ರಾತ್ರಿ ಕಳೆದು ಬೆಳಕು ಮೂಡುವ ಹೊತ್ತಿಗೆ...

 

 

ಅಂದು ಸರಿಯಾಗಿ ನೆನಪಿದೆ 2004, ಅ.18ರಂದು ರಾತ್ರಿ 12.30ರ ಬಳಿಕ ರಾತ್ರಿ ಪಾಳಿಯ ಕೆಲಸ ಮುಗಿಸಿ, ಪತ್ರಿಕೆಯನ್ನು ಮುದ್ರಣಕ್ಕೆ ಕಳುಹಿಸಿ ಕಚೇರಿಯಿಂದ ಹಿರಿಯ ಸಹೋದ್ಯೋಗಿಗಳೊಂದಿಗೆ ಹೊರಗೆ ಬಂದದ್ದಷ್ಟೇ... ಅಷ್ಟೊತ್ತಿಗೆ ಬೆಂಗಳೂರು ಮುಖ್ಯ ಕಚೇರಿಯಿಂದ ನಮ್ಮ ವಿಭಾಗ ಮುಖ್ಯಸ್ಥರಿಗೆ ಕರೆ ಬಂತು. ವೀರಪ್ಪನ್ ಹತ್ಯೆ ಆಗಿದೆ. ಪ್ರಿಂಟ್ ನಿಲ್ಲಿಸಲು ಹೇಳಿ, ಮುಖಪುಟ ಬೇರೆ ಬರುತ್ತದೆ ಅಂತ. ನಮಗೆ ಶಾಕ್... ಮತ್ತೆ ಎಲ್ಲರೂ ಬಂದು ಕಚೇರಿಯೊಳಗೆ ಕುಳಿತೆವು. ಅಂದು ರಾತ್ರಿ 11.30ರ ವೇಳೆಗೆ ಸ್ಪೆಶಲ್ ಟಾಸ್ಕ್ ಫೋರ್ಸಿನವರು ಕಾಡುಗಳ್ಳ ವೀರಪ್ಪನ್ ನ್ನು ಹೊಡೆದುರುಳಿಸಿದ್ದರು. ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿದ್ದ ಕಾಲವಲ್ಲ ಅದು. ಆಗಿನ್ನೂ ವಾಟ್ಸಪ್ಪು, ಫೇಸ್ಪುಕ್ಕು ಪ್ರವರ್ಧಮಾನಕ್ಕೆ ಬಂದಿರಲಿಲ್ಲ. ಸುದ್ದಿವಾಹಿನಿಗಳೂ ಬೆರಳೆಣಿಕ ಸಂಖ್ಯೆಯಲ್ಲಷ್ಟೇ ಇತ್ತು. ಜನರೂ ತಡರಾತ್ರಿ ತನಕ ಹೆಚ್ಚಿನ ಸಂಖ್ಯೆಯಲ್ಲಿ ಸುದ್ದಿಗಳನ್ನು ಅನುಸರಿಸುತ್ತಾ ಕೂರುತ್ತಿದ್ದ ಕಾಲವಲ್ಲ. ಹಾಗಾಗಿ ಜಗತ್ತೆಲ್ಲ ಗಾಢ ನಿದ್ರೆಯಲ್ಲಿದ್ದಾಗ ವೀರಪ್ಪನ್ ಇನ್ನಿಲ್ಲವಾಗಿ ಹೋಗಿದ್ದ. ಸ್ವಲ್ಪ ಹೊತ್ತಿನಲ್ಲಿ ನಮ್ಮ ಪತ್ರಿಕೆಯ ಮುಖಪುಟ ಬದಲಾಗಿ, ವೀರಪ್ಪನ್ ಅಂತ್ಯವಾದ ಸುದ್ದಿಯೊಂದಿಗೆ ಮುದ್ರಣಕ್ಕೆ ಹೋಯಿತು. ಮರುದಿನ ಬೆಳಗ್ಗೆ ಎದ್ದು ಪತ್ರಿಕೆ ಓದಿದವರಿಗೆ ಶಾಕ್!  ವೀರಪ್ಪನ್ ಸತ್ತಿದ್ದು ಅವರಿಗೆ ಅಂದು ಪತ್ರಿಕೆ ಓದಿಯೇ ಗೊತ್ತಾಗಿತ್ತು...! ನಮಗೂ ತಡರಾತ್ರಿ ವರೆಗೆ ಕಚೇರಿಯಲ್ಲಿ ನಿಂತು ಒಂದು ಸುದ್ದಿಯನ್ನು ಓದುಗರಿಗೆ ತಲುಪಿಸಿದ ಸಾವಧಾನದ ಭಾವವಿತ್ತು....

 

..................

 

ಮತ್ತೊಂದು ಘಟನೆ 2010ರ ಮೇ 21ರಂದು ರಾತ್ರಿ ನಾವು ತಡರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳಿ ಮಲಗಿದ್ದು, ನಿದ್ರೆಯಿಂದ ಎದ್ದಿರಲಿಲ್ಲ. ಬೆಳಗ್ಗೆ 7.15ರ ಹೊತ್ತಿಗೆ ಸ್ವತಃ ಸಂಪಾದಕರಿಂದ ಮಂಗಳೂರು ಕಚೇರಿಯ ಎಲ್ಲರಿಗೂ ಕರೆ ಬಂತು... ಕರೆ ಬಂದಾಗಲೇ ನಮಗೆ ಎಚ್ಚರವಾಗಿದ್ದು, ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ವಿಮಾನ ದುರಂತ ಆಗಿದೆ, ಬೇಗ ರೆಡಿಯಾಗಿ ಸ್ಥಳಕ್ಕೆ ತೆರಳಿ, ನಾಳಿನ ಆವೃತ್ತಿಗೆ ನಮಗೆ ಸಾಕಷ್ಟು ಸುದ್ದಿಯ ಅಗತ್ಯ ಇದೆ ಅಂತ. ನಾವು ಆ ಶಾಕಿನಿಂದ ಸಾವರಿಸಿಕೊಂಡು ಟಿ.ವಿ. ಇರಿಸಿ ನೋಡಿದರೆ ಸುದ್ದಿ ಬರ್ತಾ ಇತ್ತು, ದುಬೈಯಿಂದ ಮಂಗಳೂರಿಗೆ ಬಂದ ವಿಮಾನ ಮಂಗಳೂರಿನ ಕೆಂಜಾರಿನಲ್ಲಿ ಇಳಿಯುವ ಸಂದರ್ಭ ಪತನವಾಗಿ 158 ಮಂದಿ ಮೃತಪಟ್ಟಿದ್ದರು, 8 ಮಂದಿ ಬಚಾವಾಗಿದ್ದರು... ಜನ ಬೆಳಗ್ಗಿನ ನಿದ್ರೆಯಿಂದ ಕಣ್ಣು ತೆರೆಯುವ ಮುನ್ನ ಘಟಿಸಿದ ಘೋರ ದುರಂತ... ನಂತರ ನಾವು ಸ್ಥಳಕ್ಕೆ, ಆಸ್ಪತ್ರೆಗೆ, ಶವಾಗಾರಗಳಿಗೆ ತೆರಳಿದ್ದು, ಸುದ್ದಿ ಮಾಡಿದ್ದೆಲ್ಲ ಬೇರೆ ಕಥೆ... ಆದರೆ ಆ ಮುಂಜಾನೆ ನೀಡಿದ ಶಾಕ್ ಮತ್ತು ಆ ಕರೆಯನ್ನು ಮರೆಯಲು ಸಾಧ್ಯವೇ ಇಲ್ಲ...!

 

……………

 

 

ರಾತ್ರಿ ಕಳೆದು ಬೆಳಗಾಗುವ ಈ ಅವಧಿ ಇದೆಯಲ್ವ... ಅದು ಎಷ್ಟೊಂದು ಬದಲಾವಣೆಗಳನ್ನು ಹುಟ್ಟು ಹಾಕುತ್ತದೆಯಲ್ವ..? ಹೊರಜಗತ್ತಿನಿಂದ ವಿಮುಖರಾಗಿ, ಪ್ರಜ್ಞೆಯೇ ಇಲ್ಲದವರಂತೆ ಮಲಗಿದ ಬಳಿಕ ಕಣ್ತೆರೆದಾಗ ಕಾಣುವ ಸೂರ್ಯೋದಯ ಒಂದು ಹೊಸ ಹುಟ್ಟಿನ ಹಾಗೆ, ಹೊಸ ಅವಕಾಶದ ಹಾಗೆ, ಹೊಸದೊಂದು ಪರ್ವದ ಹಾಗೆ ಭಾಸವಾಗಿಸುವ ಕ್ಷಣವದು. ಹಾಗೆ ನೋಡುವುದಕ್ಕೆ ಹೋದರೆ ರಾತ್ರಿಯಾದ ತಕ್ಷಣ ಜಗತ್ತೇನೂ ಸ್ತಬ್ಧವಾಗಿರುವುದಿಲ್ಲ. ಚಲನಶೀಲತೆ ನಿಂತಿರುವುದಿಲ್ಲ, ನಾವು ನಿದ್ರಾವಶರಾಗಿದ್ದೆವು ಅನ್ನುವುದು ಮಾತ್ರ ತಾಜಾ ಅನುಭವ ನೀಡಲು ಕಾರಣ. ನಮ್ಮ ಮಾತು, ಓಡಾಟ, ಮೊಬೈಲು ಎಲ್ಲದರಿಂದ ವಿಮುಖರಾಗಿ ಮಲಗಿ ದೈಹಿಕವಾಗಿ, ಮಾನಸಿಕವಾಗಿ ಪಡೆಯುವ ವಿಶ್ರಾಂತಿ ರಾತ್ರಿಯ ಕಡುಕಪ್ಪು ಮಾಸಿ ಬೆಳಗ್ಗೆ ಕಾಣಿಸುವ ಬೆಳಕು ಇವೆಲ್ಲ ಹೊಸದರ ದ್ಯೋತಕವಾಗಿ ಆಹ್ಲಾದಕತೆಯನ್ನು ಕಟ್ಟಿಕೊಡುತ್ತದೆ. ಅದಕ್ಕೇ ರಾತ್ರಿ ಕಳೆದು ಬೆಳಗಾಗುವುದು ಹೊಸ ಜನ್ಮದ ಹಾಗೆ ಭಾಸವಾಗಿಸುವುದು.

 

..............

 

ಮೊನ್ನೆ ಮಣ್ಣಿನಲ್ಲಿ ಹೂತಿಟ್ಟ ಬೀಜ ಇಂದು ಬೆಳಗ್ಗೆ ಮೊಳಕೆ ಬಂದಿರಬಹುದು, ಮೊಗ್ಗಾಗಿದ್ದ ಮಲ್ಲಿಗೆ ಅರಳಿರಬಹುದು, ಅಂಗಳದ ಮೂಲೆಯ ಪಾರಿಜಾತದ ವೃಕ್ಷದಡಿ ಹೂವಿನ ಹಾಸಿಗೆಯೇ ಸಿದ್ಧವಾಗಿರಬಹುದು, ಗಬ್ಬ ಧರಿಸಿದ್ದ ಹಸುವಿನ ಕೊಟ್ಟಿಗೆಯಲ್ಲಿ ಮುಂಜಾನೆ ಪುಟ್ಟ ಕರುವೊಂದು ಲಾಗ ಹಾಕುತ್ತಿರಬಹುದು, ರಾತ್ರಿ ಹೆಪ್ಪಾಗಿದ್ದ ಹಾಲು ಮೊಸರಾಗಿ, ಖಾಲಿಯಾಗಿದ್ದ ಬಾವಿಯೊಳಗೆ ಒರತೆ ಉಂಟಾಗಿ, ಮಾಗಿದ್ದ ಮಾವು ಹಣ್ಣಾಗಿ ಮರದಿಂದ ಉದುರಿ, ಸಣ್ಣಗೆ ಕಾಡುತ್ತಿದ್ದ ಹಲ್ಲು ನೋವು ಮಾಯವಾಗಿ ಬದುಕು ಮಾಮೂಲಾಗಿ... ಹೀಗೆ ಎಷ್ಟೊಂದು ಬದಲಾವಣೆಗಳು ಕಾಡುತ್ತವೆ ಅಲ್ವ? ರಾತ್ರಿ ಕಳೆದು ಬೆಳಗಾಗುವ ಮುನ್ನ....

...........

 

ರಾತ್ರಿ ಬೆಳಗಾಗುವ ಮುನ್ನ ಏನೂ ಆಗಬಹುದು. ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಾರೋ ಬೆಳಗ್ಗಿನ ಹೊತ್ತಿಗೆ ಇನ್ನಿಲ್ಲವಂತೆ ಎಂಬ ಸುದ್ದಿ ಬರಬಹುದು, ರಾತ್ರಿ ಎಲ್ಲರಂತೆ ಮಾಮೂಲಾಗಿದ್ದ ವ್ಯಕ್ತಿ ಬೆಳಗ್ಗೆ ಏಳಲೇ ಇಲ್ಲವಂತೆ ಎಂಬ ವಿಷಾದದ ಸುದ್ದಿ ಕಾಡಬಹುದು. ಎಲ್ಲೋ ಪ್ರವಾಹ, ಇನ್ನೆಲ್ಲೋ ಬೆಂಕಿ, ಮತ್ತೆಲ್ಲೋ ಎನ್ ಕೌಂಟರ್, ಯಾವುದೋ ಮನೆಗೆ ಕನ್ನ ಹಾಕಿದ್ದು, ಯಾರೋ ಓಡಿ ಹೋಗಿದ್ದು, ಕಡಿದ ಅಣೆಕಟ್ಟು, ಕೊಲೆ, ಅಪಘಾತ ಮತ್ತೆಲ್ಲೋ ಮನೆಗೆ ಕನ್ನ ಹಾಕಿದ್ದು... ಹೀಗೆ ಹೊಸ ಹೊಸ ಅನಿರೀಕ್ಷಿತ ಸುದ್ದಿಗಳು ಸಿಕ್ಕುವುದು ಬೆಳಗ್ಗಿನ ಜಾವವೇ ಅಲ್ವ?

ಹಾಗಂತ ರಾತ್ರಿಯೆಂದರೆ ಕತ್ತಲು, ದುರಂತಗಳೇ ಸಂಭವಿಸುವುದು ಅಂತಲ್ಲವಲ್ಲ. ಮದುವೆಯಾದ ನವಜೋಡಿ ಬೆಳಗಾಗುವ ಮೊದಲು ಸಂಸಾರಸ್ಥ ದಂಪತಿ ಆಗಿರುತ್ತಾರೆ!, ಪ್ರಸವ ವೇದನೆಯಿಂದ ಬಳಲುತ್ತಿದ್ದ ಹೆಣ್ಣು ಮಗಳು ಬೆಳಗ್ಗಿನ ಹೊತ್ತಿಗೆ ಮುದ್ದು ಮುಗುವಿನ ಅಮ್ಮನಾಗಿ ಬಿಡುತ್ತಾಳೆ, ರಾತ್ರಿಯಿಡೀ ಕೊರೆದ ಬೋರ್ ವೆಲ್ಲಿನಲ್ಲಿ ತಡರಾತ್ರಿ ನೀರು ಸಿಕ್ಕಿದಂತೆ ಎಂಬ ವರ್ತಮಾನ ಮುಂಜಾನೆಯೇ ಕೇಳಿ ಬರುತ್ತದೆ, ಫಸಲೇ ಕೊಡುವುದಿಲ್ಲವೇನೋ ಅಂದುಕೊಂಡಿದ್ದ ತೆಂಗಿನ ಗಿಡದಲ್ಲಿ ಕಾಯಿ ಚಿಗುರುವ ಸೂಚನೆ ಬೆಳಗ್ಗೆ ಕಾಣಿಸಿರುತ್ತದೆ, ನಿನ್ನೆ ಗುಡ್ಡದಿಂದ ಬಾರದೇ ಆತಂಕ ಸೃಷ್ಟಿಸಿದ್ದ ಹಸು ತಾನಾಗಿ ಬಂದು ಬೆಳಗ್ಗೆ ಗೇಟಿನ ಹತ್ತಿನ ಮೆಲುಕು ಹಾಕುತ್ತಾ ಮಲಗಿರುತ್ತದೆ, ರಾತ್ರಿಯಿಡೀ ಕಾಡಿ ಬಸವಳಿಯುವಂತೆ ಮಾಡಿದ್ದ ಜ್ವರ ಬೆಳಗ್ಗೆ ಏಳುತ್ತಿದ್ದಂತೆ ಮಾಯವಾಗಿರುತ್ತದೆ... ಹೀಗೆ ರಾತ್ರಿಯೆಂಬೋ ಸುರಂಗವನ್ನು ಹಾದು ಬೆಳಗ್ಗಿನ ಹಜಾರವನ್ನು ನಾವು ಪ್ರವೇಶಿಸುವ ವೇಳೆಯಲ್ಲಿ ಏನೇನೋ ಆಗಿ ಹೋಗಿರುತ್ತದೆ... ಧುತ್ತನೆ ಬೆಳಗ್ಗಿನ ಗೊಂಚಲು ಬಂದು ಬೀಳುವಾಗ ಅವೆಲ್ಲ ಅಚ್ಚರಿಗಳನ್ನು ಸೃಷ್ಟಿಸುತ್ತವೆ ಅಷ್ಟೆ....

................

 

ತುಂಬ ಹತಾಶರಾದವರು ನಾನು ನಾಳೆಯ ಬೆಳಗನ್ನು ಕಾಣುತ್ತೇನೆಯೋ ಇಲ್ಲವೋ ಅಂತ ಅಲವತ್ತುಕೊಂಡರೆ, ಸಿಕ್ಕಾಪಟ್ಟೆ ಆತಂಕ, ಹಠ ಮಾಡುವವರಿಗೆ ನೀನಿಗ ಮಲಗು, ನಾಳೆ ಬೆಳಗ್ಗೆ ಏನಾದರು ಮಾಡುವ ಅಂತ ಸಮಾಧಾನ ಮಾಡುವಲ್ಲಿಗೆ, ಬೆಳಗ್ಗೆಂದರೆ ಏನೋ ಗಡಿಕಲ್ಲಿನ ಹಾಗೆ, ಆಶಾಕಿರಣ ಅಂತಲೂ ಭಾವಿಸಿಕೊಳ್ಳಬಹುದು. ರಾತ್ರಿ ಸಿಕ್ಕಾಪಟ್ಟೆ ಕುಡಿದು ರಂಪಾಟ ಮಾಡಿ, ಮನೆಮಂದಿಯನ್ನು ಕೊಂದೇ ಬಿಡುತ್ತಾನೆ ಅನ್ನುವಷ್ಟು ರೌದ್ರಾವತಾರ ತೋರಿಸಿದ ಕುಡುಕ ಕೂಡಾ ಬೆಳಗ್ಗೆ ಏನೂ ನಡೆದಿಲ್ಲ ಎಂಬ ಹಾಗೆ ತನ್ನ ಪಾಡಿಗೆ ಕೆಲಸಕ್ಕೆ ಹೋಗುವುದು ರಾತ್ರಿ ಮೂಡಿಸುವ ಅಚ್ಚರಿಗಳಲ್ಲಿ ಒಂದು. ನಿನ್ನೆ ರಾತ್ರಿ ಮಲಗುವ ಹೊತ್ತು ನಾನು, ನಾಳೆಯಿಂದ ಆ ಕೆಲಸಕ್ಕೆ ಹೋಗುವುದೇ ಇಲ್ಲ, ಸಾಕಾಯ್ತು ಅಂತ ಹುಸಿ ಶಪಥ ಮಾಡಿದಾತನೂ, ಬೆಳಗ್ಗೆದ್ದು ಅದನ್ನೆಲ್ಲ ಮರೆತು ಮತ್ತದೇ ಕೆಲಸಕ್ಕೆ ಮರು ಮಾತಿಲ್ಲದೆ ಹೋಗುವುದು ಕೂಡಾ ಬೆಳಗ್ಗಿನ ಮಾಯೆಗಳಲ್ಲೊಂದು!

.................

 

ರಾತ್ರಿ ಇಡೀ ಸುರಿದ ಮಳೆ ಬೆಳಗ್ಗೆದ್ದು ಏನೇನು ಅವಾಂತರ ಸೃಷ್ಚಿಸಿದೆ ಅಂತ ನೋಡುವ ಆತಂಕ, ತರಕಾರಿ ಗಿಡದಲ್ಲಿ ಕೊಯ್ಯುವಂತಹ ಬೆಂಡೆ ಕಾಯಿ ಎಷ್ಟಿದೆ ಅಂತ ಇಣುಕುವುದು, ದನ ಕರು ಹಾಕಿದೆಯಾ ಅಂತ ನೋಡುವುದು, ಮೊಗ್ಗರಳಿದ ಹೂವನ್ನು ಕೊಯ್ಯಲು ಹೊರಡುವುದು, ಪೋಸ್ಟು ಮ್ಯಾನ್ ತರುವ ಪತ್ರಕ್ಕೆ ಕಾಯುವುದು.... ಬೆಳಗ್ಗಿನ ಧಾವಂತಗಳಾದರೆ. ಬೆಳಗ್ಗಿನ ಆ ತಂಪು ಹವೆ, ಸೂರ್ಯೋದಯದ ಮತ್ತು, ಎಲ್ಲರ ಮುಖದಲ್ಲಿ ಕಾಣುವ ಹೊಸತರ ಛಾಯೆ ಕೂಡಾ ಬೆಳಗ್ಗೆಂಬ ಒಂದು ಮಾಯೆಯನ್ನು ಸೃಷ್ಟಿಸುತ್ತದೆ... ಅದಕ್ಕೇ ಅಲ್ಲವೆ? ತಡರಾತ್ರಿ ವರೆಗೆ ನಿದ್ರೆಗೆಟ್ಟು ಹತ್ತಾರು ಸಲ ಓದಿದ ಪಾಠ ಕೂಡಾ ಬೆಳ್ಳಂಬೆಳಗ್ಗೆ ಬೇಗನೇ ಎದ್ದು ಒಮ್ಮೆ ಓದಿದಾಗಲೇ ತಲೆಗೆ ಹೋಗುವುದು.... ರಾತ್ರಿ ಮಂಡೆ ಖರ್ಚು ಮಾಡಿಯೇ ಕುಳಿತರೂ ಹೊಳೆಯದ ಕಥೆಯ ಅಂತ್ಯ ರಾತ್ರಿ ಯಾವುದೋ ಗಳಿಗೆಯಲ್ಲಿ ಹೊಳೆದು ಬೆಳಗ್ಗಿನ ತನಕ ನಿದ್ರೆ ಬಾರದೆ, ಬೆಳಗ್ಗೆದ್ದು ಕಥೆಯನ್ನು ಮುಗಿಸಲು ಸಾಧ್ಯವಾಗುವುದು! ಹೀಗೆ ರಾತ್ರಿ ಕಳೆದ ಬಳಿಕದ ಬೆಳಗಿಗೆ ನಮ್ಮನ್ನೇ ತುಸು ಅಲ್ಲಾಡಿಸುವ, ಬದಲಾಯಿಸುವ ತಾಕತ್ತಿದೆ.

 

..................

 

ಸ್ಮಾರ್ಟ್ ಫೋನ್ ಬಂದ ಬಳಿಕೆ, ಅನಿಯಮಿತ ಡೇಟಾ ಪ್ಲಾನುಗಳು ವಿಜೃಂಭಿಸುತ್ತಿರುವ ಹೊತ್ತಿಗೆ, ಸುದ್ದಿವಾಹಿನಿಗಳು, ಜಾಲತಾಣಗಳು, ಮನೆಯಲ್ಲೇ ಕುಳಿತು ಸಿನಿಮಾ ವೀಕ್ಷಣೆಯ ಅವಕಾಶಗಳೆಲ್ಲ ಹೆಚ್ಚಾದ, ವರ್ಕ್ ಫ್ರಂ ಹೋಂ, 24 ಗಂಟೆಗಳ ಪಾಳಿಯಲ್ಲಿ ದುಡಿಯುವ ಉದ್ಯೋಗ ಅವಕಾಶಗಳು ಹೆಚ್ಚಾದ ಈ ಹೊತ್ತಿನಲ್ಲಿ ಬೇಗ ಮಲಗಿ, ಬೇಗ ಏಳು ಎಂಬಿತ್ಯಾದಿ ಪರಂಪರೆಯ ತತ್ವ ಸಿದ್ಧಾಂತ, ತಡರಾತ್ರಿಯ ವ್ಯಾಖ್ಯಾನ ಅಕ್ಷರಶಃ ಬದಲಾಗಿದೆ. ಮಲಗಿದ್ದೇ ರಾತ್ರಿ, ಎದ್ದದ್ದೇ ಬೆಳಗು ಎಂಬ ಹಾಗಾಗಿದೆ. ಸಹಜವಾದ ರಾತ್ರಿಗಳ ವಿಶ್ರಾಂತಿ, ಬೆಳಗ್ಗಿನ ಆಹ್ಲಾದಕರ ಪರಿಸರ ಆಸ್ವಾದಿಸುವ ಮನಃಸ್ಥಿತಿ, ಸಹನೆ ಇಲ್ಲವಾಗುತ್ತಿದೆ. ಕೃತಕ ವ್ಯಾಯಾಮ, ಔಷಧಿ, ಥೆರಪಿಗಳ ಮೂಲಕ ಆರೋಗ್ಯವನ್ನು ಕೃತಕವಾಗಿ ಕಾಪಾಡಿಕೊಳ್ಳುವಂತಾಗಿದೆ....

 

.................

 

ರಾತ್ರಿಗಳು ಹಗುರವಾಗೇ ಕಳೆದು ಹೋಗುತ್ತದೆ ಅಂತಲ್ಲ. ನಿದ್ರೆಯೇ ಬಾರದವರಿಗೆ ರಾತ್ರಿಯೊಂದು ಘೋರ ಯಾತ್ರೆಯಂತೆ ಭಾಸವಾದೀತು. ಧುತ್ತನೆ ಎದುರಾದ ನೋವು, ನಾಳೆಯ ಹಗಲಿನ ಕುರಿತಾದ ಯಾವುದೋ ಆತಂಕ, ನಿನ್ನೆಯ ಬೇಸರ, ಮತ್ತೇನೋ ಗಾಢ ನಿರಾಸೆ, ಹತಾಶೆ, ಅಸಹಾಯಕತೆಗಳೆಲ್ಲ ರಾತ್ರಿಯೇ ಕಾಡಿ ಕಾಡಿ ನಿದ್ರೆಯನ್ನು ಕಸಿದುಕೊಂಡು ರಾತ್ರಿಗಳನ್ನು ಭಾರವಾಗಿಸೀತು. ರಾತ್ರಿಗೆ ಕಣ್ಣೀರನ್ನೂ ಕಾಣುವ ಶಕ್ತಿಯಿಲ್ಲದ ಕಾರಣ ರಾತ್ರಿಯ ಕಣ್ಣೀರ ಕೋಡಿಗಳಿಗೆ ಸಾಕ್ಷಿಗಳಿರುವುದಿಲ್ಲ! ಚಿಂತೆ ಕೂಡಾ ರಾತ್ರಿಯ ನಿದ್ರೆ ಕಸಿದೀತು. ಕ್ಷಣ ಮುಂದೆ ಹೋಗುವುದೇ ಇಲ್ಲವೇನೋ ಅಂಬ ಆತಂಕವನ್ನು ಹುಟ್ಟು ಹಾಕೀತು.

 

....

 

ಅಷ್ಟು ಮಾತ್ರವಲ್ಲ, ರಾತ್ರಿಯ ಕುರಿತ ಭಯ, ಆತಂಕ, ವಿಚಿತ್ರದ ಸದ್ದಿಗೆ ಬೆಚ್ಚಿ ಬೀಳುವ ಸಂಭವ, ಟಾಯ್ಲೆಟ್ಟಿಗೂ ಹೋಗಲು ಭಯವಾಗಿ, ಮೂತ್ರಶಂಕೆಯೂ ಬಾಕಿಯಾಗಿ ನಿದ್ರೆ ಬಾರದೇ ಇದ್ದಿರಬಹುದಾದ ಬಾಲ್ಯದ ದಿನಗಳು, ಹೊರಗೆಲ್ಲೋ ಊಳಿಟ್ಟ ಹಾಗೆ, ಏನೋ ಬಿದ್ದ ಹಾಗೆ ಭಾಸವಾಗಿ ನಿದ್ರೆ ಹಾರಿಹೋದ ಸಂದರ್ಭಗಳು... ಅಷ್ಟೇ ಯಾಕೆ ಹಾಸಿಗೆಯ ಸುತ್ತ ಕೆಟ್ಟ ಸದ್ದಿನೊಂದಿಗೆ ಹಾರುವ ಸೊಳ್ಳೆ, ಕಚ್ಚುವ ತಿಗಣೆ ಕೂಡಾ ರಾತ್ರಿಗಳನ್ನು ದುರಂತ ದುಃಸ್ವಪ್ನದಂತೆ ಭಾಸವಾಗಿಸೀತು... ರಾತ್ರಿ ಎಷ್ಟೋ ಹೊತ್ತಿಗೆ ಮಲಗಿದಾಗ ಆಫ್ ಮಾಡಲು ಬಾಕಿಯಾದ ರೇಡಿಯೋ ಬೆಳಗ್ಗೆ ಕುಂಯ್ ಅನ್ನುತ್ತಿರುವುದು, ತುಂಬ ಹೊತ್ತು ಲಾಟೀನು ಬೆಳಕಿನಲ್ಲಿ ಓದುತ್ತಾ ಎದೆ ಮೇಲೆ ಪುಸ್ತಕ ಹಾಕಿಕೊಂಡು ಮಲಗಿದ ಬಳಿಕ, ಸೀಮೆಎಣ್ಣೆ ಖಾಲಿಯಾಗಿ ಲಾಟೀನು ತನ್ನಷ್ಟಕ್ಕೇ ನಂದಿ ಹೋಗಿದ್ದು... ಹೀಗೆ ರಾತ್ರಿ ಎಂಬುದೇ ಸ್ವಪ್ನದ ಹಾಗೆ ಹಗಲಿನ ಪಾಲಿಗೆ! ಹಾಗೆ ನೋಡಿದರೆ ಮಧ್ಯರಾತ್ರಿ 12 ಕ್ಕೆ ದಿನ, ತಾರೀಕು ಬದಲಾಗಿರುತ್ತದೆ. ಆದರೆ ನಿದ್ರೆ ತಿಳಿದೇಳುವುದೇ ನಮ್ಮ ಪಾಲಿಗೆ ಮರುದಿನ ಅಲ್ವ?

..............

ಇದ್ದದ್ದನ್ನು ಇಲ್ಲವಾಗಿಸುವ, ಹೊಸ ಸೃಷ್ಟಿಯನ್ನು ಸಾಧ್ಯವಾಗಿಸುವ, ಪರಿಹಾರವೇ ಇಲ್ಲವೇನೋ ಎಂಬಂತೆ ಕಾಡಿದ ಸಮಸ್ಯೆಯ ತೀವ್ರತೆಯನ್ನೂ ಕಡಿಮೆ ಮಾಡಬಲ್ಲ, ಆತಂಕದ ತೀವ್ರತೆ ಕುಗ್ಗಿಸಬಲ್ಲ, ಕಾಡಿದ ಅಸಹಾಯಕತೆಗೊಂದು ಪರಿಹಾರ ಮಾರ್ಗವನ್ನು ತಾನಾಗಿ ಸೂಚಿಸಬಲ್ಲ ರಾತ್ರಿ ಅರ್ಥಾತ್, ರಾತ್ರಿಯ ನಿದ್ರೆ ಬದುಕಿಗೆ ಅತಿ ಅವಶ್ಯಕ. ಮಲಗಿದ ಆ ಐದಾರು ಗಂಟೆಗಳ ಬೆಳವಣಿಗೆಗಳು ನಮಗರಿವಿಲ್ಲದೇ ಸಾಕಷ್ಟು ಬೆಳವಣಿಗೆಗಳಿಂದ ದೂರ ನಿಲ್ಲಿಸಿ, ಏಕಾಏಕಿ ಧುತ್ತನೆ ಎದುರು ಬಂದಾಗ ಅಚ್ಚರಿ ಮೂಡಿಸುತ್ತವೆ.... ಅಂಗಳದ ತುದಿಯ ಬೇಲಿಗೆ ಹಬ್ಬುವ ಮಲ್ಲಿಗೆ ಬಳ್ಳಿ ಬೆಳವಣಿಗೆ ಆಗಿದ್ದು ಯಾವಾಗ, ಹೆಪ್ಪು ಬಿದ್ದ ಹಾಲು ಮೊಸರಾಗಿದ್ದು, ದಾಸವಾಳದ ಮೊಗ್ಗು ಹೂವಾಗಿದ್ದು ಯಾವಾಗ? ಅಂತ ಅರ್ಥವೇ ಆಗದ ಹಾಗೆ! ರಾತ್ರಿಯ ಮುನಿಸು ಬೆಳಗ್ಗೆ ಮಾಯವಾಗಲು ಸಾಧ್ಯವಾಗುವುದು, ಇಲ್ಲದ ಕೋಪ, ಅತೃಪ್ತಿ ಸೃಷ್ಟಿಯಾಗುವುದು, ಚಂದಿರ ನಗುತ್ತಿದ್ದ ಆಗಸದಲ್ಲಿ ಸೂರ್ಯ ಇಣುಕುತ್ತಿರುತ್ತಾನೆ, ಪ್ರಳಯದಂತೆ ಕಾಡಿದ ಗಾಳಿ, ಮಳೆ ಎಷ್ಟೋ ಹೊತ್ತಿಗೆ ಶಾಂತವಾಗಿ ನಿಂತು ಚಂದದ ತಂಪು ಗಾಳಿ ಬೀಸಿ ಹೊಸತನ್ನು ಕೈಬೀಸಿ ಕರೆಯುತ್ತಿರಬಹುದು. ಬೆಳಕೆಂದರೇ ಹಾಗೆ... ಒಂಥರ ಮನಸ್ಸಿನ ಜಂಕ್ ಫೈಲುಗಳನ್ನು ಕ್ಲೀನ್ ಮಾಡಿದ ಹಾಗೆ! ಅಥವಾ ಹೊಸ ಸಾಧ್ಯತೆಗಳಿಗೆ ವೇದಿಕೆ ಕಲ್ಪಿಸಿದ ಹಾಗೆ.

 

………

 

 

ಪ್ರತಿದಿನ ಬೆಳಗ್ಗೆ ಏಳುವಾಗ ಸಕಾರಾತ್ಮಕವಾಗಿ ಯೋಚಿಸಿ, ಇಂದಿನ ದಿನ ಚಂದಕೆ ಕಳೆಯುತ್ತೇನೆ ಅಂತ ನಿರ್ಧಾರ ಮಾಡಿ, ಯೋಗ ಮಾಡಿ, ಪ್ರಾಣಾಯಾಮ ಮಾಡಿ, ಓಡಾಡಿ, ನಗು ನಗುತ್ತಾ ಇರಿ, ,ಸೂರ್ಯೋದಯದ ಖುಷಿ ಆಸ್ವಾದಿಸಿ…” ಅಂತೆಲ್ಲ ಸಲಹೆಗಳನ್ನು ಕೇಳುತ್ತೇವೆ, ಓದುತ್ತೇವೆ ಅಲ್ವ? ಆದರೆ, ಕತ್ತಲಾದ ಕೂಡಲೇ ಜಗತ್ತು ಮಲಗುತ್ತದೇ ಅಂತ ಅರ್ಥ ಅಲ್ಲವೇ ಅಲ್ವ. ನಿದ್ರೆ ಮಾಡುವುದು ನಾವು ಮಾತ್ರ. ಭೂಮಿ ತಿರುಗುತ್ತಲೇ ಇರುತ್ತದೆ, ನೀರು ಹರಿಯುತ್ತಲೇ ಇರುತ್ತಲೆ, ಗಾಳಿ ಬೀಸುತ್ತದೆ, ಮಳೆ ಸುರಿಯುತ್ತದೆ, ವಿದ್ಯುತ್ ತಂತಿಯಲ್ಲಿ ಪ್ರವಹಿಸುತ್ತಲೇ ಇರುತ್ತದೆ, ಮೊಬೈಲ್ ತರಂಗಗಳು ಸಶಕ್ತವಾಗಿರುತ್ತವೆ, ಬಚ್ಚಲು ಒಲೆಯಲ್ಲಿ ಕೆಂಡ ನಿಗಿನಿಗಿಯಾಗೇ ಇರುತ್ತದೆ... ನಿಮ್ಮ ತಲೆ ಮೇಲಿನ ಫ್ಯಾನ್ ಕೂಡಾ ಯಥಾಶಕ್ತಿ ಇಡೀ ರಾತ್ರಿ ತಿರುಗುತ್ತಲೇ ಇರುತ್ತದೆ!

ಅಷ್ಟೇ ಯಾಕೆ... ರಾತ್ರಿ ಓಡಾಡುವ ಸಾವಿರಾರು ವಾಹನಗಳು ರಸ್ತೆಯುದ್ದಕ್ಕೂ ಗಮ್ಯ ಹುಡುಕುತ್ತಾ ಹೋಗುತ್ತಲೇ ಇರುತ್ತದೆ. ರಾತ್ರಿ ಪಾಳಿಯ ಪೊಲೀಸರು, ವಾಚ್ ಮ್ಯಾನ್ ಗಳು, ವೈದ್ಯರು, ದಾದಿಯರು, ಪೇಪರು, ಹಾಲು, ಹೂವು, ತರಕಾರಿ ಸಾಗಿಸುವವರು, ಪತ್ರಕರ್ತರು... ಇವರೆಲ್ಲ ದುಡಿಯುತ್ತಲೇ ಇರುತ್ತಾರೆ. ಅವರ ರಾತ್ರಿ, ಬೆಳಗ್ಗಿನ ವ್ಯಾಖ್ಯಾನ, ವ್ಯಾಪ್ತಿಯೇ ಬೇರೆ ಆಗಿರುತ್ತದೆ. ತಡರಾತ್ರಿ ಮನೆಗೆ ಬರುವವರು, ಮಧ್ಯರಾತ್ರಿಯೇ ಎದ್ದು ಕರ್ತವ್ಯಕ್ಕೆ ಹೋಗುವವರು ಪಾಲಿನ ರಾತ್ರಿಯ ದೃಷ್ಟಿಕೋನ ಬೇರೆಯೇ ಇರುತ್ತದೆ... ಹಾಗಾಗಿ ನಾವು ಮಲಗಿದ ತಕ್ಷಣ ಜಗತ್ತು ಮಲಗಿದೆ ಅಂತ ಅರ್ಥವಲ್ಲ... ಆದರೆ, ರಾತ್ರಿ ಸರಿದು ಬೆಳಕಾಗುವ ಹೊತ್ತಿಗೆ ನಮ್ಮ ಆಯುಷ್ಯ ಮಾತ್ರ ಕಳೆದು ಹೋಗಿರುವುದಲ್ಲ, ವಿಶಾಲವಾದ ದಿವಸ, ವಿಶಾಲವಾದ ಅವಕಾಶ, ವಿಶಾಲವಾದ ಸಾಧ್ಯತೆಗಳ ಗುಚ್ಛ ತೆರೆದಿರುತ್ತದೆ ಪುಟ್ಟ ಮಗುವಿನ ಹಾಗೆ... ಸೂರ್ಯ ನೆತ್ತಿ ಮೇಲೆ ಬಂದು ಕಂತುವ ವರೆಗೆ ಆ ಸಾಧ್ಯತೆ, ಅವಕಾಶಗಳ ವ್ಯಾಪ್ತಿ ಅವರವರ ಹಣೆಬರಹ, ಅವಕಾಶ, ಅದೃಷ್ಟದೊಂದಿಗೆ ಬದಲಾಗುತ್ತಲೇ ಇರುತ್ತದೆ. ಮತ್ತೊಂದು ರಾತ್ರಿಯ ವರೆಗೆ...!

-ಕೃಷ್ಣಮೋಹನ ತಲೆಂಗಳ (22/08/2020)

 



No comments: