ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ



(14.01.2020ರಂದು ರಾತ್ರಿ 9.16ಕ್ಕೆ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾದ ಭಾಷಣ)

ಮಕರ ಸಂಕ್ರಮಣ ಸೂರ್ಯದೇವನನ್ನು ಆರಾಧಿಸುವ ಹಬ್ಬ.  ನಮ್ಮ ಕಣ್ಣಿಗೆ ಕಾಣುವ ಪ್ರತ್ಯಕ್ಷ ದೈವ ಸೂರ್ಯ. ಸೂರ್ಯನ ಬೆಳಕಿಲ್ಲದೆ ಜೀವಿಗಳಿಗೆ ಬದುಕೇ ಇಲ್ಲ. ಅಂತಹ ಸೂರ್ಯನಿಂದಾಗಿಯೇ ಆಚರಿಸುವ ಹಬ್ಬ ಮಕರ ಸಂಕ್ರಮಣ. ಸೂರ್ಯನು ಮಕರ ವೃತ್ತ ಅಥವಾ ಮಕರ ರಾಶಿಯನ್ನು ಪ್ರವೇಶಿಸಿದ ಬಳಿಕ ಸಂಕ್ರಮಣ ಕಾಲದಿಂದ ಉತ್ತರಾಯಣ ಆರಂಭವಾಗುತ್ತದೆ. ಆಧ್ಯಾತ್ಮಿಕ ಹಾಗೂ ವೈಜ್ಞಾನಿಕವಾಗಿಯೂ ವೈಶಿಷ್ಟ್ಯತೆ ಹೊಂದಿದ ಹಬ್ಬ ಮಕರ ಸಂಕ್ರಮಣ ಅಥವಾ ಸಂಕ್ರಾಂತಿ.
ಋತುಮಾನ ಬದಲಾವಣೆ, ಬೇಸಾಯ, ಸಮೃದ್ಧಿಯ ಸಂಕೇತವಾದ ಮಕರ ಸಂಕ್ರಮಣ ಕರಾವಳಿ ಭಾಗದಲ್ಲಿ ಅದ್ಧೂರಿಯಿಂದ ಆಚರಿಸುವ ಹಬ್ಬ ಅಲ್ಲದಿದ್ದರೂ ದಕ್ಷಿಣ ಭಾರತದವರ ಪಾಲಿಗೆ ಇದೊಂದು ಮಹತ್ವದ ಹಬ್ಬವಂತೂ ಹೌದು.

"ಮಕರ ಸಂಕ್ರಾಂತಿ" ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜನವರಿ 14 ಅಥವಾ 15ರಂದು ಆಚರಣೆಯಾಗುತ್ತದೆ. ಈ ಕಾಲದಲ್ಲಿ ಭೂಮಿಯ ಉತ್ತರಾರ್ಧಗೋಳದಲ್ಲಿ ಚಳಿಯಿಂದ ಹಿಮ್ಮುಖವಾಗಿ ಬೆಚ್ಚನೆಯ ವಾತಾವರಣ ಆರಂಭವಾಗಿದ್ದು ಇದು, ಬೆಳೆ ಕಟಾವಿನ ಕಾಲವೂ ಆಗಿರುತ್ತದೆ. ಕರ್ನಾಟಕದ ರೈತರಿಗೆ ಇದು ಸುಗ್ಗಿ ಅಥವಾ ಸುಗ್ಗಿಯ ಹಬ್ಬ.
ಬೇಸಾಯದ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಸಮೃದ್ಧಿಯ ಸಂಕೇತ, ಸೂರ್ಯನ ಆರಾಧನೆಯ ಪ್ರತೀಕ, ಉತ್ಸವಾದಿಗಳುವೈಭವದಿಂದ ನಡೆಯುವ ದಿನವಾಗಿ ಮಕರ ಸಂಕ್ರಾಂತಿ ನಮ್ಮನ್ನು ಆವರಿಸಿಕೊಳ್ಳುತ್ತದೆ. ಕರ್ನಾಟಕದಲ್ಲಿ
ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು ಎಳ್ಳು ಬೆಲ್ಲದ ಆಚರಣೆ. ಮನೆಯಲ್ಲಿ ಎಳ್ಳು ಬೆಲ್ಲ ತಯಾರಿಸಿ ಸುತ್ತ ಮುತ್ತಲಿನ ಮನೆಗೆ ಎಳ್ಳನ್ನು ಹಂಚಿ ಶುಭಾಶಯಗಳನ್ನು ಕೋರಲಾಗುತ್ತದೆ. ಸಂಪ್ರದಾಯವನ್ನು "ಎಳ್ಳು ಬೀರುವುದು" ಎಂದು ಕರೆಯುತ್ತಾರೆ. ನೆರೆಹೊರೆಯವರಿಗೆ "ಎಳ್ಳುಹಂಚುವುದು" ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಆಚರಣೆಯಲ್ಲಿದೆ. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು. ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ "ಎಳ್ಳು ಬೆಲ್ಲ" ತಯಾರಿಸುತ್ತಾರೆ.
ಹೆಣ್ಣುಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿ ಒಂದು ತಟ್ಟೆಯಲ್ಲಿ ಎಳ್ಳುಬೆಲ್ಲದೊಂದಿಗೆ ಮನೆ ಸಮೀಪದ ಜನರನ್ನು ಮತ್ತು ಸಂಬಂಧಿಗಳನ್ನು ಭೇಟಿಯಾಗಿ ಎಳ್ಳುಬೆಲ್ಲವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. "ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ" ಎಂದು ಹೇಳಿಕೊಳ್ಳುತ್ತಾರೆ.
ಕರ್ನಾಟಕದ ಕೆಲವು ಭಾಗಗಳಲ್ಲಿ, ಹೊಸದಾಗಿ ಮದುವೆಯಾದ ಮಹಿಳೆಯರು ತಮ್ಮ ಮದುವೆಯ ಮೊದಲ ವರ್ಷದಿಂದ ಐದು ವರ್ಷಗಳ ಕಾಲ ಬಾಳೆಹಣ್ಣುಗಳನ್ನು ಮುತ್ತೈದೆಯರಿಗೆ ಕೊಡುವ ಸಂಪ್ರದಾಯ ಇದೆ. ಉತ್ತರ ಕರ್ನಾಟಕದಲ್ಲಿ, ಸಮುದಾಯದ ಸದಸ್ಯರೊಂದಿಗೆ ಗಾಳಿಪಟ ಹಾರಿಸುವ ಸಂಪ್ರದಾಯವಿದೆ. ಮಹಿಳೆಯರು ಗುಂಪು ಗುಂಪಾಗಿ ರಂಗೋಲಿಯನ್ನು ಬಿಡಿಸುವುದು ಸಂಕ್ರಾಂತಿಯ ಮತ್ತೊಂದು ಜನಪ್ರಿಯ ಆಚರಣೆ. ದನಕರುಗಳನ್ನು ಸಿಂಗರಿಸುವುದು, ಮೆರವಣಿಗೆ ಮಾಡುವುದು ಇನ್ನೊಂದು ಧಾರ್ಮಿಕ ಪದ್ಧತಿ. ಪಶುಗಳಿಗೆ "ಕಿಚ್ಚು ಹಾಯಿಸುವುದು" ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಸಾಮಾನ್ಯ ಆಚರಣೆ. ರೈತರು ತಮ್ಮ ಹೊಸ ಬೆಳೆಯಾದ ಭತ್ತ, ಕಬ್ಬು, ಎಳ್ಳು ಇತ್ಯಾದಿಗಳನ್ನು ಹೊಲಗಳಿಂದ ಮನೆಗೆ ತಂದು ಅವುಗಳನ್ನು ದಾನ ಮಾಡಿದ ನಂತರ ಸೇವಿಸುವ ಪದ್ಧತಿ ಹಿಂದಿನಿಂದಲೂ ಇದೆ.

ಇನ್ನು ದೇಶದ ಇತರೆಡೆಗಳಲ್ಲೂ ಸಂಕ್ರಾಂತಿ ಆಚರಣೆ ವೈವಿಧ್ಯಮಯವಾಗಿದೆ.

ತಮಿಳುನಾಡಿನಲ್ಲಿ ಮತ್ತು ಆಂಧ್ರ ಪ್ರದೇಶದಲ್ಲಿ ಮಕರ ಸಂಕ್ರಾಂತಿಯನ್ನು "ಪೊಂಗಲ್ " ಹಬ್ಬವೆಂದು ಮೂರು ಅಥವಾ ನಾಲ್ಕು ದಿನಗಳ ಕಾಲ ಆಚರಿಸುತ್ತಾರೆ. ತಮ್ಮ ಬೆಳೆಯ ಮೊದಲ ಕೊಯ್ಲನ್ನುಮನೆಗೆ ತಂದು ಹೊಸ ಅಕ್ಕಿಯನ್ನು ಹಾಲಿನೊಂದಿಗೆ ಬೇಯಿಸಿ ಒಂದು ಬಗೆಯ ಸಿಹಿ ತಿಂಡಿಯಾದ 'ಚಕ್ಕರಪೊಂಗಲ್"ನ್ನು ತಯಾರಿಸುತ್ತಾರೆ. ಈ ಖಾದ್ಯವನ್ನು ಮೊದಲು ಸೂರ್ಯನಿಗೆ ಅರ್ಪಿಸಲಾಗುತ್ತಿದ್ದು ನಂತರ ಪ್ರಸಾದ ರೂಪದಲ್ಲಿ ಎಲ್ಲರಿಗೂ ವಿತರಿಸಲಾಗುತ್ತದೆ. ಜನರು ಈ ದಿನದಂದು 'ಹೊಸಅಕ್ಕಿ ಊಟ'ವನ್ನು ತಯಾರಿಸಿ ಧಾನ್ಯಲಕ್ಷ್ಮಿಯನ್ನು ಪೂಜಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಮನೆ ಮುಂದೆ ವರ್ಣರಂಜಿತ "ಕೋಲಂ" ಎಂದರೆ ರಂಗೋಲಿಯನ್ನು ರಚಿಸುತ್ತಾರೆ. ಗೋಪೂಜೆ ಮಾಡುವ ಮಾಟ್ಟು ಪೊಂಗಲ್ ಮತ್ತು ಗೂಳಿಯನ್ನು ಪಳಗಿಸುವ ಜಲ್ಲಿಕಟ್ಟು ಕ್ರೀಡೆ ಕೂಡಾ ತಮಿಳುನಾಡಿನ ಸಂಕ್ರಾಂತಿಯ ವಿಶೇಷಗಳಾಗಿವೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಬಿಡುವ ಸಂಪ್ರದಾಯವುಂಟು.
ಮಹಾರಾಷ್ಟ್ರದಲ್ಲಿಯೂ, ಎಳ್ಳು ಮತ್ತು ಸಕ್ಕರೆಯ ಕುಸುರಿಕಾಳನ್ನು ಬಂಧು ಮಿತ್ರರಿಗೆ ಹಂಚುವ ರೂಢಿ ಇದೆ. ಪ್ರಮುಖವಾಗಿ ಅವರು, ಎಳ್ಳಿನ ಉಂಡೆ ಗಳನ್ನು ಹಂಚುತ್ತಾರೆ.  ಪಂಜಾಬ್ ಮತ್ತು ಹರಿಯಾಣಗಳಲ್ಲಿ ಸಂಕ್ರಾಂತಿಗೆ "ಲೋಹರಿ," ಅಸ್ಸಾಂನಲ್ಲಿ ಮಾಘ, ಬಿಹು ಎಂದು ಕರೆಯುತ್ತಾರೆ.
 
ಕೇರಳದ ಶಬರಿಮಲೆಯಲ್ಲಿ ಮಕರ ಸಂಕ್ರಾಂತಿ ಆಚರಣೆ ವಿಶ್ವ ಪ್ರಸಿದ್ಧಿ ಹೊಂದಿದೆ. ಆ ದಿವಸ ಕೇರಳದ ಶಬರಿಮಲೆಯಲ್ಲಿ ಕಾಣುವ ಮಕರಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಅಯ್ಯಪ್ಪ ವ್ರತಾಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನವನ್ನು ಪಡೆಯುತ್ತಾರೆ. "ಮಕರ ವಿಳಕ್ಕು"ಎಂದು ಕರೆಯಲ್ಪಡುವ ಜ್ಯೋತಿಯು ಶಬರಿಮಲೆಯ ಬೆಟ್ಟದಿಂದ ಮೂರು ಬಾರಿ ಗೋಚರವಾಗುತ್ತದೆ. ಆ ದಿನ ಶಬರೀಮಲೆ ವ್ರತಧಾರಿಗಳು ಶಬರೀಮಲೆ ಯಲ್ಲಿ ದೇವರ ದರ್ಶನದ ಬಳಿಕ ಮಕರ ಜ್ಯೋತಿ ನೋಡಿ ಹಿಂತಿರುಗಿ ಬರುತ್ತಾರೆ. ಮಕರ ಜ್ಯೋತಿ ದರ್ಶನದ ಬಳಿಕ ಹೆಚ್ಚಿನ ದೇವಾಲಯಗಳಲ್ಲಿ ದೀಪಾರಾಧನೆ ನಡೆಯುತ್ತದೆ. ಕೇರಳದಲ್ಲಿ ಅಂದು ಇತರ ಸಂಕ್ರಮಣ ದಿನ ‌ದ ರೀತಿಯಲ್ಲೇ ದೈವಸ್ಥಾನಗಳಲ್ಲಿ ತಂಬಿಲ, ಪೂಜೆಗಳು ನಡೆಯುತ್ತವೆ. ಮಕರ ಸಂಕ್ರಾತಿಯ ದಿನದಂದು ಪವಿತ್ರ ಸ್ಥಳಗಳಾದ ಪ್ರಯಾಗ, ಹರಿದ್ವಾರ್, ಉಜ್ಜೈನಿ ಮತ್ತು ನಾಸಿಕ್ ಮೊದಲಾದೆಡೆಗಳಲ್ಲಿ ವಿಶೇಷ ಮೇಳಗಳು ನಡೆದು ಬರುತ್ತಿದ್ದು, 12 ವರುಷಕ್ಕೊಮ್ಮೆ ಆಚರಿಸುವ ಕುಂಭ ಮೇಳವು ಸಂಕ್ರಾತಿಯ ದಿನದಂದು ಮೇಲಿನ ಯಾವುದಾದರೊಂದು ಕ್ಷೇತ್ರಗಳಲ್ಲಿ ನೆರವೇರುತ್ತದೆ. ವರ್ಷಂಪ್ರತಿ ಚಿಕ್ಕ ಕುಂಭ ಮೇಳವೆಂದು ಕರೆಯಲ್ಪಡುವ ಮಾಘ ಮೇಳ ಪ್ರಯಾಗದಲ್ಲಿಯೂ, ಗಂಗಾಸಾಗರ ಮೇಳವು ಗಂಗಾನದಿಯಲ್ಲಿಯೂ ಮಕರ ಸಂಕ್ರಾಂತಿಯ ದಿನದಂದು ನೆರವೇರುತ್ತವೆ.
ದೇಶ ಸುತ್ತಿದ್ದಾಯಿತು.. ನಮ್ಮ ನೆರೆಯ ಜಿಲ್ಲೆಗಳು, ನಮ್ಮೂರಲ್ಲೇ ಸಂಕ್ರಾಂತಿಯ ಸಂಭ್ರಮ ಹೇಗಿರುತ್ತದೆಂದು ನೋಡುವುದಾದರೆ...
ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನಲ್ಲಿ ಭೂಮಿ ಹುಣ್ಣಿಮೆಯಂದು ಭೂಮಿ ಪೂಜೆ ಸಂದರ್ಭದಲ್ಲಿ ಗದ್ದೆಯಲ್ಲಿ ಹೂತಿಟ್ಟ ಬುತ್ತಿ (ಕೊಟ್ಟೆ ಕಡಬು)ಯನ್ನು ಸಂಕ್ರಾಂತಿ ಸಂದರ್ಭ ಹೊರತೆಗೆದು ಅದನ್ನು ಗೊಣಬೆ (ಭತ್ತದ ಗೊಣಬೆ/ ರಾಶಿ)ಯಲ್ಲಿ ಹೂತಿಡುತ್ತಾರೆ. ಅದರೊಂದಿಗೆ ಸಂಕ್ರಾಂತಿ ದಿನ ದೋಸೆ ಮಾಡಿ ಅದನ್ನೂ ಗೊಣಬೆಯಲ್ಲಿ ಹೂತಿಡುವ ಕ್ರಮ ಇದೆ. ಚಿಕ್ಕಮಗಳೂರು ಭಾಗದಲ್ಲಿ ಸಂಕ್ರಾಂತಿಯ ದಿನದಂದು ಮಿಂದು, ಹೊಸ ಉಡುಗೆ ಉಟ್ಟು, ಮನೆದೇವರಿಗೆ ಕೈ ಮುಗಿದು,ಸಿಪ್ಪೆ ಸಮೇತ  ಬೇಯಿಸಿದ ಸೊಗಡಿನ ಅವರೇಕಾಳು, ಗೆಣಸನ್ನು ತಿನ್ನುತ್ತಾರೆ.
ಮದ್ಯಾಹ್ನದ ವಿಶೇಷ ಅಡುಗೆ ಅಂದರೆ ಖಿಚಡಿ. ಕೆಲವರಿಗೆ ಅಂದು ನಾಗರ ಹಬ್ಬವೂ ಸಹ ಹೌದು. ಅಂದು ಉಪವಾಸವಿದ್ದು, ಹುರುಳೀಬೇಳೆ , ಅಕ್ಕಿ ಹಾಕಿ ತಯಾರಿಸಿದ ಖಿಚಡಿ, ವಿಶೇಷವಾಗಿ ಮಾಡಿದ ಅವರೇಕಾಳಿನ ಸಾರು(ನಾಗರ ಸಾರು),  ತುಪ್ಪ, ಬಾಳೆಹಣ್ಣು, ಬೆಲ್ಲ, ಹಾಲು ಎಲ್ಲವನ್ನೂ ಬುಟ್ಟಿಯಲ್ಲಿ ಇಟ್ಟು ಹೊಲಕ್ಕೆ ಹೊತ್ತುಕೊಂಡು ಹೋಗಿ ನಾಗರ ಕಲ್ಲಿಗೆ ತನಿ ಎರೆದು ಅಲ್ಲಿಯೇ ಸಾಮೂಹಿಕವಾಗಿ ಉಂಡು ಬರ್ತಾರೆಸಾಮಾನ್ಯವಾಗಿ ಹಬ್ಬಕ್ಕೆ ಎಲ್ಲೆಲ್ಲೋ ಚದುರಿಹೋದ ಅಣ್ಣ ತಮ್ಮಂದಿರು ಒಂದುಗೂಡುವುದೇ ವಿಶೇಷ. ಸಂಜೆ ಮನೆಮನೆಗೆ ಹೋಗಿ  ಸಣ್ಣಹೆಣ್ಣು ಮಕ್ಕಳು ಮೊದಲೇ ತಯಾರಿಸಿದ ಎಳ್ಳು ಬೆಲ್ಲಸಕ್ಕರೆ ಅಚ್ಚಿನೊಡನೆ ಕಬ್ಬು, ಎಲಚೀಹಣ್ಣು ಎಲ್ಲಾ ಬೀರಿ 'ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತಾಡಿ' ಎಂದು  ಬರ್ತಾರೆಎತ್ತುಗಳಿರುವ ರೈತರು ತಮ್ಮ ಎತ್ತುಗಳಿಗೆ ಕಿಚ್ಚು ಹಾಯಿಸ್ತಾರೆ.

ಕುಂದಾಪುರ ಭಾಗದಲ್ಲಿ
ಕೆಲವು ಕಡೆ ಬೇಸಾಯ ಮಾಡುವ ಮನೆಗಳಲ್ಲಿ ಕೊಯ್ಲು ಮುಗಿದ ಅನಂತರ ಅಂಗಳದಲ್ಲಿ ಭತ್ತದ ತಿರಿ ಕಟ್ಟುವ ಸಂಪ್ರದಾಯವಿದೆ. ಮಕರ ಸಂಕ್ರಾಂತಿಯಂದು ತಿರಿಯಲ್ಲಿ ಒಂದು ಸಣ್ಣ ರಂಧ್ರ ಮಾಡಿಸ್ವಲ್ಪ ಭತ್ತ ಹೊರ ತೆಗೆದು ಪೂಜಿಸುವುದರಿಂದ ಮುಂದೆ ಯಾವಾಗ ಅಗತ್ಯವಿದ್ದರೂ ತಿರಿಯಿಂದ ಆಗಾಗ ಭತ್ತವನ್ನು  ತೆಗೆಯಲು ಅವಕಾಶವಿರುತ್ತದೆ. ಮಕರ ಸಂಕ್ರಾಂತಿಯಂದೇ ತೆಗೆದರೆ ಭತ್ತ ವೃದ್ಧಿಸುತ್ತದೆ ಎನ್ನುವ ನಂಬಿಕೆ ಜನರಲ್ಲಿ ನೆಲೆವೂರಿದೆ
ಸಂಕ್ರಾಂತಿ ಸಂದರ್ಭ ಕೃಷಿ ಚಟುವಟಿಕೆಗಳು ಕಡಿಮೆ ಇರುವುದರಿಂದ ಕಂಬಳದಂಥ ಕ್ರೀಡೆಗಳು ಸಮಯದಲ್ಲಿ ಹೆಚ್ಚು. ಕುಂದಾಪುರದ ಹುಗ್ಗಿ, ಬೆಲ್ಲ ಹುಣಿಸೆ ಹಣ್ಣಿನ ಗೊಜ್ಜು ಸಂಕ್ರಾಂತಿಯ ವಿಶೇಷ ಖಾದ್ಯಗಳು.
ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ ದೇವರಿಗೆ ಇಷ್ಟದ ಹೂವು ಕುಂದಾಪುರ ತಾಲೂಕಿನ ಹೆಮ್ಮಾಡಿ ಸೇವಂತಿಗೆ. ತಮ್ಮ ಭತ್ತದ ಕೃಷಿ ಮುಗಿದ ಬಳಿಕ, ಆಗಸ್ಟ್, ಸೆಪ್ಟೆಂಬರಿನಲ್ಲಿ ಸೇವಂತಿಗೆ ಕೃಷಿ ಆರಂಭಿಸುವ ಹೆಮ್ಮಾಡಿಯ ರೈತರಿಗೆ ಜನವರಿ ಹೊತ್ತಿಗೆ ಬೆಳೆ ಕೈ ಸೇರುತ್ತದೆ. ಮಕರ ಸಂಕ್ರಮಣದಂದು ಮಾರಣಕಟ್ಟೆಯ ಬ್ರಹ್ಮಲಿಂಗನಿಗೆ ಸೇವಂತಿಗೆ ಹೂವು ಅರ್ಪಿಸಿದ ನಂತರವೇ ಇತರ ಗೆಂಡ ಹಬ್ಬ, ಗೆಂಡ, ಕೋಲಗಳಿಗೆ ಹೆಮ್ಮಾಡಿಯ ಕೃಷಿಕರು ಹೂವು ಮಾರಾಟ ಮಾಡುತ್ತರೆ.

ಸಂಕ್ರಾಂತಿಯೆಂದರೆ ಕರಾವಳಿ ಭಾಗದಲ್ಲಿ ಜಾತ್ರೆಗಳಿಗೆ ವಿಶೇಷ. ಸಂಕ್ರಾಂತಿಯ ಸಂದರ್ಭದಲ್ಲೇ ಉಡುಪಿ ಮೂರು ರಥ, ಸುರತ್ಕಲ್ ಸದಾಶಿವ ರಥ, ಸಜಿಪ ಜಾತ್ರೆ, ವಿಷ್ಣುಮಂಗಲ ಮಹಾವಿಷ್ಣು ಮಹೋತ್ಸವ, ಅನಾರು ದುರ್ಗಾ ಧ್ವಜ, ಕುಂಬಳೆ ಧ್ವಜ, ಕದ್ರಿ ತೀರ್ಥ, ವಿಟ್ಲ ಪಂಚಲಿಂಗೇಶ್ವರ ಧ್ವಜ, ನೆಟ್ಟಣಿಗೆ ಧೂಮಾವತಿ ನೇಮ, ಮಾರಣಕಟ್ಟೆ ಜಾತ್ರೆ, ಸಾಲಿಗ್ರಾಮ, ಶಂಕರನಾರಾಯಣ, ಕುಂಭಾಶಿ, ಕೌಡೂರು ಮಹಾಲಿಂಗೇಶ್ವರ, ಬೆಲ್ಲರ್ಪಾಡಿ ರಥ... ಹೀಗೆ ಕರಾವಳಿಯಲ್ಲಿ ಸಾಲು ಸಾಲು ದೇವಸ್ಥಾನಗಳಲ್ಲಿ ಉತ್ಸವಾದಿಗಳು ನಡೆಯುತ್ತವೆ. ಮಂಗಳೂರು, ಕಾಸರಗೋಡು ಭಾಗದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದವರು ಧನರ್ಮಾಸದಲ್ಲಿ ಖಿಚಡಿ ಮತ್ತು ಉದ್ದು ಅಕ್ಕಿ ಹಾಕಿದ ದೋಸೆ ಮಾಡುತ್ತಾರೆ. ದೇವಸ್ಥಾನಗಳಲ್ಲಿ ಇದನ್ನು ದೇವರಿಗೆ ನೈವೇದ್ಯ ಮಾಡುವ ಕ್ರಮ ಇದೆ. ಕರಾವಳಿಯಲ್ಲಿ ಋತುವಿನಲ್ಲಿ ಬೆಲ್ಲ, ತೆಂಗಿನಕಾಯಿ, ಹೆಸರುಬೇಳೆ ಇತ್ಯಾದಿ ಅಂಶಗಳ ತಿನಿಸುಗಳಿಗೆ ಪ್ರಾಶಸ್ತ್ಯವಿದೆ.
ಸಂಕ್ರಾಂತಿಯನ್ನು ಧಾರ್ಮಿಕ ಹಿನ್ನೆಲೆಯಿಂದ ನೋಡುವುದಾದರೆ...
ಈಗಾಗಲೆ ಹೇಳಿದ ಹಾಗೆ, ಇದು ಉತ್ತರಾಯಣ ಆರಂಭವಾಗುವ ಪರ್ವಕಾಲ. ಪುಷ್ಯ ಮಾಸದಲ್ಲಿ ಬರುವ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲವೆಂದು ಕರೆಯುತ್ತಾರೆ. ಕೇವಲ ಬದುಕುವುದಕ್ಕೆ ಮಾತ್ರವಲ್ಲ ಸಾಯುವುದಕ್ಕೂ ಉತ್ತರಾಯಣ ಪುಣ್ಯಕಾಲ ಶ್ರೇಷ್ಠವೆಂದು ಹೇಳಲಾಗಿದೆ. ಅದಕ್ಕಾಗಿಯೇ ಮಹಾಭಾರತದಲ್ಲಿ ಪಿತಾಮಹ ಭೀಷ್ರುಮ ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು. ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು, ಉತ್ತರಾಯಣದಲ್ಲಿ ತೆರೆಯುತ್ತದೆ ಎನ್ನಲಾಗುತ್ತದೆ. ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಉತ್ತರಾಯಣ, ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠವಾಗಿದೆ ಎಂಬ ನಂಬಿಕೆಯಿದೆ. ಮಕರ ಸಂಕ್ರಾಂತಿಯಂದು ಹಗಲು ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು ಎಂಬ ನಂಬಿಕೆಗಳಿವೆ. ಸಂಕ್ರಾಂತಿ ಪುಣ್ಯ ಕಾಲದಲ್ಲಿ, ನದಿ ಸ್ನಾನ, ದೇವತೆಗಳಿಗೆ, ಪಿತೃಗಳಿಗೆ ತರ್ಪಣ, ಉಪವಾಸ, ಹೋಮ, ಜಪ, ದಾನಗಳಿಗೆ ಪ್ರಶಸ್ತವೆನಿಸಿದ್ದು, ವಿದ್ಯುಕ್ತವಾಗಿ ನಡೆಸಬೇಕಾದ ಕಾರ್ಯಗಳು ಎಂದು ಶಾಸ್ತ್ರಗಳು ಹೇಳುತ್ತವೆ. ದಿನ ಶ್ರೀರಾಮನು ರಾವಣನನ್ನು ಸಂಹರಿಸಿ ಸೀತೆಯನ್ನು ತಂದ ದಿನವೆಂದು ಹೇಳುತ್ತಾರೆ.  

ಆಧ್ಯಾತ್ಮಿಕವಾಗಿ ಮಾತ್ರವಲ್ಲ, ವೈಜ್ಞಾನಿಕವಾಗಿಯೂ ಮಕರ ಸಂಕ್ರಾಂತಿಗೆ ಉತ್ತಮ ಹಿನ್ನೆಲೆಯಿದೆ...

ನಾವು ಸಾಮಾನ್ಯವಾಗಿ ಸೂರ್ಯೋದಯ ಆಗುವುದು ಪೂರ್ವದಲ್ಲಿ ಮತ್ತು ಸೂರ್ಯಾಸ್ತಮಾನ ಆಗುವುದು ಪಶ್ಚಿಮದಲ್ಲಿ ಎಂದು ಹೇಳುವುದಾದರೂ, ಯಾವುದೇ ಸ್ಥಳದಲ್ಲಿ ಕರಾರುವಾಕ್ಕಾಗಿ ಪೂರ್ವದಲ್ಲೇ ಸೂರ್ಯೋದಯವಾಗುವುದು ಮತ್ತು ಪಶ್ಚಿಮದಲ್ಲೇ ಸೂರ್ಯಾಸ್ತಮಾನವಾಗುವುದು ವರ್ಷದಲ್ಲಿ ಎರಡೇ ದಿನಗಳಂದು. ದಿನಗಳನ್ನು ಈಕ್ವಿನಾಕ್ಸ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಡಿ.22 ಹಾಗೂ ಜೂ.21ರಂದು ಬದಲಾವಣೆಯ ದಿನಗಳು. ಅಂದು ಹಗಲಿರುಳುಗಳು ದಿನವನ್ನು ಸಮಪಾಲಾಗಿ, ಅಂದರೆ 12 ಗಂಟೆ ಹಗಲು, 12 ಗಂಟೆ ಸಮಾನವಾಗಿ ರಾತ್ರಿಯ ಅವಧಿ ಇರುತ್ತದೆ. ವರ್ಷದ ಉಳಿದ ದಿನಗಳಲ್ಲಿ ಹಗಲಿರುಳುಗಳ ಪಾಲು ಸಮವಾಗಿರುವುದಿಲ್ಲ. ಬೇಸಗೆಯಲ್ಲಿ ಹಗಲು ಹೆಚ್ಚು, ಇರುಳು ಕಮ್ಮಿ. ಚಳಿಗಾಲದಲ್ಲಿ ಹಗಲು ಕಮ್ಮಿ, ಇರುಳು ಹೆಚ್ಚು.
ಈಕ್ವಿನಾಕ್ಸ್ ದಿವಸಗಳ ಹೊರತಾಗಿ ಸೂರ್ಯನ ಉದಯ ಪೂರ್ವದ ಬಲಕ್ಕೆ (ಅಂದರೆ ಉತ್ತರಕ್ಕೆ) ಅಥವಾ ಎಡಕ್ಕೆ (ಅಂದರೆ ದಕ್ಷಿಣಕ್ಕೆ) ಆಗುತ್ತದೆ. ಚಳಿಗಾಲ (ಅಂದರೆ ಇರುಳಿನ ಪ್ರಮಾಣ)ಹೆಚ್ಚಾದಂತೆ ಸೂರ್ಯನ ಉದಯ ಹೆಚ್ಚು ದಕ್ಷಿಣ ದಿಕ್ಕಿಗೆ ಚಲಿಸುವುದು ಗೋಚರಿಸುತ್ತದೆ. ಕೊನೆಗೆ ಒಂದು ದಿನ ದಕ್ಷಿಣದ ತುತ್ತ ತುದಿಯ ಹಂತವನ್ನು ತಲುಪಿ, ಅಚಲವೆಂಬಂತೆ ಕಂಡು, ಮರುದಿನದಿಂದ ಸೂರ್ಯನ ಉದಯ ಮರಳಿ ವಿರುಧ್ಧ ದಿಕ್ಕಿನಲ್ಲಿ ಆಗುತ್ತಾ ಚಲಿಸುತ್ತದೆ. *ಅಂದರೆ ಸೂರ್ಯ ಇನ್ನು ದಕ್ಷಿಣ ದಿಕ್ಕಿನತ್ತದ ತನ್ನ ಚಲನವನ್ನು ನಿಲ್ಲಿಸಿ ಉತ್ತರಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ದಿನ ಉತ್ತರಾಯಣದ ದಿನ. ಇದು ಚಳಿಗಾಲ ಮುಗಿದು ಮುಂಬರುವ ಬೇಸಗೆಯ ಮುನ್ಸೂಚನೆ. ಡಿಸೆಂಬರ್ 22 ದಿನ ಸಂಭವಿಸುವುದಾದರು ಸಾಂಪ್ರದಾಯಿಕವಾಗಿ ಜನವರಿ ತಿಂಗಳ ನಡುವಿನಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸುತ್ತೇವೆ. ಇಲ್ಲಿಂದ ಸೂರ್ಯೋದಯ ಇನ್ನು ಆರು ತಿಂಗಳು ಉತ್ತರದ ದಿಕ್ಕಿನಲ್ಲಿ ಚಲಿಸುತ್ತಾ ನಡುವೆ ಮತ್ತೆ ಈಕ್ವಿನಾಕ್ಸ್ ನವನ್ನೂ ತಲುಪಿ, ಇನ್ನೂ ಅದೇ ದಿಕ್ಕಿನಲ್ಲಿ (ಉತ್ತರಕ್ಕೆ)ಚಲಿಸುತ್ತಾ ಹೋಗುತ್ತದೆ. ಸೂರ್ಯ ಇನ್ನು ಉತ್ತರ ದಿಕ್ಕಿನತ್ತದ ತನ್ನ ಚಲನೆಯನ್ನು ನಿಲ್ಲಿಸಿ ದಕ್ಷಿಣಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಇದು ದಕ್ಷಿಣಾಯಣದ ದಿನ. ದಿನವನ್ನು ಕರ್ಕಾಟಕ ಸಂಕ್ರಾಂತಿ ಎಂದು ಗುರುತಿಸುತ್ತಾರೆ. ಸುಮಾರು ಜೂನ್ 21 ದಿನ ಬರುತ್ತದೆ.


ಅನಾದಿ ಕಾಲದಿಂದ ನಡೆದುಕೊಂಡು ಬರುತ್ತಿರುವ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುವುದನ್ನೇ ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ, ಇದು ವೈಜ್ಞಾನಿಕ ಹಿನ್ನೆಲೆ. ಮಕರ ರಾಶಿಗೆ ಸೂರ್ಯನ ಪ್ರವೇಶವು ಇರುಳನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಕಾಲದಲ್ಲಿ ಸಸ್ಯಗಳ ಬೆಳವಣಿಗೆಗೂ ಸಹಕರಿಸುತ್ತದೆ. ವೇದಶಾಸ್ತ್ರದ ಪ್ರಕಾರ ಇದು ಮನಸ್ಸಿನ ಕಾರಿರುಳನ್ನು ಹೋಗಲಾಡಿಸಿ ಸ್ವ ಪ್ರಜ್ಞೆಯ ದಾರಿಯಾದ ಮೋಕ್ಷವನ್ನು ಹೊಂದಲು ಸಹಕಾರಿಯಾಗುತ್ತದೆ. ಆದುದರಿಂದಲೇ ಇದನ್ನು ಪುಣ್ಯ ಕಾಲವೆಂದು ಕರೆಯಲಾಗುತ್ತದೆ. ಎಳ್ಳು ಬೆಲ್ಲ ತಿನ್ನುವುದಕ್ಕೂ ವೈಜ್ಞಾನಿಕ ಹಿನ್ನೆಲೆಯಲ್ಲಿ  ಚಳಿಯ ಸಂದರ್ಭ ದೇಹಕ್ಕೆ ಅಗತ್ಯ ಅಂಶಗಳನ್ನು ಸೇವನೆ ಒದಗಿಸುತ್ತದೆ. ಚರ್ಮ ಒಡೆಯುವುದಕ್ಕೆ ಎಳ್ಳಿನ ತೈಲ ಹಾಗೂ ಬೆಲ್ಲದಿಂದ ಕಬ್ಬಿಣದ ಅಂಶ ಸಿಗುತ್ತದೆ ಎಂಬುದು ಇದರ ವೈಜ್ಞಾನಿಕ ಹಿನ್ನೆಲೆ.

.....
ಹೆಚ್ಚು ಬೆಳಕು ಹೆಚ್ಚು ಸಮೃದ್ಧಿ, ಹೆಚ್ಚು ಆಶಾವಾದದ ದಿನಗಳ ಉತ್ತರಾಯಣಕ್ಕೆ ಕಾಲಿಡುವ ಶುಭ ಸಂದರ್ಭ ಮಕರ ಸಂಕ್ರಾಂತಿ. ರಾವಿ ಬೆಳೆ ಸಮಯದಲ್ಲಿ ಕಟಾವಾಗಿ ಮನೆಯಲ್ಲಿ ಧಾನ್ಯ ಸಮೃದ್ಧಿಯಾಗಿ ತುಂಬಿರುತ್ತದೆ. ದನಕರುಗಳನ್ನು ಆರಾಮವಾಗಿ ಮೇಯಿಸಿಕೊಂಡು ಮನೆಗೆ ಬಂದ ಧಾನ್ಯ ಆನಂದವನ್ನು ಪಡೆದುಕೊಳ್ಳುವ ಹಬ್ಬವೂ ಹೌದು. ಸಮೃದ್ಧಿಯ ಕಾಲ, ಚಳಿಯ ಆಲಸ್ಯವನ್ನು ದೂರ ಮಾಡಿ ಹೊಸ ಜೀವನಕ್ಕೆ ಕಾಲಿಡುವ ಪರ್ವಕಾಲ ಇದು.
ಅಂದ ಹಾಗೆ.... ಹಬ್ಬಗಳು, ಪರ್ವಗಳು ಭಾಷಣಗಳಿಗೆ, ಓದಿಗೆ ಸೀಮಿತವಾಗದೆ ಅದೊಂದು ಅನುಭವವಾಗಲಿ ಎಂಬ ಸದಾಶಯ ಸದಾ ನಮ್ಮ ಜೊತೆಗಿಲ್ಲದಿದ್ದರೆ ಇಷ್ಟೊಂದು ಶ್ರೀಮಂತ ಆಚರಣೆಗಳು ಮುಂದೊಂದು ದಿವಸ ಇತಿಹಾಸದ ಕಥೆಗಳಂತೆ ಗೋಚರಿಸಿದರೆ ಆಶ್ಚರ್ಯವಿಲ್ಲ. ಹೌದು. ತಂತ್ರಜ್ಞಾನ ಬಹಳಷ್ಟು ಮಂದುವರಿದಿದೆ. ಅಂಗೈಯಲ್ಲಿರುವ ಮೊಬೈಲು ಮತ್ತು ಅದಕ್ಕೊಂದು ಅಂತರ್ಜಾಲ ಸಂಪರ್ಕ ಇದ್ದರೆ ಸಾಕು, ಇಡೀ ಜಗತ್ತನ್ನೇ ನಮ್ಮ ಅಂಗೈಲಿ ತೋರಿಸಿಕೊಡುತ್ತದೆ. ನಿಜ. ಆದರೆ, ತಂತ್ರಜ್ಞಾನ ಬದುಕನ್ನು ಯಾಂತ್ರಿಕಗೊಳಿಸುತ್ತಿದೆಯೇ, ಸ್ಥಿತಪ್ರಜ್ಞತೆಯನ್ನು ಹರಡುತ್ತಿದೆಯೇ ಎಂಬ ಆತಂಕವೂ ಇದೆ.
ಸಂಕ್ರಾಂತಿಯೆಂದರೆ ಎಳ್ಳು ಬೆಲ್ಲದ ಫೋಟೋಗಳನ್ನು ಸಾಮಾಜಿಕ ಜಾಲತಾಣದ ಸ್ಟೇಟಸ್ಸುಗಳಲ್ಲಿ, ಪ್ರೊಫೈಲ್ ಪಿಕ್ಚರುಗಳಲ್ಲಿ ಹಾಕಿ, ಮತ್ತೊಂದಿಷ್ಟು ಸಿದ್ಧಪಡಿಸಿದ ಶುಭ ಕೋರುವ ಸಂದೇಶಗಳನ್ನು ಅತ್ತಿಂದಿತ್ತ ಫಾರ್ವರ್ಡ್ ಮಾಡಿ ಮತ್ತದೇ ಬ್ರೌಸಿಂಗ್, ಚಾಟಿಂಗ್ ಗಳಲ್ಲಿ ಮುಳುಗಿದರೆ ಏನಿದೆ ಹಬ್ಬದ ಗಮ್ಮತ್ತು. ಹಬ್ಬವೆಂದರೆ ಅದು ಅನುಭೂತಿ... ನಾಲಗೆಗೆ ಎಳ್ಳು ಬೆಲ್ಲದ ಸವಿ, ಗದ್ದೆ, ಬಯಲಿನ ತಿಳಿ ಬಿಸಿಲು, ಅಂಗಳ, ಪೂಜಾ ಮಂದಿರಗಳಲ್ಲಿ ಮನೆ ಮಾಡಿರುವ ಸಂಭ್ರಮಗಳನ್ನು ಕಾಣಲು ಒಂದಷ್ಟು ಹೊತ್ತು ಆಫ್ ಲೈನ್ ಗಳಾಗಿ ಹಬ್ಬವನ್ನು ಆಚರಿಸಿ, ಹಬ್ಬದ ಅನುಭೂತಿಯನ್ನು ಆವಾಹಿಸಿಕೊಳ್ಳಿ. ಆನ್ ಲೈನ್ ಒಂದು ಜಗತ್ತು ಹೌದು. ಆದರೆ ಅದು ಅನುಭೂತಿಗಳನ್ನು ಕಟ್ಟಿಕೊಡುವುದಿಲ್ಲ. ಹಬ್ಬಗಳು ಮತ್ತೆ ಮತ್ತೆ ಅಂತಹ ಅನುಭೂತಿಯನ್ನು ಹೊಂದಲು ನೆಪಗಳೂ ಹೌದು. ಸಂಭ್ರಮಕ್ಕೆ ಕಾರಣವೂ ಹೌದು. ಯಾಂತ್ರಿಕತೆಯಿಂದ ಆಹ್ಲಾದಕತೆಗೆ ಮನಸ್ಸುಗಳನ್ನು ತೆರೆದುಕೊಳ್ಳುವಂಥ ಹುಮ್ಮಸ್ಸನ್ನು ಬಾರಿಯ ಮಕರ ಸಂಕ್ರಮಣ ದಯಪಾಲಿಸಲಿ. ಸಂಕ್ರಾಂತಿಯ ಸಂತೃಪ್ತಿ ಎಲ್ಲೆಡೆ ಮನೆ ಮಾಡಲಿ. ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ.

(ಕೃಪೆ: ಅಂತರ್ಜಾಲದಿಂದ ಸಂಗ್ರಹಿಸಿದ ಮಾಹಿತಿ ಹಾಗೂ ತಜ್ಞರ ಅಭಿಪ್ರಾಯಗಳ ಕ್ರೋಢೀಕರಣ.)

-
ಕೃಷ್ಣಮೋಹನ ತಲೆಂಗಳ.





No comments: