಗ ಇವರು ಪತ್ರಿಕೆಯ ಸಂಪಾದಕರು ಅಂತಲೇ ಹೇಳುವವರೂ ಇದ್ದಾರೆ. ಪತ್ರಿಕೆಗೆ ಒಬ್ಬರೇ ಸಂಪಾದಕರು ಅಂತ ಅರ್ಥ ಮಾಡಿಸಿ ಸಾಕಾಗಿದೆ. ಜನಸಾಮಾನ್ಯರ ಪಾಲಿಗೆ ಉಪ ಸಂಪಾದಕ, ಸಂಪಾದಕ ಎಲ್ಲ ಒಂದೇ.

 

ಪ್ರಪಂಚದ ಎಲ್ಲ ತಾಪತ್ರಯಗಳಿಗೆ ಪತ್ರಿಕೆ ಹಾಗೂ ಟಿ.ವಿ.ಚಾನೆಲ್ಲುಗಳೇ ಹೊಣೆ ಅಂತ ದೂಷಿಸುವವರನ್ನು ದಿನಾ ನೋಡುತ್ತಿದ್ದೇನೆ. ಖ್ಯಾತನಾಮರು ಮರಣಶಯ್ಯೆಯಲ್ಲಿರುವಾಗ, ಅವರ ಸಾವು ಖಚಿತವಾಗದೇ ಇದ್ದಾಗಲೂ ತಮ್ಮ ವಾಟ್ಸಪ್ಪು ಸ್ಟೇಟಸ್ಸುಗಳಲ್ಲಿ “ಓಂ ಶಾಂತಿ, RIP” ಅಂತ ಹಾಕಿ, ಅವರನ್ನು ಜೀವಂತ ಕೊಂದು... ಬಳಿಕ, “ಪತ್ರಿಕೆಗಳು ಹಾಗೂ ಟಿ.ವಿ.ಗಳಿಗೆ ನಮ್ಮಲ್ಲೇ ಮೊದಲು” ಅಂತ ಕೊಡುವ ಚಟ, ಇಡೀ ಮಾಧ್ಯಮವೇ ಕುಲಗೆಟ್ಟು ಹೋಗಿದೆ, ಟಿಆರ್ಪಿ ಆಂತ ಸಾಯ್ತಾರೆ ಎಂದೆಲ್ಲಾ ಶಪಿಸುವವರನ್ನು ಧಾರಾಳವಾಗಿ ನೋಡಿದ್ದೇನೆ. ಮಾಧ್ಯಮದವರನ್ನು ಬಯ್ಯಬೇಕೆಂದು ಬಾಯಿ ತುರಿಸುವ ಕೆಲವರು ನನ್ನೆದುರಿಗೇ ಬೇರೆ ಮಾಧ್ಯಮದವರನ್ನು ಬೈದ ಹಾಗೆ ಮಾಡುತ್ತಾ ತಮ್ಮ ಭಯಂಕರ ಅಸಹನೆ ಕಾರಿದ್ದಕ್ಕೂ ಸಾಕ್ಷಿಯಾಗಿದ್ದೇನೆ....

 

ಇದು ಎಲ್ಲ ವೃತ್ತಿಯಲ್ಲೂ ಇದ್ದದ್ದೇ. ಆಯಾ ವೃತ್ತಿಯ ಕಷ್ಟ ಸುಖ, ಒಳ ಸುಳಿಗಳು, ಕಷ್ಟಗಳು, ಮಿತಿಗಳು, ಸವಾಲುಗಳು ಹತ್ತಿರದಿಂದ ಆ ವೃತ್ತಿಯನ್ನು ಕಂಡವರಿಗೆ ಅನುಭವಿಸಿದವರಿಗೆ ಮಾತ್ರ ಗೊತ್ತು. ಜಗತ್ತಿನ ಎಲ್ಲ ವೃತ್ತಿಯೂ ಹಾಗೆ. ದೂರದಿಂದ ನಿಂತು ದೂಷಿಸಲು ಸುಲಭ. ಬಳಿ ಸಾರಿ, ಅರ್ಥ ಮಾಡಿಕೊಂಡರೆ ಮಾತ್ರ ಯಾಕೆ ಹೀಗೆ ಅಂತ ತಿಳಿದೀತು.

ಜಾಹೀರಾತು, ಟಿಆರ್ ಪಿ, ನಂ.1, ನಮ್ಮಲ್ಲೇ ಮೊದಲು ಇತ್ಯಾದಿಗಳು ಯಾಕೆ ಮಾಧ್ಯಮಗಳಿಗೆ ಮುಖ್ಯವಾಗುತ್ತವೆ ಎಂತ ಸಾಕಷ್ಟು ಹಿರಿಯ ಪತ್ರಕರ್ತರು ಈಗಾಗಲೇ ಹೇಳಿದ್ದಾರೆ, ಮತ್ತೊಮ್ಮೆ ಹೇಳಿ ಪ್ರಯೋಜನ ಇಲ್ಲ. ಮಾಧ್ಯಮಗಳು ನಡೆಯುವುದೇ ಜಾಹೀರಾತು ಹಾಗೂ ಟಿಆರ್ ಪಿಗಳಿಂದ... ಈ ಬಗ್ಗೆ ಇನ್ನೇನೂ ಹೇಳುವುದಕ್ಕಿಲ್ಲ.

.....

ಕೋವಿಡ್ ಅಪ್ಪಳಿಸಿದಾಗ ಪತ್ರಿಕೆಗಳು ಮುಚ್ಚಿಯೇ ಹೋಗುತ್ತವೆಯೇನೋ ಎಂಬಂಥ ಆತಂಕ ಕಾಡಿತ್ತು. ಇಡೀ ಊರಿಗೇ ಕರ್ಫ್ಯೂ ಕಾಡಿದಾಗ ನಾವು ವಿಶೇಷ ಅನುಮತಿ ಪಡೆದು ಕೆಲಸಕ್ಕೆ ಹೋಗಿ ಕೆಲಸ ಮಾಡಿದ್ದೇವೆ. ಎಲ್ಲ ಪತ್ರಿಕೆಗಳ ಆಡಳಿತ ಮಂಡಳಿಯವರು, ಸಂಪಾದಕರು ಸೇರಿ, ದೃಢ ನಿಶ್ಚಯ ಮಾಡಿ ಆ ಹೊತ್ತಿಗೆ ಪತ್ರಿಕೆಗಳು ಕ್ಲಪ್ತ ಸಮಯಕ್ಕೆ ಜನರ ಕೈಸೇರುವಂತೆ ಮಾಡಿ ಪತ್ರಿಕೆಯನ್ನು ಭಯಂಕರ ಗಂಡಾಂತರದಿಂದ ಪಾರು ಮಾಡಿದರು. ಪತ್ರಿಕಾ ವರದಿಗಾರರು, ಏಜೆಂಟರು, ಮುದ್ರಕರು ಎಲ್ಲರ ಶ್ರಮದಿಂದಾಗಿ ಆ ಹೊತ್ತಿಗೆ ನಮ್ಮೆಲ್ಲರ ಕೆಲಸಗಳೂ ಉಳಿದವು. ಮುಖ್ಯವಾಗಿ ನಮ್ಮ ಕನ್ನಡಪ್ರಭದಲ್ಲಿ ಕೋವಿಡ್ ಕಾರಣದಿಂದ ಎಕ್ಸೆಸ್ ಸ್ಟಾಫ್ ಎಂಬ ಕಾರಣದಿಂದ ಯಾರನ್ನೂ ಮನೆಗೆ ಕಳುಹಿಸಿಲ್ಲ ಎಂಬ ಸಮಾಧಾನ ಹಾಗೂ ಕೃತಜ್ಞತೆ ಸದಾ ಇದೆ.

.....

ದಶಕದ ಹಿಂದೆ ಮಂಗಳೂರು ವಿಮಾನ ದುರಂತ ನಡೆದಾಗತಡರಾತ್ರಿ ಕೆಲಸ ಮುಗಿಸಿ 1 ಗಂಟೆ ವೇಳೆಗೆ ಮಲಗಿದ್ದ ನಮ್ಮನ್ನು ಬೆಳ್ಳಂಬೆಳಗ್ಗೆ 6 ಗಂಟೆಗೇ ಅಂದಿನ ಸಂಪಾದಕರು ಮಂಗಳೂರಿನ ಪ್ರತಿ ಸಿಬ್ಬಂದಿಗೂ ವೈಯಕ್ತಿಕವಾಗಿ ಕರೆ ಮಾಡಿ ಎಚ್ಚರಿಸಿ, ನಮ್ಮನ್ನೆಲ್ಲ ಫೀಲ್ಡಿಗೆ ಕಳುಹಿಸಿ ಆ ದಿನ ರಾತ್ರಿಯೊಳಗೆ ವಿಮಾನ ದುರಂತದ ಕುರಿತು ಸುಮಾರು 100ಕ್ಕೂ ಮಿಕ್ಕಿ ವರದಿಗಳನ್ನು ತಯಾರಿ ಮಾಡಿದ್ದು, ವಾಸ್ತವಿಕವಾಗಿ ವರದಿಗಾರನಲ್ಲದ ನಾನು ಅಂದು ವೆನ್ಲಾಕ್ ಆಸ್ಪತ್ರೆಗೆ ಹೋಗಿ, ಅಲ್ಲಿ ಸುಟ್ಟು ಹೋದ ಕಟ್ಟಿಗೆಗಳ ಥರ ಆಂಬುಲೆನ್ಸ್ ನಲ್ಲಿ ಶವಾಗಾರಕ್ಕೆ ಬರುತ್ತಿದ್ದ ಹೆಣಗಳ ಕುರಿತು ವರದಿ ಮಾಡಿದ್ದು, ಸಂಬಂಧಿಕರನ್ನು ಮಾತನಾಡಿಸಿದ್ದು, ಆಸ್ಪತ್ರೆಯಲ್ಲಿ ಬದುಕುಳಿದವರ ಸಂದರ್ಶನ ಮಾಡಿದ್ದು... ಇವನ್ನೆಲ್ಲ ಯಾವತ್ತಿಗೂ ಮರೆಯಲು ಸಾಧ್ಯವೇ ಇಲ್ಲ. ನಿರ್ಲಿಪ್ತವಾಗಿ ವೃತ್ತಿನಿರತರಾಗಿರಬೇಕಾಗಿರುವಂಥ ಕೆಲಸ ನಮ್ಮದು.

ಬೆಂಗಳೂರು ಕಚೇರಿಯ ಪುರವಣಿ ವಿಭಾಗದ ಅನೇಕ ಹಿರಿಯ ಸಹೋದ್ಯೋಗಿಗಳ ಸಲಹೆ, ಸೂಚನೆ ಮೇರೆಗ ನೂರಾರು ಲೇಖನಗಳನ್ನು ಬರೆದದ್ದು, ವಿಶೇಷ ಪುರವಣಿಗಳನ್ನು ರಚಿಸಿದ್ದು, ನಮ್ಮ ವೆಬ್ ವಿಭಾಗದವರು ನೀಡಿದ ಅವಕಾಶ ಹಾಗೂ ನಮ್ಮ ಪ್ರಧಾನ ಸಂಪಾದಕರಾದ ರವಿ ಹೆಗಡೆ ಸರ್ ಪ್ರೋತ್ಸಾಹದಿಂದ ಕೆಲ ದಿನಗಳ ಕಾಲ ವೆಬ್ ವೀಡಿಯೋ ಸುದ್ದಿಗಳಿಗೆ ಹಿನ್ನೆಲೆ ಧ್ವನಿ ನೀಡಲು ಸಾಧ್ಯವಾಗಿದ್ದು... ಇವೆಲ್ಲ ಸಂಸ್ಥೆ ನೀಡಿದ ಅವಕಾಶಗಳು.

ಮಂಗಳೂರಿನಿಂಥ ಪ್ರಾದೇಶಿಕ ಆವೃತ್ತಿ ಕಚೇರಿಯಲ್ಲಿರುವ ಸೀಮಿತ ವ್ಯವಸ್ಥೆಯಲ್ಲೂ ಗರಿಷ್ಠ ಮಟ್ಟದ ಅವಕಾಶಗಳನ್ನು ನನ್ನ ಸಂಸ್ಥೆ, ಆಡಳಿತ ಮಂಡಳಿ, ಸಂಪಾದಕೀಯ ವರ್ಗ, ಹಿರಿಯ ಸಹೋದ್ಯೋಗಿಗಳು ನನಗೆ ಒದಗಿಸಿದ್ದಾರೆ. ಅಕ್ಷರ ಸಂತ ಹರೇಕಳ ಹಾಜಬ್ಬರಂತಹ ನಿಗರ್ವಿ ಸಾಧಕರ ಜೊತೆ ನಾನಾ ಸಂದರ್ಭಗಳಲ್ಲಿ ಒಡನಾಟ ಕಲ್ಪಿಸಿದ್ದು ನನ್ನ ಪತ್ರಿಕೆ. ಸಾಕಷ್ಟು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದ್ದು, ತಿಳಿವಳಿಕೆ ಪಡೆದಿದ್ದು, ಗುರುತಿಸುವಿಕೆ ಸಿಕ್ಕಿದ್ದು, ನಾನು ಪತ್ರಕರ್ತ ಅನ್ನಿಸಿದ್ದು ಎಲ್ಲವೂ ಕನ್ನಡಪ್ರಭದಿಂದ ನನ್ನ ಪಾಲಿಗೆ ಒದಗಿದ್ದು.

 

ನಾವು ವೃತ್ತಿಯಲ್ಲಿ ತೊಡಗಿಸಿಕೊಂಡಷ್ಟೂ ಅನುಭವ ನಮ್ಮನ್ನು ಬೆಳೆಸುತ್ತದೆ. ಪ್ರತಿದಿನವೂ ನಾವು ಕಲಿಯುತ್ತಲೇ ಹೋಗುತ್ತೇವೆ ನಮಗೇ ಅರಿವಿಲ್ಲದಂತೆ. ವೃತ್ತಿಯಲ್ಲಿ ಸಾಕಷ್ಟು ಬೇಸರಗಳೂ ಆದದ್ದೂ ಇದೆ, ಅಚ್ಚರಿ, ಸಂತೋಷಗಳು ದೊರಕಿದ್ದು ಇದೆ. ಮನುಷ್ಯಾವಸ್ಥೆಯಲ್ಲಿ ಕಷ್ಟ ಸುಖ ಇಲ್ಲದ ವೃತ್ತಿಯೇ ಇರಲಿಕ್ಕಿಲ್ಲ. ತೀವ್ರತೆಗಳಲ್ಲಿ ವ್ಯತ್ಯಾಸ ಇದ್ದೀತು ಅಷ್ಟೆ.

ವೆಂಕಟನಾರಾಯಣ ಸರ್, ಎಚ್.ಆರ್.ರಂಗನಾಥ್ ಸರ್, ಶಿವಸುಬ್ರಹ್ಮಣ್ಯ ಸರ್, ವಿಶ್ವೇಶ್ವರ ಭಟ್ ಸರ್, ಸುಗತ ಶ್ರೀನಿವಾಸ ರಾಜು ಸರ್ ಹಾಗೂ ರವಿ ಹೆಗಡೆ ಸರ್ ಪ್ರಧಾನ ಸಂಪಾದಕರಾಗಿರುವ ತಂಡಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಏಷಿಯಾನೆಟ್ ಸುವರ್ಣ ನ್ಯೂಸ್ ಆಡಳಿತ ಬಂದ ಬಳಿಕ ವೆಬ್ ವಿಭಾಗದಲ್ಲೂ ಸಣ್ಣ ಪುಟ್ಟ ಕೆಲಸಕ್ಕೆ ಸಾಂದರ್ಭಿಕ ಅವಕಾಶ ದೊರಕಿದೆ... ಇವೆಲ್ಲ ವೃತ್ತಿಯ ಏಕತಾನತೆಯನ್ನು ಕಳೆದು ಹೊಸ ಉತ್ಸಾಹವನ್ನು ತುಂಬುತ್ತವೆ...

.....

 

ಬದುಕೇ ಹಾಗೆ, ಸಿನಿಮಾ ಸ್ಕ್ರಿಪ್ಟ್ ಥರ, ಟೈಂಟೇಬಲ್ ಥರ “ನಾನು ಹೀಗೆಯೇ ಇರುತ್ತೇನೆ. ಹೀಗಿದ್ದರೆ ಮಾತ್ರ ಬದುಕುತ್ತೇನೆ…” ಎಂದೆಲ್ಲ ನಿರ್ಬಂಧಗಳನ್ನು ವಿಧಿಸುತ್ತಾ ಕುಳಿತರೆ ಹಾಗೆಯೇ ಅವಕಾಶಗಳು ಹುಟ್ಟಿ ಬರಲು ಬದುಕು ಸಿನಿಮಾ ಅಲ್ಲ. ಅದು ಸಿನಿಮೀಯ ಅನ್ನಿಸುತ್ತದೆ ಅಷ್ಟೆ. ಬಹಳಷ್ಟು ಸಲ ಬಂದದ್ದನ್ನು ಬಂದ ಹಾಗೆ ಸ್ವೀಕರಿಸಬೇಕು ಹಾಗೂ ತಪ್ಪುಗಳಾದಾಗ ತಿದ್ದಿಕೊಳ್ಳಬೇಕು ಮತ್ತು ಬದಲಾವಣೆಗಳಿಗೆ ಹೊಂದಿಕೊಂಡು ಮುಂದೆ ಹೋಗಲು ಕಲಿಯಬೇಕು... ಎಲ್ಲವನ್ನೂ ಬರೆದಿಟ್ಟಂತೆ ಬದುಕಲು ಸಾಧ್ಯವಿಲ್ಲ ಅನ್ನುವುದು ನನ್ನ ನಿಲುವು.

ಆಗಲೇ ಹೇಳಿದ ಹಾಗೆ 20 ವರ್ಷ ಈ ಕ್ಷೇತ್ರದಲ್ಲಿ ದುಡಿದಿರುವುದು (ಸೇವೆ ಅಲ್ಲ) ಮಹತ್ಸಾಧನೆ ಖಂಡಿತಾ ಅಲ್ಲ. ತುಂಬ ಮಂದಿ ಹಿರಿಯರು ದಶಕಗಳ ಕಾಲ ಪತ್ರಿಕೋದ್ಯಮವನ್ನು ಕಟ್ಟಿ ಬೆಳೆಸಿದ್ದಾರೆದುಡಿದಿದ್ದಾರೆ, ಬಹಳಷ್ಟು ಹೆಸರು ಮಾಡಿದ್ದಾರೆ. ನಮಗಿಂತ ಕಷ್ಟದ ದಿನಗಳಲ್ಲೂ ಹೋರಾಡಿ ಪತ್ರಿಕೋದ್ಯಮವನ್ನು ದೊಡ್ಡ ಎತ್ತರಕ್ಕೆ ಏರಿಸಿದ್ದಾರೆ. ತಂತ್ರಜ್ಞಾನ ಅತ್ಯಂತ ಕಡಿಮೆ ಮಟ್ಟದಲ್ಲಿ ಬೆಳೆದ ಯುಗದಲ್ಲೂ ಅವರು ಅತ್ಯಂತ ಕಡಿಮೆ ಸಂಬಳದಲ್ಲಿ ದುಡಿದೂ ವೃತ್ತಿ ಗೌರವವನ್ನು ಹೆಚ್ಚಿಸಿದ್ದಾರೆ. ಅವರೆದುರು ನಾನೊಬ್ಬ ಕಿರಿಯ ಅಷ್ಟೇ. ವೈಯಕ್ತಿಕವಾಗಿ ನನ್ನ ವೃತ್ತಿ ಬದುಕು ಇದೇ ಸಂಸ್ಥೆಯಲ್ಲಿ ಮುಂದುವರಿಯಲು ನಮ್ಮ ಮಂಗಳೂರು ಪ್ರಾದೇಶಿಕ ಕಚೇರಿ ಹಾಗೂ ಬೆಂಗಳೂರು ಪ್ರಧಾನ ಕಚೇರಿಗಳಲ್ಲಿ ತುಂಬ ಮಂದಿ ಪ್ರೋತ್ಸಾಹ ನೀಡಿದ್ದಾರೆ, ಉಪಸಂಪಾದಕನಾಗಿ ಕೆಲಸಕ್ಕೆ ಸೇರಿದ ನನಗೆ ಉಪ ಸುದ್ದಿ ಸಂಪಾದಕನ ಜವಾಬ್ದಾರಿ ನೀಡಿದ್ದಾರೆ. ಗುರುತಿಸಿದ್ದಾರೆ, ಬೆಳೆಸಿದ್ದಾರೆ. ವೈಯಕ್ತಿಕವಾಗಿ ಒಬ್ಬೊಬ್ಬರದ್ದೇ ಹೆಸರು ಹೇಳುತ್ತಾ ಹೋದರೆ ಪಟ್ಟಿ ಉದ್ದವಾಗುತ್ತದೆ...

ಒಟ್ಟಿನಲ್ಲಿ ಇಷ್ಟೆಲ್ಲ ಬರೆದದ್ದರ ವನ್ ಲೈನ್ ಸಾರಾಂಶ ಇಷ್ಟೆ..... ಇತಿ, ಮಿತಿ, ಖುಷಿಗಳು, ಅಚ್ಚರಿಗಳು, ಸವಾಲುಗಳ ನಡುವೆಯೂ ಇಷ್ಟು ವರ್ಷದ ಸಾಂಗತ್ಯದ ಬಳಿಕ ನನಗೆ ಹೇಳಲಿಕ್ಕಿರುವುದು ಇಷ್ಟೇ... “ನನ್ನ ಕನ್ನಡಪ್ರಭ ನನ್ನ ಹೆಮ್ಮೆ


-ಕೃಷ್ಣಮೋಹನ ತಲೆಂಗಳ (06.10.2022) 








 

























 

No comments: