ಚೆಂಡೆ ಪೆಟ್ಟು ಕೇಳಿ ಆಟಕ್ಕೆ ಹೋಗುತ್ತಿದ್ದ ದಿನವಿತ್ತು...!

ಒಂದು ಕಾಲವಿತ್ತು, ಯಕ್ಷಗಾನಕ್ಕೆ ಹೋಗುವಾಗ ಚೆಂಡೆಯ ಪೆಟ್ಟಿನ ಸದ್ದು ಕೇಳಿದ ದಿಕ್ಕಿನತ್ತ ಸಾಗುವುದು. ಕೈಯಲ್ಲಿ ತೆಂಗಿನ ಸೋಗೆಯ ಸೂಟೆ (ದೊಂದಿ), ಕೂರಲು, ಮಲಗಲು ಓಲೆ ಚಾಪೆ ಜೊತೆಗೆ ಹೋದರೆ ಮತ್ತೆ ಮನೆಗೆ ಮರಳುವುದು ಇಡೀ ರಾತ್ರಿ ಆಟ ನೋಡಿ ಸೂರ್ಯ ಮೂಡಿದ ಮೇಲೆಯೇ. ನಡುವೆ ಮನೆಗೆ ಬರಲು ವಾಹನವಾಗಲೀ, ಬೆಳಕಿನ ವ್ಯವಸ್ಥೆಯಾಗಲೀ ಇರಲಿಲ್ಲ. ಅರ್ಧರ್ಧ ಆಟ ನೋಡುವ ಮನಸ್ಥಿತಿ ಕೂಡಾ ಆಗ ಇರಲಿಲ್ಲವೆನ್ನಿ...

................


ಸುಮಾರು 20 ,30 ವರ್ಷಗಳ ನಂತರ ಈಗ ಪರಿಸ್ಥಿತಿ, ಮನಸ್ಥಿತಿ ಎರಡೂ ಬದಲಾಗಿದೆ. ಇಡೀ ರಾತ್ರಿ ಕುಳಿತು ಆಟ ನೋಡುವ (ಮೇಳದ ಆಟಗಳು) ಮನಸ್ಥಿತಿ ಇಳಿಮುಖವಾಗಿದೆ. ಮೊಬೈಲಿನಲ್ಲಿ, ಕಂಪ್ಯೂಟರಿನಲ್ಲಿ, ಬ್ಯಾನರಿನಲ್ಲಿ, ವಾಟ್ಸಪು, ಫೇಸ್ಬುಕುಗಳಲ್ಲಿ ಆಟದ ಪ್ರಚಾರ ಅದ್ಭುತವಾಗಿ ಸಾಗುತ್ತದೆ. ಒಂದು ಪುಟ್ಟ ಊರಿನಲ್ಲಿ ನಡೆಯುವ ಯಕ್ಷೋತ್ಸವದ ಆಮಂತ್ರಣ ಹತ್ತಾರು ವಾಟ್ಸಪ್ ಗ್ರೂಪುಗಳ ಮೂಲಕ ಸಾವಿರಗಟ್ಟಲೆ ಮಂದಿಯನ್ನು ತಲಪುತ್ತಿದೆ (ಬರುವವರೆಷ್ಟು ಮಂದಿ ಅನ್ನುವುದು ಬೇರೆ ವಿಷಯ). ಹೀಗಾಗಿ ಮಾಹಿತಿ ತಿಳಿಯುವುದೇನೂ ಕಷ್ಟವಲ್ಲ. ಈಗ ಜೀಪಿಗೆ ಮೈಕು ಕಟ್ಟಿ ಒಂದೇ ಒಂದು ಆಟ ಎಂದು ಈಗ ಪ್ರಚಾರ ಮಾಡುವುದು ಅಪರೂಪ... ಹ್ಯಾಂಡ್ ಬಿಲ್ಲನ್ನು ಜೀಪಿನಿಂದ ಎಸೆದರು ಹಿಂದೆಯೇ ಓಡಿ ಹೋಗಿ ಹೆಕ್ಕುವ ಮಕ್ಕಳೂ ಈಗ ಸಿಗಲಿಕ್ಕಿಲ್ಲ. ಅದ್ದೂರಿಯ ಆಮಂತ್ರಣ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಯಕ್ಷಪ್ರಿಯರನ್ನು ತಲಪುತ್ತದೆ. ಚೆಂಡೆ ಸದ್ದು ಕೇಳಿ ದೊಂದಿ ಹಿಡಿದು ಆಟದ ದಿಕ್ಕಿನತ್ತ ನಡೆಯುವವರೂ ಕಮ್ಮಿ. ವಾಹನಗಳಲ್ಲಿ, ಸ್ನೇಹಿತರೊಂದಿಗೆ ಆಟಕ್ಕೆ ಹೋದರೆ ತಮಗೆ ಬೇಕಾದ ಭಾಗ, ಬೇಕಾದ ಭಾಗವತರ ಹಾಡು ಕೇಳಿ ಬಂದರೆ ಮುಗಿಯಿತು. ಆಟ ನೋಡಿದ ಖುಷಿ ದಕ್ಕುತ್ತದೆ.

...................

ಅಂದು ಆಟ ನೋಡಲು ಕುರ್ಚಿಗಳಿರಲಿಲ್ಲ. ಪುಟ್ಟ ಮಕ್ಕಳು ರಂಗಸ್ಥಳ ಎದುರು ಚಾಪೆ ಬಿಡಿಸಿ ಕೂರುತ್ತಿದ್ದರೆ, ದೊಡ್ಡವರಿಗೆ (ಶಾಲೆಯ ಮೈದಾನವಾದರೆ) ಬೆಂಚು, ಅತಿ ಗಣ್ಯರಿಗೆ ಮರದ ಚೇರು ಅಷ್ಟೆ. ಟಿಕೆಟಿನ ಆಟವಾದರೆ ಬೇರೆ ಸಂಗತಿ. ಇಂದು ಹಾಗಲ್ಲ. ನೂರುಗಟ್ಟಲೆ ಚೇರುಗಳು ಸಾಲು ಸಾಲಾಗಿ ಕಾದಿರುತ್ತವೆ. ಪ್ರೇಕ್ಷಕರು ಬರಲು. ಮಳೆ ಬಂದರೆ ಚಪ್ಪರ, ಹಸಿವಾದರೆ ಊಟ, ನಿದ್ರೆ ತೂಗದಂತೆ ಚಹಾ, ಚಟ್ಟಂಬಡೆ ಎಷ್ಟು ವ್ಯವಸ್ಥೆ, ಎಷ್ಟು ಆತಿಥ್ಯ, ಎಷ್ಟು ಸುಲಲಿತ ಆಟ ನೋಡುವುದು. ಏನೂ ಬೇಡ, ಆಟವಾಡುವಲ್ಲಿಗೆ ಹೋಗುವುದೇ ಕಷ್ಟ ಎನಿಸಿದರೆ ಮನೆಯಲ್ಲೇ ಕುಳಿತು ಲೋಕಲ್ ಚಾನೆಲ್ನಲ್ಲಿ ಲೈವ್ ವೀಕ್ಷಿಸಬಹುದು, ನೀವು ಊರಲ್ಲಿ ಇಲ್ಲ ಪರದೇಶಿಗಳಾಗಿದ್ದರೆ ಅಲ್ಲೂ ನೀವು ಇಂಟರ್ನೆಟ್ ಮೂಲಕ ಲೈವ್ ವೀಕ್ಷಿಸಬಹುದು. ಲೈವ್ ನೋಡಲು ಪುರಸೊತ್ತಿಲ್ಲ ಅಂತ ಇಟ್ಟುಕೊಳ್ಳಿ... ಮತ್ತೂ ಒಂದು ಆಯ್ಕೆಯಿದೆ. ಆಗಾಗ ರಿಪೀಟ್ ಟೆಲಿಕಾಸ್ಟ್ ಆಗುತ್ತಿರುತ್ತದೆ, ಆಗಲಾದರೂ ನೋಡಬಹುದು... ಇಷ್ಟೆಲ್ಲಾ ವ್ಯವಸ್ಥೆಯಿದ್ದರೂ ಇಡೀ ರಾತ್ರಿ ತಾಳ್ಮೆಯಿಂದ ಕುಳಿತು ಆಟ ನೋಡುವುದಕ್ಕೆ ಪುರುಸೊತ್ತಾಗುವುದಿಲ್ಲ, ನಿಭಾಯಿಸಲು ಕಷ್ಟವಾಗುತ್ತದೆ.

....................

ಒಂದು ಕಾಲವಿತ್ತು, ರಾಕ್ಷಸನೋ, ದೇವತೆಯೋ ಮಹಿಷಾಸುರನೋ ವೇಷ ಹಾಕಿ ರಂಜಿಸಿದ ಮಾತ್ರಕ್ಕೆ ಕಲಾವಿದರು ಯಾರೆಂದು ಎಳೆಯ ತಲೆಗಳಿಗೆ ಗೊತ್ತಾಗುತ್ತಲೇ ಇರಲಿಲ್ಲ. ಮಾಗಿದ ತಲೆಗಳು ಗುರುತು ಹಿಡಿಯುತ್ತಿದ್ದವು ಇಂತಿಂಥವರ ವೇಷವೆಂದು. ಮಹಿಷಾಸುರ ವೇಷ ಕಳಚಿದ ಮೇಲೆ ಹೇಗಿದ್ದಿರಬಹುದು ಎಂಬ ಕಲ್ಪನೆ ಮಾಡಲು ಕಷ್ಟವಾಗುತ್ತಿತ್ತು. ಇಂದು ಹಾಗಲ್ಲ, ಯಾವ್ಯಾವ ಆಟದಲ್ಲಿ ಯಾರ್ಯಾರಿಗೆ ಏನೇನು ವೇಷ ಎಂಬ ಮಾಹಿತಿ ವಿವರ ವಿವರವಾಗಿ ತಿಳಿಯುತ್ತದೆ. ಮಾತ್ರವಲ್ಲ ಫೇಸ್ಬುಕ್ಕಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವ ಮೂಲಕ ಕಲಾವಿದರ ಫ್ರೆಂಡುಗಳಾಗಿ ಖುಷಿ ಪಡಬಹುದು. ಕಲಾವಿದರ ಅಭಿಮಾನಿ ಬಳಗ ಕಟ್ಟಿಕೊಂಡು ಇನ್ನಷ್ಟು ಪ್ರಚಾರ ಕೊಡಬಹುದು. ಆನ್ ಲೈನ್ ಇದ್ದರೆ ಕಲಾವಿದರಿಗೆ ಅಲ್ಲಿಂದಲೇ ನೇರ ಫೀಡ್ ಬ್ಯಾಕ್ ಕೊಡಬಹುದು. ನಿಮ್ಮ ಆಟ ಹೀಗಾಗಿದೆ ಅಂತ. ಇಂದು ಕಲಾಭಿಮಾನಿಗಳಿಗೆ ಸಾಕಷ್ಟು ಆಯ್ಕೆಗಳಿವೆ. ಈ ಆಟ ಬಿಟ್ಟರೆ ಆ ಆಟ, ಅದು ಬಿಟ್ಟರೆ ಮತ್ತೊಂದು. ಯಾಕೆಂದರೆ ಪ್ರದರ್ಶನಗಳಿಗೆ ಕೊರತೆಯಿಲ್ಲ. ಇಷ್ಟದ ಕಲಾವಿದರ, ಇಷ್ಟದ ಸಮಯ, ಇಷ್ಟದ ಜಾಗದಲ್ಲೇ ಪ್ರದರ್ಶನಗಳನ್ನು ಏರ್ಪಡಿಸುವ ಸಂದರ್ಭಗಳು ಹೆಚ್ಚಿವೆ. ಆದ್ದರಿಂದ ಕಲಾಭಿಮಾನಿ ಚೂಸಿಯಾಗಿರ್ತಾನೆ. ಬೇಕಾದ್ದನ್ನು, ಬೇಕಾದಲ್ಲಿ ಆರಿಸಿ ನೋಡುವ ಸ್ವಾತಂತ್ರ್ಯ ಪಡೆದುಕೊಂಡಿದ್ದಾನೆ.

.........


ಅಂದು ಕಲಾವಿದರಿಗೂ ಓಡಾಟ, ವ್ಯವಸ್ಥೆ ಎಷ್ಟು ಕಷ್ಟವಿತ್ತು. ರಂಗಸ್ಥಳಕ್ಕೆ ಮ್ಯಾಟ್ ಹಾಕುತ್ತಿರಲಿಲ್ಲ. ತೌಡಿನ ಪುಡಿಯಲ್ಲಿ ಅಕ್ಷರಶಹ ಧೂಳೆಬ್ಬಿಸಿ ಕುಣಿಯಬೇಕಿತ್ತು. ಊರಿನಿಂದ ಊರಿಗೆ ಹೋಗಲು ಸಾಮಾನು ಸರಂಜಾಮು ತುಂಬಿದ ಲಾರಿಗಳಲ್ಲೇ ನೇತಾಡಿಕೊಂಡು ನಿದ್ದೆಗೆಟ್ಟು ಹೋಗಬೇಕು. ಸ್ವಂತ ವಾಹನ ಹೊಂದಿದವರು ಬೆರಳೆಣಿಕೆಯ ಮಂದಿ ಇದ್ದಾರು. ಬಹುತೇಕ ಕಲಾವಿದರು ಮನೆಗೆ ಹೋಗುವುದು ಯಾವತ್ತೋ ಒಂದು ದಿನ ಅಷ್ಟೆ. ಮಧ್ಯರಾತ್ರಿ ವಾಹನ ಸ್ಟಾರ್ಟ್ ಮಾಡಿ ಹೋಗುವ ಸಂದರ್ಭಗಳು ಬಲು ಅಪರೂಪ. ಇಂದು ಹಾಗಲ್ಲ, ಕೆಲವು ಕಲಾವಿದರಾದರೂ ಸ್ವಂತ ವಾಹನ ಹೊಂದಿದ್ದಾರೆ. ಜನಪ್ರಿಯರು ಒಂದೇ ರಾತ್ರಿ ಎರಡು ಮೂರು ಪ್ರದರ್ಶನಗಳನ್ನೂ ನಿಭಾಯಿಸಬಲ್ಲವರಾಗಿದ್ದಾರೆ. ಓಡಾಟಕ್ಕೆ ಎಲ್ಲಾ ಮೇಳಗಳಲ್ಲಿ ಸುಸಜ್ಜಿತ ಬಸ್ ವ್ಯವಸ್ಥೆಯಿದೆ. ಸಂಪರ್ಕ ಸಾಧನ ಸುಲಭವಾದ ಕಾರಣ ಹತ್ತಿರ ಆಟವಿದ್ದರೆ ದಿನಾ ಮನೆಗೂ ಹೋಗಬಹುದು. ಮೊಬೈಲ್ ಸಂಪರ್ಕ ಇರುವ ಕಾರಣ ಕಲಾವಿದನ ಮನೆಯವರು ಬೇಕಾದಾಗ ಅವರನ್ನು ಸಂಪರ್ಕಿಸಬಹುದು. ಹಿಂದಿನ ಕಾಲ ಊಹಿಸಿ, ಯಾವುದೋ ಊರಿನಲ್ಲಿರುವ ಕಲಾವಿದನಿಗೆ ತುರ್ತಾಗಿ ಸಂಪರ್ಕಿಸಬೇಕಾದರೆ ಏನೂ ಮಾಡುವ ಹಾಗಿಲ್ಲ. ಮೇಳಕ್ಕೆ ಲ್ಯಾಂಡ್ ಲೈನ್ ಫೋನೂ ಇರುವುದಿಲ್ಲವಲ್ಲ. ಜನಪ್ರಿಯ ಕಲಾವಿದರಿಗೆ ಮಳೆಗಾಲದಲ್ಲೂ ಸಾಕಷ್ಟು ಪ್ರದರ್ಶನ ಬುಕಿಂಗ್ ಇರುವುದರಿಂದ, ಪ್ರವಾಸಿ ಮೇಳಗಳಿರುವುದರಿಂದ ಕೈತುಂಬಾ ಕೆಲಸವೂ ಇರುತ್ತದೆ... ಹಾಗಾಗಿ ಬದುಕು ತುಸು ಹಸನಾಗಿದೆ. ಇದಕ್ಕೆ ಹೊರತಾದ ಕಲಾವಿದರೂ ಇರಬಹುದು...

..............


ಯಕ್ಷಗಾನಕ್ಕೆ ಕಲಾವಿದರು ಕಡಿಮೆಯಾಗಿಲ್ಲ, ಪ್ರೇಕ್ಷಕರೂ ಜಾಸ್ತಿಯಾಗಿದ್ದಾರೆ ಹೊರತು ಕಡಿಮೆಯಾಗಿಲ್ಲ. ಪ್ರೇಕ್ಷಕರ ಮನೋಭಾವ ಬದಲಾಗಿದೆ. ಜನರಿಗೆ ಪುರುಸೊತ್ತು ಕಡಿಮೆಯಾಗಿದೆ. ಕಲಾವಿದರಿಗೆ ಪ್ರಚಾರ, ಅವಕಾಶ, ಗೌರವ ಜಾಸ್ತಿ ಸಿಗುತ್ತಿದೆ. ಪ್ರದರ್ಶನಗಳು ಜಾಸ್ತಿಯಾಗಿವೆ. ಆದರೆ, ಕೆಲವೊಮ್ಮೆ ಅಬ್ಬರ, ಆಡಂಬರ, ಅತೀವ ಕಾಲಮಿತಿಯ ನಡುವೆ 20 ವರ್ಷಗಳ ಹಿಂದೆ ಕಂಡಂಥ ಯಕ್ಷಗಾನದ ತೀವ್ರ ಅನುಭೂತಿ ಸಿಗುತ್ತಿಲ್ಲವೇನೋ ಎಂಬ ಆತಂಕ ಇದೆ ಅಷ್ಟೆ.

-ಕೆಎಂ ತಲೆಂಗಳ, (ಬಲ್ಲಿರೇನಯ್ಯ, ಯಕ್ಷಕೂಟದ ಬರಹ).

No comments: