ಜಾಲತಾಣಕ್ಕೊಂದು ಸಾಕ್ಷರತಾ ಆಂದೋಲನ ಬೇಡವೇ?

 




ಸರ್ಕಾರ ಸಾರ್ವಜನಿಕರ ಬಳಕೆಗೆ ಬಸ್ ನಿಲ್ದಾಣದಲ್ಲಿ ಹೊಸ ಶೌಚಾಲಯ ನಿರ್ಮಿಸುತ್ತದೆ. ದಿನದಲ್ಲಿ ಸರಾಸರಿ 100 ಮಂದಿ ಅದನ್ನು ಬಳಸುತ್ತಾರೆ ಅಂದಕೊಳ್ಳೋಣ. ಈ ಪೈಕಿ 100 ಮಂದಿಯೂ ಬಳಕೆಯ ಬಳಿಕ ಚೆನ್ನಾಗಿ ನೀರು ಹಾಕಿ ಫ್ಲಶ್ ಮಾಡಿ ಬಂದರೆ ಸದಾ ಕಾಲ ಶೌಚಾಲಯ ಸ್ವಚ್ಛವಾಗಿ, ಬಳಕೆಗೆ ಯೋಗ್ಯವಾಗಿಯೇ ಇರುತ್ತದೆ. ಒಂದು ವೇಳೆ 90 ಮಂದಿಯ ಬಳಿಕ 91ನೆಯ ವ್ಯಕ್ತಿ ನೀರು ಹಾಕದೆ ಗಲೀಜು ಮಾಡಿ ಬಂದರೆ 91ರಿಂದ 100ರ ತನಕ ವ್ಯಕ್ತಿಗಳ ಬಳಕೆಗೆ ಶೌಚಾಲಯ ಅಸಹ್ಯಕರವಾಗಿರುತ್ತದೆ, ಮಾತ್ರವಲ್ಲ. ನಂತರ ಬಂದವರೆಲ್ಲ ನೀರು ಹಾಕದೇ ಹೋಗುವುದನ್ನೇ ರೂಢಿ ಎಂದೂ ಅಂದುಕೊಳ್ಳಬಹುದಾದ ಸಾಧ್ಯತೆಯೂ ಇದೆ!

....

ಕೆಲವೊಮ್ಮೆ ಜಾಲತಾಣಗಳ ಅತಿರೇಕಗಳನ್ನು ನೋಡುವಾಗ ಹೀಗೆಯೇ ಅನ್ನಿಸುತ್ತದೆ. ಹೋಲಿಕೆ ಅತಿರೇಕ ಅನ್ನಿಸಿದ್ದರೆ ಕ್ಷಮಿಸಿ. ನಾವು 21ನೇ ಶತಮಾನದಲ್ಲಿದ್ದೇವೆ ಅನ್ನುತ್ತೇವೆ, ಮಾಹಿತಿ ತಂತ್ರಜ್ಞಾನ, ಜಾಗತಿಕ ಹಳ್ಳಿ, ಬೆರಳಿನ ತುದಿಯಲ್ಲೇ ಮಾಹಿತಿ, 4ಜಿ ಬಳಿಕ 5ಜಿಯ ಹೊಸ್ತಿಲಲ್ಲಿದ್ದೇವೆ. ನ್ಯಾನೋ, ವರ್ಚುವಲ್ ರಿಯಾಲಿಟಿ, ಆಗ್ಮಂಟೆಡ್ ರಿಯಾಲಿಟಿ ಇವಕ್ಕೆಲ್ಲ ಸಾಕ್ಷಿಗಳಾಗಿದ್ದೇವೆ. ಆದರೆ, ಇನ್ನೂ ನಮಗೆ ವಿಶಾಲ ಜಗತ್ತನ್ನು ಲೈವ್ ಆಗಿಸುವ ಜಾಲತಾಣಗಳನ್ನು ಹೇಗೆ ಬಳಸಬೇಕೆಂಬ ಶಿಷ್ಟಾಚಾರವಾಗಲಿ, ಜಾಲತಾಣಗಳು ಹೊರೆಯಾಗದಂತೆ ಹೇಗೆ ನಿರ್ವಹಿಸಬೇಕೆಂಬ ಕೆಲವು ಪ್ರಾಥಮಿಕ ಅರಿವಾಗಲಿ ಇಲ್ಲ ಎಂಬುದು ನನ್ನ ವೈಯಕ್ತಿಕ ಅನಿಸಿಕೆ. ಇಲ್ಲಿ ನಾವು ಎಂಬ ಪದ ಜಾಲತಾಣಗಳ ಬಳಕೆದಾರರ ಮನಃಸ್ಥಿತಿಯ ಪ್ರತೀಕ ಅಷ್ಟೇ..ಯಾರನ್ನೂ ವೈಯಕ್ತಿಕವಾಗಿ ಉದ್ದೇಶಿಸಿ ಹೇಳಿದ್ದಲ್ಲ.

.....

ಇಷ್ಟು ವರ್ಷಗಳ ತನಕದ ಜಾಲತಾಣಗಳ ಬಳಕೆ ಹಾಗೂ ಗಮನಿಸುವಿಕೆ ಆಧಾರದಲ್ಲಿ ಈ ಕೆಳಗಿನ ಅಂಶಗಳನ್ನು ಹೇಳಬಯಸುತ್ತೇನೆ... ಪಾಯಿಂಟ್ ಪ್ರಕಾರ ಹೇಳಿದರೆ ಹೆಚ್ಚು ಸ್ಪಷ್ಟವಾಗಬಹುದೆಂಬ ಹುಚ್ಚು ನಂಬಿಕೆ ಅಷ್ಟೇ. ಇಲ್ಲಿ ಜಾಲ ತಾಣ ಅಂತ ಹೇಳ್ತಿರೋದು ವಾಟ್ಸಪ್ ಗ್ರೂಪುಗಳು, ವಾಟ್ಸಪ್ ಸ್ಟೇಟಸ್ಸು, ಫೇಸ್ ಬುಕ್ ಗೋಡೆಗಳು, ಗ್ರೂಪುಗಳು...

 

1)      ನಮ್ಮಲ್ಲಿ ಬಹುತೇಕರಿಗೆ ಜಾಲತಾಣಗಳ ವ್ಯಾಪ್ತಿ, ಖಾಸಗಿತನದ ಉಲ್ಲಂಘನೆ, ಮೆಸೇಜು ಹಂಚಿಕೊಳ್ಳುವುದರ ಪರಿಣಾಮ, ಅದರ ತಲಪುವಿಕೆಯ ಅಗಾಧೆಯ ಅರಿವಿಲ್ಲ.

2)      ಇವತ್ತಿಗೂ ಹಲವರು ವಾಟ್ಸಪ್ ಹಾಗೂ ಫೇಸ್ಬುಕ್ ಗ್ರೂಪುಗಳು ತಮ್ಮದೇ ಆದ ನಿರ್ದಿಷ್ಟ ಉದ್ದೇಶಕ್ಕೆ ಹುಟ್ಟಿಕೊಂಡಿರುತ್ತವೆ. ನಮ್ಮನ್ನು ಆ ಗ್ರೂಪಿಗೆ ಸೇರಿಸಿದವರು ನಾವು ಆ ಗ್ರೂಪಿಗೆ ಪೂರಕವಾಗಿ ಸಂವಹನ ನಡೆಸಬೇಕು ಅನ್ನುವ ಕನಿಷ್ಠ ಪ್ರಜ್ಞೆ ಇರುವುದಿಲ್ಲ. ಗ್ರೂಪಿಗೆ ಸೇರಿದ ಅಥವಾ ಸೇರಿಸಿದ ತಕ್ಷಣ ತಮ್ಮ ಮೂಗಿನ ನೇರಕ್ಕೆ, ತಮಗೆ ಬೇಕಾದ ಹಾಗೆ ವರ್ತಿಸತೊಡಗುತ್ತಾರೆ. ಸರಳವಾಗಿ ಹೇಳಬೇಕಾದರೆ, ಗ್ರೂಪ್ ಇರುವುದೇ ತನ್ನ ನಿಲುವು ಪ್ರಚಾರಕ್ಕೆ ಹಾಗೂ ತನಗೆ ಬೇಕಾದಂತೆ ಮುಂದುವರಿಯುವುದಕ್ಕೆ ಅಂದುಕೊಳ್ಳುತ್ತಾರೆ.

3)      ವಾಟ್ಸಪ್ ಗ್ರೂಪುಗಳು ಒಂದು ಉದ್ದೇಶಕ್ಕೆ ಸೃಷ್ಟಿಯಾಗಿದೆ ಅಂತ ಗೊತ್ತಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದೆ ತನಗಿಷ್ಟ ಬಂದ ವಿಚಾರಗಳನ್ನು, ಗುಂಪಿಗೆ ಸೇರದ ಪೋಸ್ಟುಗಳನ್ನು ನಿರಂತರವಾಗಿ ಫಾರ್ವರ್ಡ್ ಮಾಡುವುದು, ಗ್ರೂಪಿನಲ್ಲಿ ವಿಷಯಕ್ಕೆ ಸಂಬಂಧಿಸಿ ಬರುವ ವಿಚಾರಗಳಿಗೆ ಸ್ಪಂದಿಸದೆ, ಅಥವಾ ಗಮನಿಸಿಯೂ ಉತ್ತರಿಸದೆ, ತನಗಿಷ್ಟ ಬಂದದ್ದು ಮಾತ್ರ ಫಾರ್ವರ್ಡ್ ಮಾಡುವುದು.

4)      ಗ್ರೂಪಿನಲ್ಲಿ ತನ್ನ ಹಾಗೆ ಇತರ ಎಷ್ಟು ಮಂದಿ ಇದ್ದಾರೆ? ನಾನು ಹಾಕುವ ಮೆಸೇಜಿನಿಂದ ಅವರಿಗೆ ಏನಾದರೂ ಪ್ರಯೋಜನ ಇದೆಯಾ? ಯಾರಾದರೂ ಇದನ್ನು ಓದುತ್ತಾರಾ? ಅಥವಾ ಇದೇ ಪೋಸ್ಟನ್ನು  ಈ ಹಿಂದೆ ಯಾರಾದರೂ ಹಾಕಿದ್ದಾರೆಯೇ? ಯಾವುದನ್ನೂ ಗಮನಿಸದೆ, ಅಡ್ಮಿನ್ ಎಂಬ ಬಡಪಾಯಿಯ ಮನವಿಯನ್ನೂ ಲೆಕ್ಕಿಸದೆ ಗುಂಪಿಗೆ ಸೇರದ ಬದಗಳನ್ನು ಪೋಸ್ಟು ಮಾಡುತ್ತಲೇ ಇರುವುದು

5)      ಹೊಸದಾಗಿ ವಾಟ್ಸಪ್ ಸೇರಿದವರಿಗೆ ಒಂದು ಅಭ್ಯಾಸ ಇದೆ, ತಮಗೆ ಯಾವುದೇ ಜೋಕು ಅಥವಾ ಕಪೋಲಕಲ್ಪಿತ ಸುದ್ದಿಗಳ ಕಟ್ಟಿಂಗ್ ಬರಲಿ, ಅವನ್ನು ತಾವು ಇರುವ ಅಷ್ಟೂ ಗ್ರೂಪುಗಳಿಗೆ ಕಣ್ಣು ಮುಚ್ಚಿ ಫಾರ್ವರ್ಡ್ ಮಾಡುವುದು. ನಂತರ ಆ ಗ್ರೂಪಿನ ಕಡೆ ತಲೆ ಹಾಕದಿರುವುದು. ಮತ್ತೊಮ್ಮೆ ಫಾರ್ವರ್ಡ್ ಮಾಡುವಾಗ ಮಾತ್ರ ಅತ್ತ ಇಣುಕುವುದು.!

6)      ಪ್ರತಿ ಗ್ರೂಪಿಗೂ ಒಬ್ಬ ಅಥವಾ ಒಂದಿಬ್ಬರು ಅಡ್ಮಿನ್ ಗಳು ಅಂತ ಇರ್ತಾರೆ. ಅವರು ಕೆಲವೊಮ್ಮೆ ಗ್ರೂಪಿನ ಉದ್ದೇಶಕ್ಕೆ ಸಂಬಂಧಿಸಿದ ಪೋಸ್ಟುಗಳನ್ನು ಕಷ್ಟ ಪಟ್ಟು ಟೈಪು ಮಾಡಿ ಹಾಕಿರುತ್ತಾರೆ. ಗ್ರೂಪಿನಲ್ಲಿ ಅದು ಎಲ್ಲರ ಗಮನ ಸೆಳೆಯುವುದು ಕಷ್ಟವೇ ಈಗೀಗ. ಅಡ್ಮಿನ್ ಏನಾದರೂ ಮಹತ್ವದ ಮಾಹಿತಿಯ ಪೋಸ್ಟು ಹಾಕಿದ ತಕ್ಷಣ ಒಂದಿಬ್ಬರು ಉದ್ದುದ್ದದ ಜೋಕು, ಹಾರ್ಟ್ ಅಟ್ಯಾಕ್ ಆದಾಗ ಏನು ಮಾಡಬೇಕು?” ಎಂಬಿತ್ಯಾದಿ ಮೈಲುದ್ದದ ಸಂದೇಶ ಫಾರ್ವರ್ಡ್ ಮಾಡ್ತಾರೆ (ಪ್ರತಿ ಗ್ರೂಪಿನಲ್ಲೂ ಇಂತಹ ಒಂದಿಬ್ಬರಾದರೂ ಇರುತ್ತಾರೆ). ಅಲ್ಲಿಗೆ ಅಡ್ಮಿನ್ ಹಾಕಿದ ಸಂದೇಶ ಅಡಿಗೆ ಬಿದ್ದಿರುತ್ತದೆ. ತಡವಾಗಿ ಗ್ರೂಪು ನೋಡಿದವ ಮೆಸೇಜುಗಳ ಪ್ರವಾಹ ಕಂಡು ತಬ್ಬಿಬ್ಬಾಗಿ ಕ್ಲಿಯರ್ ಚಾಟ್ ಕೊಟ್ಟು ಮಲಗ್ತಾನೆ. ಅಲ್ಲಿಗೆ ಅಡ್ಮಿನ್ ಬರೆದ ಪೋಸ್ಟು ಜೀವಂತ ಸಮಾಧಿಗೆ ಸೇರುತ್ತದೆ.

7)      ಸ್ನೇಹಿತರು, ಸಹಪಾಠಿಗಳು, ಕೌಟುಂಬಿಕ ಉದ್ದೇಶಗಳ ಹೊರತಾದ ಕೆಲವು ಗಂಭೀರ ಗ್ರೂಪುಗಳಿರುತ್ತವೆ, ವಿಷಯ ಪ್ರಧಾನ ಆಗಿರುವಂಥದ್ದು. ಅಂತಹ ಗ್ರೂಪುಗಳಲ್ಲೂ ಎದ್ದ ತಕ್ಷಣ ಗುಡ್ ಮಾರ್ನಿಂಗ್ ಹಾಗೂ ಮಲಗುವ ಮೊದಲು ಗುಡ್ ನೈಟ್ ಮೆಸೇಜು ಹಾಕುವುದು ಪರಂಪರೆಯ ಸಂಪ್ರದಾಯ ಎಂಬಂತೆ ಕೆಲವರು ವರ್ತಿಸುತ್ತಾರೆ. ಆಶ್ಚರ್ಯ ಎಂದರೆ, ಗ್ರೂಪಿಗೆ ಸಂಬಂಧಿಸದ ಮೆಸೇಜುಗಳಿಗೆ ಥಂಬ್ ರೈಸ್ ಮಾಡದ ಕೆಲವರೂ ಇಂತಹ ಮೆಸೇಜುಗಳಿಗೆ ಲೈಕು ಕೊಡುತ್ತಾರೆ ಹಾಗೂ ವಿಮರ್ಶೆ ಮಾಡ್ತಾರೆ.!

8)      ಗ್ರೂಪಿನಲ್ಲಿ ಜಾತಿ, ಕೋಮು, ರಾಜಕೀಯ ವಿಚಾರಗಳ ಕುರಿತು ಪೂರ್ವಾಗ್ರಹದ ಮೆಸೇಜು ಮಾಡುವುದು, ಅಸಭ್ಯ ಜೋಕು ಶೇರ್ ಮಾಡುವುದು, ಗ್ರೂಪಿನಲ್ಲಿ ಯಾರ್ಯಾರು ಇದ್ದಾರೆ ಎಂದು ಯೋಚಿಸದೆ, ಇದರಿಂದ ಇತರರಿಗೆ ಎಷ್ಟು ನೋವಾದೀತು ಎಂದು ಯೋಚಿಸದೆ, ಯಾರದರೂ ಕೆಣಕಲು ಕಾಯುತ್ತಾ ಕುಳಿತು, ಕೆಣಕಿದ ತಕ್ಷಣ ಇತರರಿಗೆ ತನ್ನಿಂದ ಆಗಬಹುದಾದ ಕಿರಿಕಿರಿ ಲೆಕ್ಕಿಸದೆ ಜಗಳಕ್ಕೆ ಇಳಿಯುವುದು, ತಾನೇ ಗುಲ್ಲೆಬ್ಬಿಸಿ ಬಳಿಕ ಗ್ರೂಪು ಬಿಟ್ಟು ಹೋಗುವುದು ಇತ್ಯಾದಿ ಮಾಡುವವರೂ ಇದ್ದಾರೆ.

9)      ತಮಗೆ ಹಿಡಿಸದ ವಿಷಯಗಳ ಪ್ರಚಾರಕ್ಕೆ, ದೂಷಣೆಗೆ ಕಂಡ ಕಂಡ ಗ್ರೂಪುಗಳನ್ನು ಬಳಸುವವರು, ತಮ್ಮ ವೈಯಕ್ತಿಕ ನಿಲುವುಗಳನ್ನು ಗ್ರೂಪಿನಲ್ಲಿ ಹೇರುವವರೂ, ಅಡ್ಮಿನ್ನಿಗೂ ಹೇಳದೆ ಗ್ರೂಪು ಬಿಡುವವರು, ಗ್ರೂಪಿನಲ್ಲಿ ಗಲಾಟೆ ಮಾಡುವಷ್ಟು ಮಾಡಿ, ಇಷ್ಟ ಇಲ್ಲದವರು ಬಿಟ್ಟು ಹೋಗಬಹುದು ಅಂತ ಫರ್ಮಾನು ಹೊರಿಡುಸವವರೂ  ಇದ್ದಾರೆ.

10)   ಇನ್ನು ಈಗೀಗ, ವಾಟ್ಸಪ್ ಗ್ರೂಪುಗಳು ತುಂಬಿ ತುಳುಕಾಡಿ, ಎಷ್ಟೋ ಬಾರಿ ಮಹತ್ವದ ಸಂದೇಶಗಳು ಎಲ್ಲ ಸದಸ್ಯರನ್ನು ತಲಪುವುದೇ ಇಲ್ಲ. ಅಂತಹ ಸಂದರ್ಭ, ವೈಯಕ್ತಿಕವಾಗಿ ಯಾರಿಗಾದರೂ ಸಂದೇಶ ಕಳುಹಿಸಿದರೆ ಅದಕ್ಕೆ ಒಂದಕ್ಷರದ ಉತ್ತರ ಕೊಡದೆ ತಣ್ಣಗೆ ಕುಳಿತಿರುವುದು. ಇದೊಂದು ಅತ್ಯಂತ ಅಚ್ಚರಿಯ ಮನಃಸ್ಥಿತಿ. ನಿಮ್ಮ ನಂಬರ್ ಅವಲ್ಲಿರುತ್ತದೆ, ನಿಮ್ಮ ಪರಿಚಯ ಮಾಡಿರುತ್ತೀರಿ, ನಿಮ್ಮ ಮೆಸೇಜು ಅವರನ್ನು ತಲುಪಿದ್ದಕ್ಕೆ ಡಬಲ್ ಬ್ಲೂ ಟಿಕ್ ಸಾಕ್ಷಿಯಾಗಿರುತ್ತದೆ. ಆದರೂ ಯಸ್, ನೋ, ಥಂಬ್, ಕಡೆಗಣನೆ ಯಾವುದೇ ಉತ್ತರ ಕೊಡದಿರುವುದು ಅತ್ಯತ ಅವಮಾನ ಉಂಟು ಮಾಡಬಹುದಾದ ಸಂದರ್ಭ, ಮಾತ್ರವಲ್ಲ, ಜಾಲತಾಣದಲ್ಲಿರುವ ಒಬ್ಬ ವ್ಯಕ್ತಿಗೆ ಸಂದೇಶ ಬಂದಾಗ ಕನಿಷ್ಠ ಪ್ರತಿಕ್ರಿಯೆ ಕೊಡಬೇಕೆಂಬ ಅರಿವು ಇಲ್ಲದಿರುವುದು ದುರದೃಷ್ಟಕರ. ಅವರು ಬಿಝಿ ಅಂತಾನೇ ಇಟ್ಟುಕೊಳ್ಳೋಣ. ಅವರ ಸ್ಟೇಟಸ್ ಅಪ್ಟೇಡ್ ಆಗುತ್ತಿರುತ್ತದೆ, ಗ್ರೂಪುಗಳಲ್ಲಿ ಸಕ್ರಿಯ ಇರುತ್ತಾರೆ. ಗ್ರೂಪುಗಳಲ್ಲಿ ಮೇಸೇಜುಗಳನ್ನು ನೋಡುತ್ತಿರುತ್ತಾರೆ. ಆದರೆ, ತಮಗೆ ವೈಯಕ್ತಿಕವಾಗಿ ಬಂದ (ಕಿರಿಕಿರಿ ಮಾಡದಂಥ) ಮೆಸೇಜಿಗೆ ಉತ್ತರಿಸಬೇಕು ಎಂಬ ಕನಿಷ್ಠ ಪ್ರಜ್ಞೆ, ಸೌಜನ್ಯವೂ ಹಲವರಿಗೆ ಇನ್ನೂ ಇಲ್ಲ (ತೀರಾ ವ್ಯಸ್ತ ಕೆಲಸಗಳು ಹಾಗೂ ಪೋಸ್ಟುಗಳಲ್ಲಿ ಇರುವವರನ್ನು ಹೊರತುಪಡಿಸಿ, ಇತರ ಜನಸಾಮಾನ್ಯರನ್ನು ಉದ್ದೇಶಿಸಿ ಹೇಳಿದ್ದು).

11)   ಭಾಷಾ ಪ್ರೇಮ ಬೇಕು ಅನ್ನುತ್ತೇವೆ, ಕನ್ನಡವೇ ನಮ್ಮಮ್ಮ ಅನ್ನುತ್ತೇವೆ. ಆದರೆ, ಬಳಸುವುದು ಮಾತ್ರ ಇಂಗ್ಲಿಷ್. ಇಲ್ಲಿ ಇಂಗ್ಲಿಷ್ ಬಳಕೆ ಬಗ್ಗೆ ನನ್ನದು ಯಾವುದೇ ತಕರಾರು ಇಲ್ಲ. ಸಂವಿಧಾನ ಎಲ್ಲರಿಗೂ ತಮಗೆ ಬೇಕಾದ ಭಾಷೆ ಬಳಸಲು ಅವಕಾಶ ಕೊಟ್ಟಿದೆ. ಆದರೆ, ಉದ್ಯೋಗ, ಬದುಕು ಬೇರೆ, ವೈಯಕ್ತಿಕ ವಿಚಾರಗಳು ಬೇರೆ, ಕೆಲಸಕ್ಕಾಗಿ, ಬದುಕಿಗಾಗಿ ಬೇರೆ ಬೇರೆ ಭಾಷೆ ಬೇಕು ನಿಜ. ಆದರೆ ನಮ್ಮವರಿಗೆ ಶುಭ ಕೋರುವಾಗ, ಸಂದೇಶ ಕಳುಹಿಸಿದಾಗ, ಓದುವಾತ ಇಬ್ಬರೂ ಕನ್ನಡಿಗರೇ ಆಗಿದ್ದಾಗಲೂ ಇಂಗ್ಲಿಷಿನಲ್ಲೇ ಶುಭ ಕೋರಬೇಕೇ...? ಆಯ್ತು.. ಭಾಷೆಯ ಆಯ್ಕೆ ಅವರವರ ಇಷ್ಟ. ಆದರೆ, happy married life ಸರಿಯಾ ಅಥವಾ happy marriage life ಸರಿಯಾ (ಇಂತಹ ಅದೆಷ್ಟೋ ಉದಾಹರಣೆ ನನ್ನಲ್ಲಿ ಇದೆ) ಎಂಬುದೂ ಸ್ಪಷ್ಟ ಇಲ್ಲದಿದ್ದಾಗ, ಸರಿಯಾದ ಸ್ಪೆಲ್ಲಿಂಗೂ ಬಾರದಿದ್ದಾಗ್ಯೂ ಇಂಗ್ಲಿಷಿನಲ್ಲೇ ಶುಭ ಕೋರುವ ಔಚಿತ್ಯ ಅಥವಾ ಹಠ ಯಾಕೆ..?. bro, sissy, dea  ಇತ್ಯಾದಿಗಳ ಬಳಕೆ ಸಮಕಾಲೀನತೆಯ ಪ್ರತೀಕ ಅಂದುಕೊಳ್ಳೋಣ. ನನ್ನ ಒಂದೇ ಒಂದು ಪ್ರಶ್ನೆ, ಇಂಗ್ಲಿಷ್ ಸರಿಯಾಗಿ ಗೊತ್ತಿಲ್ಲದ ಸಂದರ್ಭ ಇಂಗ್ಲಿಷಿನಲ್ಲೇ ತಪ್ಪು ಸ್ಪಲ್ಲಿಂಗಿನಲ್ಲಿ ಶುಭ ಕೋರುವ ಸ್ಟೇಟಸ್ ಹಾಕಿಕೊಳ್ಳುವುದು ಯಾರನ್ನು ಖುಷಿ ಪಡಿಸಲು?

12)   ತಂತ್ರಜ್ಞಾನ ಪ್ರಾದೇಶಿಕವಾಗಿಯೂ ಹೆಚ್ಚು ತಲುಪಿದಾಗ ಅದರ ಮಾರುಕಟ್ಟೆ ವಿಸ್ತರಿಸುತ್ತದೆ. ಹೀಗಾಗಿ, ಮೊಬೈಲಿನಲ್ಲೂ ಕನ್ನಡ ಟೈಪಿಂಗ್ ಅವಕಾಶ ಇದೆ. ತುಂಬ ಸುಲಭವಾಗಿ ಕನ್ನಡ ಬರೆಯಬಹುದು, ಓದಬಹುದು. ಬಹುತೇಕ ಎಲ್ಲ ಅಪ್ಲಿಕೇಶನ್ ನ್ನು ಕೂಡಾ ಕನ್ನಡದಲ್ಲೇ ಬಳಸಲು ಆಯ್ಕೆಗಳಿವೆ. ಹೀಗಾಗಿ ನನ್ನ ಮೊಬೈಲಿನಲ್ಲಿ ಕನ್ನಡ ಇಲ್ಲ, ನನಗೆ ಕನ್ನಡ ಟೈಪಿಂಗ್ ಬರುವುದಿಲ್ಲ ಎಂಬಿತ್ಯಾದಿ ನೆಪಗಳನ್ನು ಹೇಳಿದರೆ ಅದನ್ನು ನಂಬಲು ಕಷ್ಟವಾಗುತ್ತದೆ. ಭಾಷೆ ಎಂಬುದು ಬಳಕೆಯಿಂದ ಮಾತ್ರ ಉಳಿಯಲು ಸಾಧ್ಯ. ನವೆಂಬರ್ ಮಾಸದಲ್ಲಿ ಸ್ಟೇಟಸ್ಸಿನಲ್ಲಿ ಕನ್ನಡ ಬಾವುಟದ ಫೋಟೋ ಹಂಚಿಕೊಂಡು ಬಾಕಿ ಸಂದರ್ಭ ಅನಗತ್ಯ ಸಂದರ್ಭದಲ್ಲೂ ಇಂಗ್ಲಿಷನ್ನೇ ಬಳಸುತ್ತಾ ಇದ್ದರೆ, ಇತರರಿಂದ ಕನ್ನಡ ರಕ್ಷಣೆಯನ್ನುಹೇಗೆ ತಾನೆ ನಿರೀಕ್ಷಿಸಲು ಸಾಧ್ಯ.

13)   ಒಂದು ಹೇಳ ಹೆಸರಿಲ್ಲದ ಸುದ್ದಿಗಳು ನಮ್ಮ ಇನ್ಬಾಕ್ಸಿಗೆ ಫಾರ್ವರ್ಡ್ ಆಗಿ ಬಂದಾಗ, ಅದರ ಸತ್ಯಾಸತ್ಯತೆ ವಿವೇಚಿಸದೆ ಫಾರ್ವರ್ಡ್ ಮಾಡುವುದು, ಸ್ಟೇಟಸ್ಸಿಗೆ ಹಾಕುವ ಪ್ರವೃತ್ತಿ ಜಾಲತಾಣ ಜಗತ್ತಿನಲ್ಲಿ ಸುಶಿಕ್ಷಿತರು ಮಾಡುವ ಅತಿ ದೊಡ್ಡ ತಪ್ಪುಗಳಲ್ಲೊಂದು. ಸುದ್ದಿ ಎಲ್ಲಿಂದ ಬಂತು? ಯಾರು ಹೇಳಿದರು? ಸಂಬಂಧಿಸಿದವರ ಸಹಿ, ಲಾಂಛನ ಇದೆಯೇ...? ಇತ್ಯಾದಿ ವಿವೇಚಿಸದೆ. ಅವರು ಕಳಿಸಿದರು, ಇವರು ಕಳಿಸಿದರು, ಯಾರದ್ದೋ ಸ್ಟೇಟಸ್ಸಿನಲ್ಲಿ ಇತ್ತು ಇತ್ಯಾದಿ ಸಮರ್ಥನೆ ನೀಡಿ ಜಾಲತಾಣಗಳಲ್ಲಿ ಹಂಚಿಕೊಳ್ಳುವುದು ಅತ್ಯಂತ ಖೇದಕರ. ಈಗ ಕೊರೋನಾ ಸೋಂಕಿನಿಂದ ಮುಕ್ತರಾಗಿ ಚೇತರಿಸುತ್ತಿರುವ ದೇಶ ಕಂಡ ಮೇರು ಗಾಯಕರ ಸ್ಥಿತಿ ಗಂಭೀರ ಇದ್ದಾಗ ಅವರು ಇನ್ನಿಲ್ಲ ಎಂದು ಮೆಸೇಜು ಸೃಷ್ಟಿಸಿ, ಜನನ, ಮರಣ ದಿನಾಂಕ ನಮೂದಿಸಿ ಹಿಂದೆ ಮುಂದೆ ನೋಡದೆ ಹಂಚಿಕೊಂಡದ್ದು ಈ ಮನಃಸ್ಥಿತಿಯ ತಾಜಾ ಉದಾಹರಣೆ. ನಾವು ಮುಂದೂಡುವ ಅಥವಾ ಶೇರ್ ಮಾಡುವ ಒಂದು ಸುದ್ದಿ ಅಥವಾ ಪೋಸ್ಟು ನೂರಾರು ಜನರನ್ನು ಕೆಲವೇ ಕ್ಷಣಗಳಲ್ಲಿ ತಲಪುತ್ತದೆ ಎಂಬ ಪ್ರಜ್ಞೆ ನಮಗೆ ಬೇಕು.

14)   ಜಾಲತಾಣಗಳಲ್ಲಿ ನಮಗಿಷ್ಟವಾದ ಪೋಸ್ಟು, ಫೋಟೋ, ವಿಡಿಯೋಗಳನ್ನು, ಬರಹಗಳನ್ನು ಭಟ್ಟಿ ಇಳಿಸಿ ಹಂಚಿಕೊಳ್ಳಲು ಅವಕಾಶ ಇದೆ. ಈ ಥರ ಡೌನ್ ಲೋಡ್ ಮಾಡಿ ನಮ್ಮ ನಮ್ಮ ಸ್ಟೇಟಸ್ಸಿನಲ್ಲಿ ಹಾಕಿಕೊಳ್ಳುವಾಗ ಮೂಲ ಲೇಖಕರ ಹೆಸರು ಕತ್ತರಿಸುವುದು, ಕ್ರಾಪ್ ಮಾಡುವುದು, ಅಳಿಸಿಹಾಕುವುದು ವಿಕೃತ ಮನಃಸ್ಥಿತಿಯ ಸಂಕೇತ. ಈ ರೀತಿ ಮಾಡುವವರ ಪೈಕಿ ಹಲವರು ಮುಗ್ಧರಾಗಿ ಹೀಗೆ ವರ್ತಿಸುತ್ತಲೂ ಇರಬಹುದು. ಮೂಲ ಲೇಖಕರಿಗೆ ಮರ್ಯಾದೆ ನೀಡಬೇಕೆಂಬ ಪ್ರಜ್ಞೆ ಇಲ್ಲದೆ, ಆದರೆ, ಬಹುತೇಕರು ಯಾರೋ ಬರೆದದ್ದನ್ನು ತಮ್ಮದೇ ಪೋಸ್ಟು ಎಂಬಂತೆ ಗ್ರೂಪುಗಳಲ್ಲಿ ಹಂಚಿಕೊಳ್ಳುವುದು ದುರದೃಷ್ಟಕರ. ಕನಿಷ್ಠ ಹಂಚಿಕೊಳ್ಳುವ ಸಂದರ್ಭ ಇಂತಹ ಲೇಖಕರ ಕೃಪೆ, ಅಥವಾ ಫಾರ್ವರ್ಡೆಡ್ ಎಂದು ಕೂಡಾ ಉಲ್ಲೇಖಿಸಲು ಪುರುಸೊತ್ತಿಲ್ಲ ಎಂಬುದಕ್ಕೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ನೀವು ತೆಗೆದ ಫೋಟೋ, ಬರೆದ ಕವನ ಅಥವಾ ಸೂಕ್ತಿಗಳನ್ನು ಇನ್ಯಾರೂ ನಿಮ್ಮ ಹೆಸರು ಕತ್ತರಿಸಿ ಅವರ ಸ್ಟೇಟಸ್ಸಿನಲ್ಲಿ ಹಂಚಿಕೊಂಡರೆ ನಿಮಗೆಷ್ಟು ಬೇಸರ ಆದೀತು ಒಮ್ಮೆ ಯೋಚಿಸಿ.

15)   ತುಂಬ ಸಲ ಉದ್ದುದ್ದದ ಫಾರ್ವರ್ಡೆಡ್ ಸಂದೇಶಗಳನ್ನು ನಾವು ಓದುವುದಿಲ್ಲ. ಯಾಕಂದರೆ ನಮಗದರಲ್ಲಿ ಆಸಕ್ತಿ ಇರುವುದಿಲ್ಲ, ಅದರೊಳಗೆ ಏನಿದೆ ಎಂಬುದೂ ತಿಳಿದಿರುವುದಿಲ್ಲ. ಆದರೂ ಇನ್ಯಾರಾದರೂ ಓದಲಿ ಅಂತ ಗ್ರೂಪುಗಳಿಗೆ ಫಾರ್ವರ್ಡ್ ಮಾಡ್ತೇವೆ. ನಮಗೇ ಆಸಕ್ತಿ ಇಲ್ಲದ್ದು, ಓದಲು ಸಾಧ್ಯವಾಗದ ಕಸದಂಥ ವಿಚಾರಗಳನ್ನು ಇನ್ಯಾರೋ ಓದಲಿ, ಓದದಿದ್ದರೆ ಮತ್ತೂ ಮುಂದೆ ದೂಡಲಿ ಎಂಬ ಮನೋಭಾವದ ಮುಂದೂಡುವಿಕೆ ಯಾಕೆ...? ನಮ್ಮ ಮನೆಯ ಕಸವನ್ನು ಪಕ್ಕದ ಕಂಪೌಂಡಿಗೆ ಹಾಕಿದ ಹಾಗೆಯೇ ಅಲ್ಲವೇ!

16)   ಕೆಲವೊಮ್ಮೆ ನಾವು ಗೊತ್ತಿಲ್ಲದೆ ತಪ್ಪು ಅಥವಾ ಸುಳ್ಳು ಸಂದೇಶಗಳನ್ನು ಫಾರ್ವರ್ಡ್ ಮಾಡಿರುತ್ತೇವೆ. ಅದಾದ ಕೆಲ ಹೊತ್ತಿನ ಬಳಿಕ ಅದಕ್ಕೆ ಸ್ಪಷ್ಟೀಕರಣ ಅಥವಾ ಸತ್ಯಾಸತ್ಯತೆ ವಿವರಿಸುವ ಮೆಸೇಜು ಬಂದಿರುತ್ತದೆ. ಆದರೆ ಅದನ್ನು ನಾವು ಪುನಃ ಮುಂದೂಡುವ ಗೋಜಿಗೆ ಹೋಗುವುದಿಲ್ಲ. ಇದರಿಂದಾಗಿ, ಸುಳ್ಳು ಮಾತ್ರ ಪ್ರಚಾರ ಪಡೆಯುತ್ತದೆ. ಸತ್ಯ ಸೊರಗಿ ಹೋಗುತ್ತದೆ.

17)   ಫೇಸ್ಬುಕ್ಕಿನಲ್ಲಿ, ವಾಟ್ಸಪ್ ಗ್ರೂಪುಗಳಲ್ಲಿ ಸತ್ಯಕ್ಕಾಗಿ, ನ್ಯಾಯಕ್ಕಾಗಿ ಹೋರಾಡುವವರು, ಅವಾಚ್ಯ ಪದ ಬಳಸಿ ನಿಂದಿಸುವವರ ಸಂಖ್ಯೆಗೆ ಕೊರತೆಯಿಲ್ಲ. ಸಿಕ್ಕಿದ್ದೇ ಸಂದರ್ಭ ಎಂಬ ಹಾಗೆ ಒಂದು ಆರೋಪ ಹುಟ್ಟಿಕೊಂಡಾಗ ಆರೋಪಿಗೆ ಬಾಯಿಗೆ ಬಂದಂತೆ ಬಯ್ಯುವುದು, ಅವಹೇಳನಕಾರಿ ಪದ ಬಳಸುವುದು, ಆತನ ಸಮುದಾಯ, ಆತನದ್ದೇ ವೃತ್ತಿ ಮಾಡುವ ಇತರರು, ಆತನ ಊರು ಎಲ್ಲರಿಗೂ ನಿಂದಿಸುವುದು ಫ್ಯಾಶನ್ ಆಗಿ ಬಿಟ್ಟಿದೆ. ಇಂಥವರೆಲ್ಲ ಜನಪರ ವಿಚಾರಗಳಿಗೆ, ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವುದೇ ಇಲ್ಲ. ತಾರ್ಕಿಕ ಅಂತ್ಯವೇ ಕಾರಣ ಚರ್ಚೆಗಳಲ್ಲಿ ಪಾಲ್ಗೊಂಡು ಸಾದಿಸುವುದಾದರೂ ಏನು. ಬಳಸುವ ಭಾಷೆಯಲ್ಲಾದರೂ ಸಭ್ಯತೆ ಬೇಡವೇ...?

18)   ಇಷ್ಟು ಮಾತ್ರವಲ್ಲ, ಚಿಂತನೆಗಳು, ಪ್ರತಿಕ್ರಿಯೆಗಳು ಇಮೋಜಿಗಳಿಗೆ ಸೀಮಿತವಾಗಿಬಿಟ್ಟಿದೆ. ಇಮೋಜಿಗಳಲ್ಲೇ ಎಲ್ಲ ಮುಗಿಸಿ ಬಿಡುತ್ತೇವೆ. ಕಮೆಂಟು, ಶೇರ್ ಎಂಬಿತ್ಯಾದಿ ಅತ್ಯಂತ ಪರಿಣಾಮಕಾರಿ ಫೀಡ್ ಬ್ಯಾಕ್ ವ್ಯವಸ್ಥೆಯನ್ನು ಸದುಪಯೋಗ ಪಡಿಸುತ್ತಿಲ್ಲ. ಅದೇ ಕಾರಣಕ್ಕೆ ದುರಂತದ ಸುದ್ದಿಗಳನ್ನೂ ಲೈಕ್ ಮಾಡುತ್ತೇವೆ. ಲೈಕ್ ಎಂದರೆ ಮೆಚ್ಚುಗೆ ಎಂಬರ್ಥ ಹೊರತು ನೋಡಿದ್ದೇವೆ ಎಂದು ಅರ್ಥ ಅಲ್ಲ ಅಂತ ನಮಗೆ ಅರ್ಥವೇ ಆಗುವುದಿಲ್ಲ.... ಒಂದು ಇಮೋಜಿ ಬದಲು ಎರಡು ಪದ ಟೈಪ್ ಮಾಡಿ ಹಾಕಿದರೆ ಪೋಸ್ಟು ಮಾಡಿದಾತನಿಗೂ ಒಂದು ಸಮಾಧಾನ ಸಿಗುತ್ತದೆ. ಆದರೆ, ಓದದಿದ್ದರೂ, ನೋಡಿದ್ದೇವೆ ಅಂತ ಗೊತ್ತಾಗಲು ಯಾಂತ್ರಿಕವಾಗಿ ಲೈಕು ಮಾಡುತ್ತೇವೆ. ಮತ್ತೆ ಇನ್ನೊಂದು ಪೋಸ್ಟು ನೋಡಲು ಓಡುತ್ತೇವೆ. ಲೈಕು, ಕಮೆಂಟು ಮಾಡಿದವರಿಗೆ ಮಾತ್ರ ನಾನೂ ಲೈಕು ಕಮೆಂಟು ಮಾಡುವುದು ಎಂಬಿತ್ಯಾದಿ ಕೊಡುಕೊಳ್ಳುವಿಕೆ ವ್ಯವಹಾರವೂ ಇರುತ್ತದೆ.

19)   ಫೋಟೋ ಸ್ಪರ್ಧೆಗಳಿಗೆ ಸ್ಪರ್ಧಿಸಿದ ಮಕ್ಕಳ ಫೋಟೋಗೆ ಲೈಕ್ ಕೊಡಲೆಂದೇ ಪ್ರೆಂಡ್ ರಿಕ್ವೆಸ್ಟ್ ಕಳಿಸುವವರು, ಬೆನ್ನಿಗೆ ಬಿದ್ದ ಬೇತಾಳಗಳ ಹಾಗೆ ಒತ್ತಾಯಪಡಿಸಿ ಲೈಕ್ ಕೊಡಿಸುವವರು, ಲೈಕ್ ಕೊಟ್ಟಾದ ಮೇಲೆ ಗುರ್ತ ಇಲ್ಲದಂತೆ ಹೋಗುವವರು, ಗ್ರೂಪುಗಳಲ್ಲೂ ಅಷ್ಟೇ ತಮ್ಮ ಬಗ್ಗೆ, ತಮ್ಮ ಸಾಧನೆ ಬಗ್ಗೆ ಹೇಳಲು ಇದ್ದಾಗ ಮಾತ್ರ ಪ್ರತ್ಯಕ್ಷರಾಗಿ, ಇತರರ ಸಾಧನೆ, ಪೋಸ್ಟುಗಳಿಗೆ ಮೆಚ್ಚುಗೆ ವ್ಯಕ್ತಪಡಿಸುವ ಸಂದರ್ಭ ನಾಪತ್ತೆಯಾಗುವವರ ಸಂಖ್ಯೆಗೂ ಏನೂ ಕೊರತೆಯಿಲ್ಲ. ಯಾಂತ್ರಿಕ ವ್ಯವಸ್ಥೆಯಲ್ಲಿ ಮನಸ್ಸುಗಳೂ ಯಾಂತ್ರಿಕ ಆಗುತ್ತಿರುವುದು ವಿಷಾದಕರ.

20)   ಸಂವಹನ ಸುಲಭವಾಗಲು ಜಾಲತಾಣ ಇದೆಯೇ ಹೊರತು, ಮನಸ್ಸುಗಳನ್ನು ಯಂತ್ರವಾಗಿಸಲು ಅಲ್ಲ ಎಂಬುದು ಅರ್ಥವಾಗಬೇಕು. ಆದರೆ, ಈ ಮೇಲೆ ಹೇಳಿದ 19 ಅಂಶಗಳ ಜೊತೆಗೆ ಇನ್ನೂ ನೂರಾರು ಅಂಶಗಳನ್ನು ಬೊಟ್ಟು ಮಾಡಬಹುದು. ಇವೆಲ್ಲ ಸೂಕ್ಷ್ಮತೆ ಕಳೆದುಕೊಂಡ ಮನಃಸ್ಥಿತಿಗೂ, ನಿರ್ಲಿಪ್ತ ವರ್ತನೆಗೂ ಉದಾಹರಣೆಗಳು ಅಷ್ಟೇ... ಇಂಥಹ ಮನಃಸ್ಥಿತಿಗಳು ಸಂವಹನವನ್ನು ಬೆರಳ ತುದಿಗೆ ತಲುಪಿಸುತ್ತಿರುವುದ ಜೊತೆಗೆ ಮನಸ್ಸುಗಳನ್ನು ದೂರ ದೂರವಾಗಿಸುತ್ತಿವೆ ಎಂಬುದೂ ಅಷ್ಟೇ ಸತ್ಯ!



1990 ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಸಾಕ್ಷರತಾ ಆಂದೋಲನ ನಡೆದಿತ್ತು. ಬಹುಶಃ ಈಗಲೂ ನಾವು ಜಾಲತಾಣಗಳಲ್ಲಿ ಅನಕ್ಷರಸ್ಥರಾಗಿದ್ದೇವೆ ಅನಿಸುತ್ತಿದೆ. ಅಂಥದ್ದೇ ಅಭಿಯಾನ ಬೇಕು ಅನಿಸುತ್ತಿದೆ. ನಾವೇ ರೂಪಿಸಿಕೊಂಡ ವ್ಯವಸ್ಥೆಯೊಂದನ್ನು ಅವ್ಯವಸ್ಥಿತವಾಗಿ ಬಳಸುವ ಮೂಲಕ ವ್ಯವಸ್ಥೆಯನ್ನು ಸಂಕೀರ್ಣಗೊಳಿಸುತ್ತಿದ್ದೇವೆ. ಮನಸುಗಳು ನಡುವಿನ ಬಂಧವನ್ನು ಕೂಡಾ... ಜಾಲತಾಣ ಹೊರೆ ಅಂತ ಯಾರಿಗಾದರೂ ಅನಿಸಿದರೇ ಅದಕ್ಕೆ ಬಳಕೆದಾರರ ಮನಃಸ್ಥಿತಿಯೇ ಕಾರಣ ಹೊರತು ಇನ್ಯಾರೋ ಅದರ ಸೃಷ್ಟಿಕರ್ತರು ಹೊಣೆಯಾಗಲಾರರು!

 

-ಕೃಷ್ಣಮೋಹನ ತಲೆಂಗಳ (03/09/2020)

 

No comments: