ಕಷ್ಟಕಾಲದಲ್ಲಿ ದೇವರು ಪ್ರತ್ಯಕ್ಷ ಬಂದು ಕಾಯುವುದಲ್ಲ.... ! ಕಾಡುವ ಕಾಡಿನ ಕಾಂತಾರದ ಬಗ್ಗೆ ಯಾಕಿಷ್ಟು ಮಂದಿ ವಿಮರ್ಶೆ ಮಾಡ್ತಿದ್ದಾರೆ?!

ಒಬ್ಬ ಬರಹಗಾರನಿಗೆ, ಛಾಯಾಗ್ರಾಹಕನಿಗೆ, ನಿರ್ದೇಶಕನಿಗೆ, ನಟನಿಗೆ ಒಂದು ಪ್ರಸ್ತುತಿ ಅಥವಾ ಗುರಿ ಕುರಿತು ಸಹಿಸಲಸಾಧ್ಯವಾದ ಒತ್ತಡ ಇರುತ್ತದೆ. ಆ ಗುರಿ ತಲಪುವ ವರೆಗೆ ಅಥವಾ ಮನದೊಳಗೆ ಅವಿತಿರುವ ವಿಚಾರ ಆತನ ಸೃಜನಶೀಲತೆಯ ಮೂಸೆಯಿಂದ ಆಚೆ ಬರುವ ವರೆಗೆ ಅದು ಕಾಡುತ್ತಾ... ಕಾಣದಂತೆ ಚಡಪಡಿಸುತ್ತಿರುತ್ತಾನೆ. ನಿಂತಲ್ಲಿ, ಕೂತಲ್ಲಿ ಅದು ಕಾಡುತ್ತಲೇ ಇರುತ್ತದೆ...




ಇನ್ನೂ ಒಂದು ವಿಚಾರ ಹೇಳುತ್ತೇನೆ ಕೇಳಿ....

ನೀವೊಂದು ಬೈಕಿನಲ್ಲಿ ಹೋಗುತ್ತಿದ್ದೀರಿ. ಭಾನುವಾರ ಬೇರೆ. ಅರ್ಧ ದಾರಿ ಕ್ರಮಿಸಿದಾಗ ನಿಮ್ಮ ಬೈಕ್ ಟಯರ್ ಪಂಕ್ಚರ್ ಆಗುತ್ತದೆ.... ಅಂದು ಭಾನುವಾರ, ಯಾವುದೇ ಅಂಗಡಿ ತೆರೆದಿರುವುದಿಲ್ಲ. ನಿಮಗೆ ಮುಕ್ಕಾಲು ಗಂಟೆಯಲ್ಲಿ ನಿಮ್ಮ ಗಮ್ಯ ತಲುಪಲೇಬೇಕು. ಮತ್ತೇನು ಮಾಡುವುದು? ಕಂಗಾಲಾಗುತ್ತೀರಿ. ಅರ್ಜೆಂಟ್ ಕಾರ್ಯಕ್ರಮ, ನಿಗದಿತ ಹೊತ್ತಿನಲ್ಲಿ ಹೋಗಲೇಬೇಕು. ಎಂತ ಮಾಡುವುದು? ಬೈಕನ್ನು ರಸ್ತೆ ಬದಿ ಕಂಡು ಕೇಳರಿಯದ ಜಾಗದಲ್ಲಿ ನಿಲ್ಲಿಸಿ ಹೋಗಲು ಗೊತ್ತಿಲ್ಲ. ಮನಸ್ಸು ಮುದುಡುತ್ತದೆ. ನಂಬಿದ ದೇವರೆಲ್ಲ ನೆನಪಾಗುತ್ತಾರೆ. ಸಡನ್ ಹೀಗಾದರೆ ಹೇಗೆ ಅಂತ. ಇಷ್ಟ ದೇವರನ್ನು ಪ್ರಾರ್ಥಿಸುತ್ತೀರಿ.

 ಅಲ್ಲೇ ಪಾದಚಾರಿಯೊಬ್ಬರಲ್ಲಿ ಕೇಳಿದಾಗ, 100 ಮೀಟರ್ ಮುಂದೆ ಒಂದು ಪಂಕ್ಚರ್ ಶಾಪ್ ಇದೆ. ಹೋಗಿ ನೋಡಿ ಅಂತ ಹೇಳ್ತಾನೆ. ನೀವು ಬೈಕ್ ದೂಡಿಕೊಂಡು ಹೋದಾಗ ಅಚ್ಚರಿ ಎಂಬಂತೆ ಪಂಕ್ಚರ್ ಶಾಪ್ ತೆರೆದಿರುತ್ತದೆ. ಅಲ್ಲೊಬ್ಬರು ಕೂತಿರುತ್ತಾರೆ. ನಿಮ್ಮನ್ನು ಕಂಡಾಗ ಹೇಳುತ್ತಾರೆ. ಯಾರೋ ಒಬ್ರು ಅರ್ಜೆಂಟ್ ಕಾಲ್ ಮಾಡಿದ ಕಾರಣ ಬಂದಿದ್ದೆ, ಇಲ್ಲದಿದ್ರೆ ಸಂಡೇ ಬರುವುದಿಲ್ಲ, ಇನ್ನು ಐದು ನಿಮಿಷ ಕಳದರೆ ಮನೆಗೆ ಹೋಗ್ತಾ ಇದ್ದೆ, ನನಗಿವತ್ತು ರಜೆ ಅಂತ. ಅಂತೂ 10 ನಿಮಿಷದಲ್ಲಿ ತೂತಾದ ಟ್ಯೂಪ್ ಪ್ಯಾಚಾಗಿ ಬೈಕು ಸರಿ ಆಗುತ್ತದೆ. ನಿಮ್ಮ ಟೆನ್ಶನೆಲ್ಲ ನೀರಾಗುತ್ತದೆ....

ನೀವು ನಂಬಿದ ದೇವರು, ಹರಿಕೆ ಹೊತ್ತ ದೈವವೇ ಕಾದದ್ದು ಅಂತ ನಿಮಗೆ ಸಮಾಧಾನವಾಗುತ್ತದೆ. ಇಲ್ಲವಾದರೆ ಈ ಪೇಟೆಯಿಂದ ಐದಾರು ಕಿ.ಮೀ. ದೂರ ಬೈಕು ಹಾಳಾಗಿದ್ದರೆ ಏನು ಮಾಡಬೇಕಿದ್ದು? ರಾತ್ರಿ ಹಾಳಾದರೆ ಏನು ಮಾಡಬೇಕಿತ್ತು? ಇವತ್ತು ಸಡನ್ ಪಂಕ್ಚರ್ ಶಾಪಿನವ ಬಾರದಿದ್ದರೆ ಏನು ಮಾಡಬೇಕಿತ್ತು...? ಎಂದೆಲ್ಲ ನಿಮ್ಮ ಮನಸ್ಸು ನಂತರ ಯೋಚಿಸುತ್ತದೆ... ಕೇವಲ 15 ನಿಮಿಷಗಳ ವ್ಯತ್ಯಯವಾದರೂ ನೀವು ನಿಮ್ಮ ಗಮ್ಯವನ್ನು ಯಶಸ್ವಿಯಾಗಿ ಸೇರಿರುತ್ತೀರಿ... ಅವಗುಣದಲ್ಲೂ ಗುಣ ಅಂದರೆ ಹೀಗೆಯೆ... ನಂಬಿದ ದೇವರು ಕೈ ಬಿಡುವುದಿಲ್ಲ ಎಂದರೆ ನನ್ನ ಪ್ರಕಾರ ಹೀಗೆಯೇ... ದೇವರೇ ಬಂದು ನಿಮ್ಮ ಹಾಳಾದ ವಾಹನವನ್ನು ಸರಿ ಮಾಡಿಕೊಡುವುದಿಲ್ಲ! ಅಂತಹ ನಿರೀಕ್ಷೆಯೂ ಬೇಡ. ದೇವರು ದಾರಿ ತೋರಿಸುತ್ತಾನೆ, ಇರಿಸಿದ ನಂಬಿಕೆಗೆ ಇಂಬು ಕೊಡುತ್ತಾನೆ.

 

ಇದನ್ನೇ ಹೇಳುವುದಕ್ಕೆ ಹೊರಟದ್ದು ಕಾಂತಾರ!

ಕಾಂತಾರದ ನಾಯಕ ಶಿವನಿಗೂ ಆದದ್ದು, ಕೊನೆ ತನಕ ಆಗುವುದೂ ಅದೇ. ಅದೇ ಕಾರಣಕ್ಕೆ ಆ ಒತ್ತಡ ಸಿನಿಮಾ ನೋಡಿದವರನ್ನು ಕಾಡಿ ಈ ತನಕ ಬರೆಯದವರೂ ಸಿನಿಮಾದ ಬಗ್ಗೆ ಬರೆದದ್ದೇ ಬರೆದದ್ದು, ಚಿತ್ರ ವಿಮರ್ಶಕರಾಗಿದ್ದು ಅಂತ ನಾನು ಅಂದುಕೊಳ್ಳುವೆ. ಕಾಂತಾರದಲ್ಲಿ ನಾನೇನು ಕಂಡೆ ಅನ್ನುವುದನ್ನು ಹೇಳಲೇಬೇಕೆನ್ನಿಸುವಂಥಹ ಫೀಲ್ ಸಿನಿಮಾದಲ್ಲಿ ಆಯಾ ಪ್ರೇಕ್ಷಕರ ಮನೋಭಾವಕ್ಕೆ ಅನುಸಾರವಾಗಿ ಸಿಗುತ್ತದೆ. ಹೊಗಳಿದವರು, ತೆಗಳಿದವರಿಗೂ ಅಂಥದ್ದೊಂದು ಒತ್ತಡ ನಾಯಕನಿಗಿದ್ದಷ್ಟೇ ಪ್ರಬಲವಾಗಿ ಕಾಡಿತ್ತು ಅನ್ನುವುದು ನನ್ನ ಭಾವನೆ. ಅದೇ ಕಾರಣಕ್ಕೆ ಫೇಸ್ಬುಕ್ಕಿನಲ್ಲಿ ಕಾಂತಾರದ ಬಗ್ಗೆ ಬರೆದು ನಿರಾಳವಾಗುತ್ತಿದ್ದಾರೆ.

 

ಹಾರರ್ ಸಿನಿಮಾಗಳು ಸಾಕಷ್ಟು ಬಂದಿವೆ, ಗ್ರಾಫಿಕ್ಸ್ ಸಪೋರ್ಟಿನಲ್ಲಿ ಮಾಡಿದ ಸಿನಿಮಾಗಳು ಸಾವಿರಾರು ಬಂದಿವೆ, ಕರಾವಳಿಯ ಸಂಸ್ಕೃತಿ ಕುರಿತೂ ತುಂಬ ಸಿನಿಮಾಗಳು ಬಂದಿವೆ, ತುಳುವಿನಲ್ಲೂ ಹತ್ತಾರು ನೆಲದ ಬಣ್ಣ ವಿವರಿಸುವ ಸಿನಿಮಾಗಳು ಬಂದು ಹೋಗಿವೆ. ನಂಬಿಕೆಗಳ ಬಗ್ಗೆ, ದೈವ, ದೇವರ ಬಗ್ಗೆಯೂ ಸಿನಿಮಾ ಬಂದಿವೆ, ಹೋಗಿವೆ. ಆದರೂ ಕಾಂತಾರ ಕಾಡುವುದಕ್ಕೆ ಕಾರಣ ನೆಲ ಉಳಿವಿಗೆ ಹೋರಾಡುವ ಅರಣ್ಯ ಇಲಾಖೆ ಮತ್ತು ಸ್ಥಳದ ನಿವಾಸಿಗಳ ಕೆಚ್ಚು, ಇದರ ನಡುವಿನ ಕೆಮಿಸ್ಟ್ರಿ ಹಾಗೂ ದೈವದ ಬಲ ಕೈಜೋಡಿಸುವ ಎರಕ ಹೊಯ್ದಂಥಹ ಕಥೆ ಮತ್ತು ಕಲ್ಪನೆ.

 

ಇದು ದಂತ ಕಥೆಯೆಂದು ನಿರ್ದೇಶಕರು ಸಿನಿಮಾ ಟೈಟಲ್ಲಿನಲ್ಲೇ ಘೋಷಿಸಿದ್ದಾರೆ. ಆದರೆ ಸಿನಿಮಾದಲ್ಲಿ ಕಟ್ಟಿಕೊಟ್ಟ ಕಥೆ ಏನೆಂದರೆ... ನಾವು ಹಿಂದಿನಿಂದ ಓದಿಕೊಂಡು, ತಿಳಿದುಕೊಂಡು ಬಂದಂಥಹ ವಿಚಾರ. ಮನುಷ್ಯನಿಗೆ ದೈವಭಯ, ದೇವರ ಕುರಿತು ಭಯ ಭಕ್ತಿ ಬೇಕು. ತನಗಿಂದ ಮೇಲಿನ ಸರ್ವಶಕ್ತನಿದ್ದಾನೆ ಎಂಬ ವಿಧೇಯತೆ ಇಲ್ಲದ ಹೊರತು ಮನುಷ್ಯನ ಅಹಂಗಳನ್ನು, ಅಹಂಕಾರದ ಮಿತಿಯನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ಆಸ್ತಿಕನಾದ ವ್ಯಕ್ತಿ ಯಾರಿಗೆ ಹೆದರದಿದ್ದರೂ ದೈವ ದೇವರಿಗೆ ಹೆದರಿಯೇ ಹೆದರುತ್ತಾನೆ. ಹಾಗಂತ, ನಮ್ಮ ಪ್ರತಿ ಕಷ್ಟದಲ್ಲೂ, ಸಂಧಿಗ್ಧತೆಯಲ್ಲೂ, ಸವಾಲಿನಲ್ಲೂ ಬೆನ್ನ ಹಿಂದೆ ದೇವರು ಪ್ರತ್ಯಕ್ಷವಾಗಿ ತಲೆ ಮೇಲೆ ಕೈಇರಿಸುವುದಿಲ್ಲ. ದೇವರು ನಮಗೆ ದಾರಿ ತೋರಿಸುತ್ತಾನೆ, ನಮ್ಮ ಟೆನ್ಶನ್ ಕಡಿಮೆ ಮಾಡುತ್ತಾನೆ, ನನ್ನ ಸವಾಲುಗಳನ್ನು ದಾಟಿ ಹೋಗಲು ನಮ್ಮ ಮೇಲೊಂದು ಅಗೋಚರ ಅಭಯ ಹಸ್ತ ಇದೆ ಎಂಬ ಒಂದು ರಕ್ಷಣಾ ಭಾವವನ್ನು ಮನಸ್ಸಿನಲ್ಲಿ ಹುಟ್ಟಿಸುತ್ತದೆ, ಆ ಮೂಲಕ ಬಂದ ಕಷ್ಟಗಳನ್ನು ದಾಟಿ ಹೋಗಲು ಒಂದು ವಿಶೇಷವಾದ ಆತ್ಮಸ್ಥೈರ್ಯವನ್ನು, ಪರಿಹಾರದ ಮಾರ್ಗಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ನಮ್ಮೂರಿನ ಜನ ಕಷ್ಟ ಬಂದಾಗ ಕೊರಗಜ್ಜನಿಗೆ, ಮಹಾಗಣಪತಿಗೆ, ಗುಳಿಗ, ಪಂಜುರ್ಲಿ ಮತ್ತಿತರ ದೈವಗಳಿಗೆ ಹರಿಕೆ ಹೇಳುವುದು, ಪರಿಹಾರ ಕಾಣುವುದು ಹೀಗೆಯೇ ಅಲ್ಲವೇ... ಕಲಿಯುಗದಲ್ಲಿ ದೇವರೇ ಬಂದು ಏನು ವರ ಬೇಕು ಅಂತ ಕೇಳುವುದಿಲ್ಲ. ಹಾಗಂತ ಮಾನವಾತೀತ ಶಕ್ತಿಗಳ ಅಥವಾ ಮನುಷ್ಯನ ಊಹೆಗೆ ಮೀರಿದ ಸಂಭವಗಳಿಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಸಾಕ್ಷಿಗಳಾಗಿಯೇ ಇರುತ್ತಾರೆ. ಆದರೆ ತಾರ್ಕಿಕವಾಗಿ ಅವುಗಳಿಗೆ ಉತ್ತರ ಕಂಡುಕೊಳ್ಳಲು ಬಹುತೇಕ ಸಂದರ್ಭಗಳಲ್ಲಿ ಸಾಧ್ಯವಾಗುವುದಿಲ್ಲ. ವೈಜ್ಞಾನಿಕವೋ, ಮನೋವೈಜ್ಞಾನಿಕವೋ, ಆಧ್ಯಾತ್ಮವೋ, ವೈಚಾರಿಕತೆಯೋ ಎಲ್ಲದರಾಚೆಗಿನ ಮಾನವಾತೀತ ಸಂಭವಗಳು ಕೆಲವೊಮ್ಮೆ ಅಸಾಧ್ಯವಾದುದನ್ನು ಸಾಧ್ಯವಾಗಿಸುತ್ತದೆ. ಅದೇ ನಂಬಿಕೆ!

ಮಂಗಳೂರಿಗರಾದ ನಮಗೆ ಕಾಂತಾರ ಯಾಕೆ ಇಷ್ಟವಾಗುತ್ತದೆ ಎಂದರೆ

1)      ಪಿಕ್ಚರೈಸೇಶನ್. ಅದ್ಭುತವಾದ ದೃಶ್ಯಕಾವ್ಯ. ದಶಕಗಳ ವ್ಯತ್ಯಾಸವನ್ನು ಪರದೆ ಮೇಲೆ ಚಂದಕೆ ಕಟ್ಟಿಕೊಡುವುದರಲ್ಲಿ ಶೆಟ್ರು ಯಶಸ್ವಿಯಾಗಿದ್ದಾರೆ.

2)      ನಮ್ಮೂರ ಭಾಷೆ. ದಶಕಗಳಿಂದ ಎಂತ ಭಯಂಕರ ಮಾರಾಯ್ರೇ ಗೊತ್ತುಂಟೋ ಅಂತ ಮಂಗಳೂರು ಕನ್ನಡವನ್ನು ವ್ಯಂಗ್ಯವಾಗಿ ಲೇವಡಿ ಮಾಡುವ ಹಳಸಲು ಹಾಸ್ಯವನ್ನೇ ನಗಿಸುವುದ ಅಂತ ನಂಬಿಕೊಂಡು ಬಂದ ನಮಗೆ ನಮ್ಮೂರಿನ ಎಂತ ಸಾವಾ... .... ರ್ಸಿ ಇತ್ಯಾದಿ ದಿನಾ ಕೇಳುವ ಪದಗಳು, ನಮ್ಮೂರಿನ ನಿಜ ಕನ್ನಡವನ್ನು ಕೇಳುವುದು ಅಪ್ಯಾಯಮಾನ ಅನ್ನಿಸುತ್ತದೆ.

3)      ದೇವರು, ದೈವದ ಕುರಿತ ನಂಬಿಕೆ, ಅದರ ಹಿಂದಿನ ಸೂಕ್ಷ್ಮತೆ, ತೊಡಗಿಸಿಕೊಂಡವರ ಬದುಕು ಹಾಗೂ ಮನಃಸ್ಥಿತಿ, ದೈವದ ಕುರಿತು ನಮಗಿರುವ ಭಯ ಮತ್ತು ಭಕ್ತಿ ಇವಿಷ್ಟನ್ನೂ ಸಿನಿಮಾದಲ್ಲಿ ತುಂಬ ಅಧ್ಯಯನಪೂರ್ವಕ ತೋರಿಸಲಾಗಿದೆ. ಇದು ದಂತೆ ಕತೆಯೇ ಆಗಿದ್ದರೂ, ಕಾಲ್ಪನಿಕವೇ ಆಗಿದ್ದರೂ, ಒಂದು ಜನಪರ ಉದ್ದೇಶದ ಸಾಧನೆಯಲ್ಲಿ ದೈವದ ನಂಬಿಕೆಯ ಬಳಕೆ ಪ್ರೇಕ್ಷಕರನ್ನು ಗಾಢವಾಗಿ ತಟ್ಟಿದೆ. ಅದೇ ಕಾರಣಕ್ಕೆ ಮಂಗಳೂರು ಮಾತ್ರವಲ್ಲದೆ ಪರ ಜಿಲ್ಲೆಗಳಲ್ಲೂ ಜನ ಶ್ಲಾಘಿಸುತ್ತಿದ್ದಾರೆ.

4)      ಸಿನಿಮಾದ ಬಹುತೇಕ ಶೇ.90ರಷ್ಟೂ ಕಲಾವಿದರ ಆಯ್ಕೆ ಅತ್ಯಂತ ಪರ್ಫೆಕ್ಟ್. ಅವರವರ ಪಾತ್ರಕ್ಕೆ ನ್ಯಾಯ ಸಲ್ಲಿಸುವಂಥಹ ಕಲಾವಿದರ ಆಯ್ಕೆಯೂ ಸಿನಿಮಾ ಗೆಲ್ಲಲು ಕಾರಣ.

5)      ಕಾಂತಾರ ಮಲಯಾಳಂ ಸಿನಿಮಾವನ್ನು ನೆನಪಿಸುತ್ತದೆ. ಚಂದದ ದೃಶ್ಯಕಾವ್ಯ. ಯಾವುದೇ ಫಾರೀನ್ ಲೋಕೇಶನ್ ಗಳು ಇಲ್ಲ, ನಮ್ಮೂರಿನದ್ದೇ ಕಾಸ್ಟ್ಯೂಂಗಳು, ಅತ್ಯಂತ ಮಧುರವಾದ ಹಾಡುಗಳು, ಕಣ್ಣಿಗೆ ಕಟ್ಟುವಂಥಹ ಮಳೆ, ಮನೆ, ಕಾಡು, ಗದ್ದೆ, ಕೆಸರು, ಗೂಡಂಗಡಿ, ಲಾಕಪ್ಪು... ಎಲ್ಲವೂ ಇಲ್ಲಿಯೇ ಎಲ್ಲೋ ಇದ್ದ ಹಾಗೆ ಭಾಸವಾಗಿಸುತ್ತದೆ. ಹಾಗಾಗಿ ಯಾವುದೇ ಅತಿರೇಕದ ಬಿಲ್ಡಪ್ಪು ಇಲ್ಲದ ನಮ್ಮೂರಿನ ಸಿನಿಮಾ ಅಂತ ಇಷ್ಟವಾಗುತ್ತದೆ. ವಿಲನ್ ಅಚ್ಯುತರಾವ್, ಅಧಿಕಾರಿ ಕಿಶೋರ್, ಪ್ರಕಾಶ್ ತೂಮಿನಾಡು,  ದೀಪಕ್ ರೈ ಸಹಿತ... ಸಾಲು ಸಾಲು ಕಲಾವಿದರ ತನ್ಮಯತೆ ಇಷ್ಟವಾಗುತ್ತದೆ.

6)      ಈ ಸಿನಿಮಾದಲ್ಲೂ ನನಗಿಷ್ಟವಾಗದ್ದು ಇದು ಅಂತ ಪಟ್ಟಿ ಮಾಡಬಹುದು. ಆದರೆ, ಅದು ನಿರ್ದೇಶಕ, ನಿರ್ಮಾಪಕರ ಸೃಜನಶೀಲತೆಯ ಕೂಸು. ತಪ್ಪುಗಳನ್ನು ಮನೆಯಲ್ಲು ಕುಳಿತು ಪಟ್ಟಿ ಮಾಡಲು ಸುಲಭ. ಆದರೆ ಅವರ ಕಲ್ಪನೆ, ಯೋಚನೆ, ಯೋಜನೆಗಳಿಗನುಗುಣವಾಗಿ ಅವರು ಕಾರಣ ಇದ್ದೇ ಅಂತಹ ನಿರ್ಧಾರಗಳನ್ನು ಮಾಡಿರುತ್ತಾರೆ. ಹಾಗಾಗಿ ಸಿನಿಮಾದಲ್ಲಿ ಇಷ್ಟವಾಗಿದ್ದು ಮಾತ್ರ ಹೇಳುತ್ತಿದ್ದೇನಷ್ಟೇ... ಇಷ್ಟವಾಗದ್ದನ್ನು ಪಟ್ಟಿ ಮಾಡಬಹುದು, ಹಾಗಂತ ಶೆಟ್ರ ಹಾಗೆ ಇಷ್ಟು ಚಂದದ ಸಿನಿಮಾ ಮಾಡಿ ತೋರಿಸಲು ಸುಲಭ ಇಲ್ಲ!

7)      ಕಾಂತಾರ ಸಿನಿಮಾ ಪೈರೇಟೆಡ್ ಕಾಪಿ ಓಡಾಡುತ್ತಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಆದರೆ, ದಯವಿಟ್ಟು ಸಿನಿಮಾದ ನಿಜ ಅನುಭೂತಿ ಪಡೆಯಲು ಅತ್ಯಂತ ಉತ್ತಮ ಸೌಂಡ್ ಸಿಸ್ಟಂ ವ್ಯವಸ್ಥೆ ಇರುವ ಥಿಯೇಟರಿಗೇ ಹೋಗಿ ದಯವಿಟ್ಟು ವೀಕ್ಷಿಸಿ... ಒಂದು ನಿಶ್ಯಬ್ಧದ ವಾತಾವರಣದಲ್ಲಿ ಈ ಸಿನಿಮಾವನ್ನು ಆಸ್ವಾದಿಸುವುದೇ ಚಂದ.

 

ಸಿನಿಮಾ ಮುಗಿಸಿ ಆಚೆ ಬಂದ ಮೇಲೂ ಕಾಡುವ ಓ................................. ಎಂಬ ಆರ್ಭಟದ ಗುಂಗು ಇದೆಯಲ್ವ... ಅದು ಮತ್ತೊಮ್ಮೆ ಕಾಂತಾರದತ್ತ ಪ್ರೇಕ್ಷಕರನ್ನು ಕೈಬೀಸಿ ಕರೆಯುತ್ತಿರುವುದು. ಸಿನಿಮಾದ ತುಂಬ ಓ..... ಎಂಬುದು ಕೆಲವೊಮ್ಮೆ ಆರ್ತನಾದದ ಹಾಗೆ, ಕೆಲವೊಮ್ಮೆ ಘರ್ಜನೆಯ ಹಾಗೆ. ಕೆಲವೊಮ್ಮೆ ಗೆಲವಿನ ಕೂಗಿನ ಹಾಗೆ ಆವರಿಸುತ್ತದೆ. ಓ.... ಎಂಬ ಪಂಜುರ್ಲಿಯ ಕೂಗು ಪ್ರೇಕ್ಷಕನ ಚಿಂತನೆಯ ಆಳಕ್ಕೆ ಪರಿಣಾಮಕಾರಿಯಾಗಿ ಹೊಕ್ಕು ಪ್ರತಿಧ್ವನಿಸಿದ್ದಕ್ಕೇ ಸಿನಿಮಾ ಗೆದ್ದಿದೆ. ಈ ನಮೂನೆ ಭಯಂಕರ ಚರ್ಚೆ, ವಿಮರ್ಶೆಗೆ ಕಾರಣವಾಗಿದೆ...

ಶೆಟ್ರಿಗೆ ಜಯವಾಗಲಿ

-ಕೃಷ್ಣಮೋಹನ ತಲೆಂಗಳ (09.10.2022)


No comments: