ಅರ್ಥಕ್ಕೆ ನಿಲುಕದ ಶರಧಿ


ಸಮುದ್ರ ಅರ್ಥವಾಗದ ಸ್ನೇಹಿತನ ಹಾಗೆ. ಅಲ್ವ?

ಸಮುದ್ರದ ಅಲೆಗಳ ವೈಜ್ಞಾನಿಕವಾದ ಎತ್ತರ, ಅಲೆಗಳ ಮರುಕಳಿಸುವಿಕೆಯ ವೇಗ, ಉಬ್ಬರ, ಇಳಿತ ಅವೆಲ್ಲದರಿಂದ ಹೊರ ಬನ್ನಿ. ಸಮುದ್ರದ ಜೊತೆ ಮಾತನಾಡಲು ಕವಿ ಮನಸ್ಸು, ಬರಹಗಾರನ ಗಮನಿಸುವಿಕೆ ಯಾವುದೂ ಬೇಕಾಗುವುದಿಲ್ಲ. ಅದನ್ನು ವರ್ಣಿಸಲು ಡಿಕ್ಷನರಿಯಲ್ಲಿರುವ ಪದಗಳನ್ನು ಆಯ್ದು ತಂದು ಪೋಣಿಸಬೇಕಾಗಿಲ್ಲ. ಸಮುದ್ರ ಎಂದರೆ ಸಮುದ್ರ ಅಷ್ಟೇ...

 

ಎಲ್ಲೋ ಓದಿದ ನೆನಪು, ನಿನ್ನ ಅತ್ಯುತ್ತಮ ಸ್ನೇಹಿತ ಯಾರೆಂದರೆ ಎಷ್ಟೋ ವರ್ಷಗಳ ಬಳಿಕ ಭೇಟಿಯಾದಾಗಲೂ ಒಂದೇ ಬೆಂಚಿನಲ್ಲಿ ಅಕ್ಕಪಕ್ಕ ಮೌನವಾಗಿ ಕುಳಿತು ಎದ್ದು ಬಂದರೂ ಬಹಳಷ್ಟು ಮಾತನಾಡಿದ ಭಾವ ಮೂಡಿಸುವವ ಅಂತ. ಸಮುದ್ರವೂ ಹಾಗೇ ಅಲ್ಲವೇ.. ಎಷ್ಟೊಂದು ದೇಹಗಳು, ಅವೆಷ್ಟು ಮನಸ್ಸುಗಳು ಸಂಜೆಯಾಗುತ್ತಿದ್ದಂತೆ ಸಮುದ್ರದ ದಂಡೆಯ ಮೇಲಿನ ಮರಳಿನಲ್ಲೂ, ಪಕ್ಕದ ಬಂಡೆಯ ಮೇಲೋ, ದೂರದ ಮರದ ನೆರಳಿನಲ್ಲೋ ಕುಳಿತು ಯೋಚಿಸುತ್ತಲೇ ಇರುತ್ತಾರೆ. ನೆಟ್ಟ ದೃಷ್ಟಿಯಿಂದ ಸಮುದ್ರವನ್ನು ನೋಡುತ್ತಲೇ ಇರುತ್ತಾರೆ, ಏನನ್ನೋ ಕಳೆದುಕೊಂಡ ಹಾಗೆ!

 

ಚೆಂದಕೆ ಬರೆಯುವುದಕ್ಕಿಂತಲೂ, ಚೆಂದಕೆ ಮಾತನಾಡುವುದಕ್ಕಿಂತಲೂ ಚೆಂದಕೆ ಬದುಕಲು ಸಾಧ್ಯವಾಗುವುದು, ಅದರಿಂದ ಇತರರಿಗೆ ಸ್ಫೂರ್ತಿಯಾಗಲು ಸಾಧ್ಯವಾಗುವುದೇ ನಿಜವಾದ ಸಾಧನೆಬಹುಶಃ, ಏನನ್ನೂ ಬರೆಯದ ಒರಟನಂಥಹ ಸಮುದ್ರದ ಬದುಕು ಇಂಥದ್ದೇ ಇರಬೇಕು!

 

ಎದುರು ಕುಳಿತವರ ದೃಷ್ಟಿಯಲ್ಲಿ ಸಮುದ್ರ ತುಂಟನ ಹಾಗೆಯೋ, ಯೋಗಿಯ ಹಾಗೆಯೋ, ಕವನದ ಹಾಗೆಯೋ, ಅಬ್ಬರಿಸಿ ಗದರಿಸುವ ಮೇಷ್ಟ್ರ ಹಾಗೆಯೋ, ಪಕ್ಕದಲ್ಲೇ ದಾಟಿ ಹೋದಾಗ ಪುಟ್ಟದೊಂದು ನವಿರು ಆಹ್ಲಾದವನ್ನು ಸೃಷ್ಟಿಸಬಲ್ಲ ಜೀವವೊಂದರ ಹಾಗೆಯೋ ಕಾಣಿಸುತ್ತಿದ್ದರೆ ಅದು ಅವರವರ ಭಾವಕ್ಕೆ, ಅವರವರ ಭಕುತಿಗೆ ಅಷ್ಟೇ...

 

....

 

ಹೌದು ಸಮುದ್ರ ಮಾತನಾಡುತ್ತದೆ... ಕೇಳಿಸುವ ಕಿವಿಗಳಿದ್ದವರಿಗೆ ಮಾತ್ರ ಕೇಳಿಸುವಂಥ ಮಾತುಗಳವು...

-      ಬೇಡವೆಂದರೂ ಬಂದು ಕಾಡುವ ಅಲೆಗಳ ತುಂಟತನ

-      ನಿಲ್ಲು ನಿಲ್ಲು ಎಂದರೂ ಕೇಳದೆ ಹಿಂದೆ ಸರಿಯುವ ಅದೇ ಅಲೆಯ ನಿರ್ಲಿಪ್ತತೆ.

-      ತೇವಭರಿತ ಮರಳಿನ ಮೇಲೆ ಮೂಡಿದ ಹಜ್ಜೆಗಳನ್ನು ನಿರ್ದಾಕ್ಷಿಣ್ಯವಾಗಿ ಅಳಿಸಿ ಹಾಕುವ ಕಾಠಿಣ್ಯ

-      ಏಕಾಂತವನ್ನೂ ಸೃಷ್ಟಿಸಬಲ್ಲ, ಮತ್ತೆ ಇಹಕ್ಕೆ ಎಳೆದು ತರಬಲ್ಲ ನೀರು ಬಂದು ಬಡಿಯುವ ಸದ್ದು,

-      ಮರಳಿನಿಂದ ಹೊರಟು ತೆರೆಗಳತ್ತ ತೆವಳುತ್ತಾ ಸಾಗುವ ಎಂಥೆಂಥದ್ದೋ ಜೀವಿಗಳು

-      ಅತ್ತಲಿಂದ ತೇಲಿ ಬರುವ ಚಿತ್ರ ವಿಚಿತ್ರ ವಸ್ತುಗಳ ಪಳೆಯುಳಿಕೆಗಳು

-      ದೂರದಲ್ಲಿ ವರುಷಗಳಿಂದ ನಿಂತೆ ಇದೆಯೇನೋ ಎಂಬಂತ ಭಾಸವಾಗುವ ಹಡಗುಗಳು...

-      ಯಾರೋ ನಿನ್ನೆ ಕಟ್ಟಿ ಹೋದ ಬಲೆಗಳ ಮೂಲೆ ಮೂಲೆಯಲ್ಲಿ ಹಾರಿ ಹಾರಿ ಗಮನ ಸಳೆಯುವ ಪ್ಲಾಸ್ಟಿಕ್ ಚೆಂಡುಗಳು

ಸಂಜೆಯ ಕೆಂಬಣ್ಣದ ಸೂರ್ಯ, ಮತ್ತೆ ಕಪ್ಪು ಮೋಡ, ಮತ್ತೆಲ್ಲ ಒಂಥರಾ ಮಬ್ಬು, ಮಿನುಗುವ ದೀಪಗಳು... ಗಾಢ ಕತ್ತಲೆಯಲ್ಲಿ ಅಷ್ಟಿಷ್ಟು ಹೊಳೆಯುವ ಬೆಳ್ನೊರೆ... ಕೊನೆಗೆ ಕೇಳಿಯೂ ಕೇಳದಂಥ ಅಲೆಗಳ ಸದ್ದು ಮಾತ್ರ ಮಾರ್ದನಿಸುತ್ತಲೇ ಇರುತ್ತದೆ..

 

..............

 

 

ಕಡಲೆಂದರೆ ಕರ್ಕಶವ? ನಿಶ್ಯಬ್ಧವ? ದಾರ್ಶನಿಕನ? ಗೊಜಲು ಗೊಜಲಾದ ಕಸದ ಕೊಂಪೆಯ? ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳಬೇಡ ಎಂದು ಸಾರಿ ಹೇಳುವ ಉತ್ಸಾಹಿ ತರುಣನ?ತೆರೆಗಳಾಚೆ ಉಬ್ಬಿ ಇಳಿದು ಪದರ ಪದರವಾಗಿ ಕಾಣುವ ನೀಲಿ ಸಾಗರದಾಳದಲ್ಲಿ ಏನಿದೆಯೆಂದೇ ತೋರಿಸಿಕೊಡದಾತನ? ಅದೇ ಆಗಲೇ ಹೇಳಿದೆನಲ್ಲ ಅರ್ಥವೇ ಆಗದ ಗೆಳೆಯನ ಹಾಗೆ, ಸಂಗಾತಿಯ ಹಾಗೆ ಅಂತ...

 

......................

 

ಅದೇ ಅಲೆ, ಅದೇ ತೀರ, ಅದೇ ಮರ, ಬಂಡೆ, ಬೋಟು, ಮೀನು, ಜೋಡಿಗಳು, ದಡದಲ್ಲಿ ರಾಶಿ ಬಿದ್ದಿರುವ ಕಸದ ಕೊಂಪೆ... ಆದರೆ, ಅಲ್ಲಿಗೆ ಹೋದ ನೀವು ಮಾತ್ರ ಹೊಸಬರು... ಖುಷಿಯಲ್ಲಿ ಹೋದಾಗ ಅದೇ ಕಡಲು ಸಂತಸದಿಂದ ಪುಟಿದೆದ್ದ ಹಾಗೆ, ವಿಷಾದದ ಮೂಟೆ ಹೊತ್ತು ನಡೆದಾಗ ನಿರ್ಲಿಪ್ತವಾಗಿ ಬಂದು ಬಂಡೆಗೆ ಬಡಿಯುವ ವಸ್ತುನಿಷ್ಠನ ಹಾಗೆ ಕಾಣಿಸುವುದು ಅದು ದೃಷ್ಟಿ ಕಾರಣ ಹೊರತು, ಕಡಲಿನದ್ದೇನೂ ತಪ್ಪಿಲ್ಲ. ಕಾಡುವ ತಲೆನೋವಿನ ಹೊತ್ತು ಪಟಾಕಿಯ ಸದ್ದು ತಲೆಗೆ ಮೊಳೆ ಹೊಡೆದಂತೆ ಭಾಸವಾಗಿಸಿದರೆ, ಹಬ್ಬ ಹರಿದಿನದಂದು ಒಳ್ಳೆ ಮೂಡಿನಲ್ಲಿದ್ದಾಗ ಕೇಳುವ ಪಟಾಕಿಯ ಸದ್ದು ಉತ್ಸಾಹವನ್ನು ಇಮ್ಮಡಿಗೊಳಿಸಬಹುದು ಅಲ್ವೇ...?

 

...............

 

ಅವರವರು ಕಂಡ ಹಾಗೆ ಕಡಲು... ನಿಮ್ಮ ಚದುರಿ ಹೋದ ಯೋಚನೆಗಳ ಆಯ್ದು, ಜೋಡಿಸಿ, ಮುಚ್ಚಟೆಯಿಂದ ಅಂಟಿಸಿ ಮತ್ತೆ ಒಂದು ನಿರ್ಧಾರ ರೂಪುಗೊಳ್ಳುವ ತನಕ ಬಂದು ಬಂದು ಬಡಿಯುವ ಅಲೆಗಳತ್ತಲೇ ನೆಟ್ಟ ದೃಷ್ಟಿಗೆ ಕಟ್ಟಿಕೊಂಡ ಏಕಾಂತಕ್ಕೆ, ಕಡಲೊಂದು ವೇದಿಕೆ ಅಲ್ವೇ...? ಉಮ್ಮಳಿಸಿ ಬರುವ ದುಃಖಕ್ಕೆ ಕಣ್ಣೀರಾಗುವ ಮೊದಲು ಬೊಗಸೆಯಲ್ಲಿ ಹಿಡಿಯಲಾಗದಷ್ಟು ದೊಡ್ಡ ನೀರಿನ ಸಾಗರದೆದುರು ವಿಷಾದವನ್ನು ಇಷ್ಟಿಷ್ಟೇ ಬಿಚ್ಚಿಟ್ಟು, ಅದರಲ್ಲಿನ ಅಸಾಧ್ಯತೆಗಳನ್ನು ಸಾಧ್ಯತೆಗಳಿಂದ ಕಳೆದು, ಉಳಿದ ನಿರೀಕ್ಷೆಗಳನ್ನು ಎತ್ತಿಟ್ಟು ಅದಕ್ಕೊಂದು ನಾಳೆಯ ನಂಬಿಕೆಗಳನ್ನು ಜೋಡಿಸುವ ವರೆಗೂ ಕಡಲಿನಾಚೆಯ ಕ್ಷಿತಿಜವೊಂದು ಅಪ್ರಚೋದಿತವಾಗಿ ಪುಟ್ಟ ಟಾನಿಕ್ ನೀಡಿದ್ದು ನಮಗೆ ಗೊತ್ತಾಗದೇ ಇರುತ್ತದೆಯೇ...?

..................................

 

ಎರಡೆರಡು ಬಾರಿ ಓದಿದರೂ ಅರ್ಥವಾಗದ ವಾಕ್ಯವನ್ನು ಬರೆದಾತನ ತಲೆಯಲ್ಲಿ ಅದರ ಅರ್ಥ ಬರೆಯುವ ಹೊತ್ತಿಗೆ ಸ್ಪಷ್ಟವಾಗಿರುತ್ತದೆ... ಅರ್ಥವನ್ನು ವಿಸ್ತರಿಸುವ ಹೊತ್ತಿನಲ್ಲಿ ಅರ್ಥದ ಜಾಡು ದೂರ ದೂರ ಸರಿದು, ವಿವರಣೆ ಸಂಕೀರ್ಣವಾಗಿ ತಾಳ್ಮೆಯಿಂದ ಬಿಡಿಸಿದರೆ ಮಾತ್ರ ಬಗೆಹರಿಯುವ ಬಿದಿರಿನ ಮಳೆಯ ಹಾಗೆ ಕೆಲವೊಮ್ಮೆ ಸಮುದ್ರದ ಸಾಂಗತ್ಯ!

 

…………………………

 

ಸಮುದ್ರವೆಂದರೆ ಸಹಜ, ಸಮುದ್ರವೆಂದರೆ ಸಾಧ್ಯತೆ, ಸಮುದ್ರವೆಂದರೆ ಅಗಾಧ, ಸಮುದ್ರವೆಂದರೆ ಹಿಡಿದು ಬಚ್ಚಿಟ್ಟು, ಮರೆಮಾಚಲಾಗದಂಥಹ ಸತ್ಯ, ಉತ್ತರವೇ ಇಲ್ಲದ ಪ್ರಶ್ನೆಗಳಿಗೂ ಪರಿಹಾರವನ್ನು ನಮ್ಮೊಳಗೆ ಕಂಡುಕೊಳ್ಳಲು ಸಾಧ್ಯವಾಗಿಸುವ ಒಂದು ಪುಟ್ಟ ಪರಿಸರವನ್ನು ಕಟ್ಟಿಕೊಡಬಲ್ಲ ಸಹನೆಯ ಮೂರ್ತಿ...

 

.............................

 

ಸಮುದ್ರದೆದುರು ನಿಮ್ಮ ಬೆರಳುಗಳ ಚೌಕಟ್ಟು ನಿರ್ಮಿಸಿ ಅದರೊಳಗೆ ಮುಖವೂರಿ ನೋಡಿದಾಗ ಸಮುದ್ರ ನನ್ನ ಕೈಯ್ಯೊಳಗಿದೆ ಅಂತ ಅಂದುಕೊಳ್ಳುವುದು ಎಷ್ಟು ಬಾಲಿಶ ಅಲ್ವ...? ಹಿಡಿತಕ್ಕೆ ಸಿಗದ್ದು, ಕಲ್ಪನೆಯಾಚೆಗೂ ಚಾಚಿರುವಂಥದ್ದು, ದಡ ದಾಟಿ ನಡು ನೀರಿಗೆ ಹೋದರೆ ಹಿಂದೆ ಮುಂದೆ ತಿಳಿಯಲಾಗದಷ್ಟು ದಿಕ್ಕುತಪ್ಪಿಸುವಂಥದ್ದು, ಎಷ್ಟು ನೀರು ಬಂದರೂ ಅಜೀರ್ಣವೆನ್ನದೆ, ಎಂಥದ್ದೇ ಕಸ ಸಿಕ್ಕರು ಒಳಗಿಳಿಸಿಕೊಳ್ಳದೆ, ನಿಗಾದ ಮುಲಾಜಿಗೆ ಸಿಕ್ಕದೆ, ಕಾಳಜಿಯ ಹಂಗಿಗೆ ಬಾರದೆ, ಯಾವ ಭಾವವನ್ನೂ ತೋರಗೊಡದೆ, ತಾನಾಗಿ ಏನನ್ನೂ ಹೇಳದೆ, ಸಿಕ್ಕಿಯೂ ಸಿಕ್ಕದೆ, ಮತ್ತೆ ಹಿಂದೆ ಸರಿದು ಒಂದಷ್ಟು ಹೊತ್ತು ತನ್ಮಯವಾಗಿಸುವ ವಿಶ್ವವ್ಯಾಪಿ....

 

.....................

 

ಅದೊಂದು ಜಲರಾಶಿ, ಎದುರಿಗೆ ಮರಳು, ಸಂಜೆಯೊಂದು ಸೂರ್ಯಾಸ್ತಕ್ಕೆ, ಮೀನು ಹಿಡಿಯಲು ದೋಣಿಯಲ್ಲಿ ಹೋಗುವವರಿಗೆ ಪ್ರಶಸ್ತ ಜಾಗ ಅಂಥ ಮಾತ್ರ ಅನ್ನಿಸಿದರೆ... ನಿಮಗನ್ನಿಸಿದರೆ, ನಾನೇನೂ ಹೇಳಲಾಗದು... ಬಹುಶಃ ನಿಮ್ಮ ರಾಶಿಗೂ, ಸಮುದ್ರದ ರಾಶಿಗೂ ಆಗಿ ಬರುವುದಿಲ್ಲ ಅನ್ನಿಸುತ್ತದೆ, ಅಷ್ಟೆ !

 

-ಕೃಷ್ಣಮೋಹನ ತಲೆಂಗಳ

(ಸಹೋದ್ಯಾಗಿ ಮಿತ್ರ, ಧೀರಜ್ ಪೊಯ್ಯಕಂಡ ರಚಿಸಿದ್ದು, ಆ.20ರಂದು ಬಿಡುಗಡೆಗೊಳ್ಳಲಿರುವ ಮಿತಿಕಾದಂಬರಿಯ ಸಮುದ್ರದ ಅಲೆಗಳಿಗೆ ಮತ್ತು ಆಲೋಚನೆಗಳಿಗೆ ವಿಶ್ರಾಂತಿ ಎಂಬುದಿಲ್ಲ ಎಂಬ ಸಾಲಿನಿಂದ ಪ್ರೇರಿತ ಬರಹ)




 

No comments: